ಬಿಐಎಎಲ್‌ಗೆ ಅತಿ ವೇಗದ ರೈಲು ಬೇಡವೇ ಬೇಡ

7

ಬಿಐಎಎಲ್‌ಗೆ ಅತಿ ವೇಗದ ರೈಲು ಬೇಡವೇ ಬೇಡ

Published:
Updated:

ಎಚ್‌ಎಸ್‌ಆರ್‌ಎಲ್ ಜತೆಗೆ ‘ಅಬೈಡ್’ ಘಟಕವು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಸಲ್ಲಿಸಿದ ಇದೇ ಮಾದರಿಯ ಪ್ರಸ್ತಾವವನ್ನು ಪರಿಶೀಲಿಸಿದೆ. ಬಿಎಂಆರ್‌ಸಿಎಲ್ ನಗರದ ಪೂರ್ವ (ಬಯ್ಯಪ್ಪನಹಳ್ಳಿ), ಪಶ್ಚಿಮ (ಯಶವಂತಪುರ) ಮತ್ತು ಮಧ್ಯ (ಎಂ.ಜಿ ರಸ್ತೆ/ ಮಿನ್ಸ್ಕ್ ಚೌಕ) ಭಾಗದಿಂದ ವಿಮಾನ ನಿಲ್ದಾಣಕ್ಕೆ ಎಚ್‌ಎಸ್‌ಆರ್‌ಎಲ್ ಸಂಪರ್ಕ ಕಲ್ಪಿಸುವ ಪ್ರಸ್ತಾಪ ಇಟ್ಟಿತ್ತು.ವಿಮಾನ ನಿಲ್ದಾಣಕ್ಕೆ ಮೆಟ್ರೊ ವಿಸ್ತರಣೆ ಸಾಧ್ಯವಿಲ್ಲವೇ?

ನಗರದಲ್ಲಿ ಮೆಟ್ರೊ ಮಾರ್ಗವನ್ನು ಇನ್ನಷ್ಟು ವಿಸ್ತಾರವಾಗಿ ಅಭಿವೃದ್ಧಿಪಡಿಸುವ ಚಿಂತನೆಯಲ್ಲಿ ನಾವಿದ್ದೇವೆ. ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಅಥವಾ ಪೀಣ್ಯದಿಂದ ಪ್ರಯಾಣಿಕರು ಯಾವುದೇ ನಿಲ್ದಾಣದಲ್ಲಿ ಇಳಿದುಕೊಳ್ಳದೇ, ಸಾರಿಗೆ ಮಾದರಿಯನ್ನು ಬದಲಾಯಿಸದೇ ನೇರವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಕು ಎಂದಾದರೆ ಮೆಟ್ರೊ ಮಾರ್ಗವನ್ನೇ ವಿಸ್ತರಿಸಬೇಕು ಎಂಬುದು ಸಾಮಾನ್ಯ ಜ್ಞಾನ ಇರುವ ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಲ್ಲರು.ಮೆಟ್ರೊ ಕಾರ್ಯ ನಿರ್ವಹಿಸುವ ನಗರದ ಪ್ರತಿಯೊಂದು ಭಾಗದಲ್ಲಿಯೂ ಇರುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆರಾಮದಾಯಕವಾಗಿ ಮತ್ತು ಸುಲಭವಾಗಿ ಪ್ರಯಾಣಿಸಬೇಕಾದರೆ ಮೆಟ್ರೊ ಜಾಲವನ್ನೇ ವಿಮಾನ ನಿಲ್ದಾಣದವರೆಗೆ ವಿಸ್ತರಿಸುವುದು ಒಳ್ಳೆಯದು. ಅಲ್ಲದೇ ಆರ್ಥಿಕವಾಗಿಯೂ ಪ್ರಯಾಣಿಕರಿಗೆ ಇದು ಕೈಗೆಟುಕುವಂತಿರುತ್ತದೆ.ಮೆಟ್ರೊ ರೈಲು ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಪೀಣ್ಯ ಟರ್ಮಿನಲ್‌ಗಳಿಂದ ಅಗತ್ಯಕ್ಕೆ ಅನುಗುಣವಾಗಿ ಪ್ರತಿ ಗಂಟೆಗೊಮ್ಮೆ ಅಥವಾ ಅರ್ಧ ಗಂಟೆಗೊಮ್ಮೆ ವಿಮಾನನಿಲ್ದಾಣಕ್ಕೆ ಎಕ್ಸ್‌ಪ್ರೆಸ್ ಸೇವೆ ಕಲ್ಪಿಸಬೇಕು. ಇದರೊಂದಿಗೆ ಸಾಮಾನ್ಯ ಸೇವೆಯೂ ಇರಬೇಕು. ಆದರೆ ವಿಮಾನನಿಲ್ದಾಣದ ಎಕ್ಸ್‌ಪ್ರೆಸ್ ಮೆಟ್ರೊ ಸೇವೆ ನಿರ್ದಿಷ್ಟ ನಿಲ್ದಾಣಗಳಲ್ಲಿ ನಿಲುಗಡೆ ನೀಡುವಂತಿರಬೇಕು (ಟೋಕಿಯೊ ಮತ್ತು ಲಂಡನ್‌ನಲ್ಲಿರುವಂತೆ ಯಾವುದೇ ನಿಲ್ದಾಣದಲ್ಲಿಯೂ ನಿಲ್ಲದೇ). ಉದಾಹರಣೆಗೆ ಹೇಳುವುದಾದರೆ ಎಂ.ಜಿ. ರಸ್ತೆಯಿಂದ ಬಿಐಎಎಲ್‌ಗೆ ವೇಗವಾಗಿ ಚಲಿಸಬೇಕು. ಆದರೆ ಎಚ್‌ಎಸ್‌ಆರ್‌ಎಲ್‌ನಲ್ಲಿ ಪ್ರಸ್ತಾಪಿಸಿರುವಂತೆ ಹೆಬ್ಬಾಳ ಮತ್ತು ಯಲಹಂಕಗಳಲ್ಲಿ ಒಂದೆರಡು ನಿಲುಗಡೆ ನೀಡಬಹುದು.ಬಿಎಂಆರ್‌ಸಿಎಲ್ ಪ್ರಯಾಣಿಕ ಸ್ನೇಹಿ. ನಿಗಮದ ವಿಮಾನ ನಿಲ್ದಾಣದ ಎಕ್ಸ್‌ಪ್ರೆಸ್ ಸೇವೆ ಇಡೀ ಬೆಂಗಳೂರಿಗೆ ಲಾಭದಾಯಕವಾಗಲಿದ್ದು, ಆರ್ಥಿಕವಾಗಿ ಮಿತವ್ಯಯಕಾರಿಯಾಗಿದೆ. ಅಲ್ಲದೇ ಮೆಟ್ರೊ ಜಾಲದ ಸುತ್ತಮುತ್ತಲಿನ ಪ್ರದೇಶಗಳೂ ಅಭಿವೃದ್ಧಿಯಾಗಲಿವೆ. ಎಂ.ಜಿ. ರಸ್ತೆಯಿಂದ ಆರಂಭವಾಗುವ ಎಚ್‌ಎಸ್‌ಆರ್‌ಎಲ್ ಸೀಮಿತ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ. ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿರುವವರಿಗೆ ಇದರಿಂದ ಅನುಕೂಲವಾಗುವುದಿಲ್ಲ. ಅವರು ಎಂ.ಜಿ. ರಸ್ತೆಯನ್ನು ಮೊದಲು ತಲುಪಿ ಅಲ್ಲಿಂದ ಎಚ್‌ಎಸ್‌ಆರ್‌ಎಲ್‌ಗೆ ತಮ್ಮ ಪ್ರಯಾಣವನ್ನು ಬದಲಿಸಬೇಕು. ಹಾಗಾಗಿ ಮೆಟ್ರೊದ ಅಭಿವೃದ್ಧಿ ನಕಾಶೆ ವಿಸ್ತಾರ ಎನ್ನುವುದು ಸ್ಪಷ್ಟ.ಈಗ ಎಚ್‌ಎಸ್‌ಆರ್‌ಎಲ್‌ಗೆ ಬರೋಣ:

ವಿಮಾನನಿಲ್ದಾಣಕ್ಕೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವೇಗದ ರೈಲು ಸಂಪರ್ಕ ಅಗತ್ಯವಿದೆ ಎಂಬುದರಲ್ಲಿ  ಎರಡು ಮಾತಿಲ್ಲ. ಆದರೆ ಈಗಾಗಲೇ ಪ್ರಗತಿಯಲ್ಲಿರುವ ಮೆಟ್ರೊ ಜಾಲವನ್ನು ಬಿಐಎಎಲ್‌ಗೆ ವಿಸ್ತರಿಸಬೇಕೆ ಅಥವಾ ಎಚ್‌ಎಸ್‌ಆರ್‌ಎಲ್‌ನಲ್ಲಿ ಪ್ರಸ್ತಾಪಿಸಿರುವಂತೆ ಬೆಂಗಳೂರಿನ ಕೇಂದ್ರ ಭಾಗದಿಂದ ಪ್ರತ್ಯೇಕವಾದ ಮತ್ತು ನಿರ್ದಿಷ್ಟಪಡಿಸಿದ ಸಂಸ್ಥೆ ಅಥವಾ ಘಟಕವನ್ನು ಹೊಂದಬೇಕೆ ಎಂಬ ಪ್ರಶ್ನೆ ನನ್ನ ಮುಂದಿದೆ.ವಿಮಾನನಿಲ್ದಾಣಕ್ಕೆ ಮೆಟ್ರೊ ವಿಸ್ತರಣೆ ಮತ್ತು ಎಂ.ಜಿ. ರಸ್ತೆಯಿಂದ ಪ್ರತ್ಯೇಕ ಎಚ್‌ಎಸ್‌ಆರ್‌ಎಲ್ ಹೊಂದುವ ಕುರಿತು ತಾಂತ್ರಿಕ ಮತ್ತು ಆರ್ಥಿಕ ಲಾಭ ನಷ್ಟಗಳ ಲೆಕ್ಕಾಚಾರ, ತುಲನಾತ್ಮಕ ವಿಶ್ಲೇಷಣೆ ಅಥವಾ ಸಾರ್ವಜನಿಕ ಚರ್ಚೆ ಇದುವರೆಗೆ ನಡೆದಿಲ್ಲ.ಅಂತಹ ಅಧ್ಯಯನ ನಡೆಯದಿರುವುದರಿಂದ ಪರಿಪೂರ್ಣ ಮಾಹಿತಿಯೊಂದಿಗೆ ಮೆಟ್ರೊ ವಿಸ್ತರಣೆಯಾಗಬೇಕು ಅಥವಾ ಎಚ್‌ಎಸ್‌ಆರ್‌ಎಲ್ ಸಂಪರ್ಕವೇ ಬೇಕು ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ತನ್ನ ಜಾಲವನ್ನು ವಿಸ್ತರಿಸುವ ಕುರಿತು ಮೆಟ್ರೊ ಸಲ್ಲಿಸಿರುವ ಪ್ರಸ್ತಾವದ ಹಿನ್ನೆಲೆಯಲ್ಲಿ ಎಚ್‌ಎಸ್‌ಆರ್‌ಎಲ್‌ನ ಪ್ರಸ್ತಾಪವನ್ನು ಪರಿಶೀಲಿಸುವ ಅಗತ್ಯವಿದೆ.ಯಾವುದೇ ಅಂತಿಮ ನಿರ್ಧಾರಕ್ಕೂ ಎರಡೂ ಪ್ರಸ್ತಾವಗಳ ತುಲನಾತ್ಮಕ ತಾಂತ್ರಿಕ ಮತ್ತು ಆರ್ಥಿಕ ಲಾಭನಷ್ಟದ ಅಧ್ಯಯನದಲ್ಲಿ ಗ್ರಾಹಕರೇ ಕೇಂದ್ರಬಿಂದುವಾಗಿರಬೇಕು. ಆದರೆ ದುರದೃಷ್ಟವಶಾತ್ ಎಚ್‌ಎಸ್‌ಆರ್‌ಎಲ್ ಮತ್ತು ಮೆಟ್ರೊ ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಎರಡೂ ಸಂಸ್ಥೆಗಳೂ ತಮ್ಮದೇ ಆದ ರೀತಿಯಲ್ಲಿ ನಡೆಯಬೇಕೆಂದು ಬಯಸುತ್ತಿವೆ.ವಿಮಾನ ನಿಲ್ದಾಣಕ್ಕೆ ಮೆಟ್ರೊ ಜಾಲದ ವಿಸ್ತರಣೆ ಅಥವಾ ಎಂ.ಜಿ. ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕ ಎಚ್‌ಎಸ್‌ಆರ್‌ಎಲ್ ಸಂಪರ್ಕ ನಿರ್ಮಾಣ ಹೀಗೆ ಎರಡೂ ಆಯ್ಕೆಗಳಲ್ಲಿರುವ ಅನುಕೂಲಗಳು, ಅನಾನುಕೂಲಗಳ ತುಲನಾತ್ಮಕ ಅಧ್ಯಯನ ನಡೆದು ಕೆಲವೊಂದು ಸಲಹೆಗಳನ್ನು ನೀಡಿರುವ ಯಾವುದೇ ವರದಿಯನ್ನು ನಾನು ಗಮನಿಸಿಲ್ಲ. ನಮ್ಮ ಸರ್ಕಾರಿ ಯಂತ್ರದಲ್ಲಿರುವ ದೊಡ್ಡ ಸಮಸ್ಯೆಯನ್ನು ಇದು ಪ್ರತಿಬಿಂಬಿಸುತ್ತದೆ. ಸರ್ಕಾರದ ವಿವಿಧ ಇಲಾಖೆಗಳು ಯಾವುದೇ ಸಂದರ್ಭದಲ್ಲಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ಸಹಕಾರದಿಂದ ಕೆಲಸ ಮಾಡುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸಂಕುಚಿತ ಮನೋಭಾವದಿಂದ, ನಿರುತ್ಸಾಹದಿಂದ, ತಮ್ಮ ವಿಭಾಗಕ್ಕೆ ಮಾತ್ರ ಸಂಬಂಧಿಸಿದ ತಮ್ಮ ಇಲಾಖೆಯ ಯೋಜನೆಗಳಿಗಷ್ಟೇ ಸಂಬಂಧಿಸಿದ ಮತ್ತು ತಮ್ಮದೇ ರೀತಿ ನೀತಿಗಳಿಗೆ ಅನುಗುಣವಾಗಿ ಇಲಾಖೆಗಳು ಕೆಲಸ ಮಾಡುತ್ತವೆ.ಬೆಂಗಳೂರಿನಲ್ಲಿ ದಿನನಿತ್ಯದ ಆಗುಹೋಗುಗಳಲ್ಲಿಯೂ ನಾವಿದನ್ನು ಗಮನಿಸಬಹುದು. ಉದಾಹರಣೆಗೆ ಬಿಬಿಎಂಪಿ ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಜಲಮಂಡಳಿ/ ಬೆಸ್ಕಾಂ ಸಿಬ್ಬಂದಿ ಮುಲಾಜಿಲ್ಲದೇ ಅಗೆದು ಹಾಕುತ್ತಾರೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸಂಸ್ಥೆಗಳು ತಮ್ಮ ಅಭಿವೃದ್ಧಿ ಯೋಜನೆಗಳ ವಿವರಗಳನ್ನು ಪರಸ್ಪರ ಹಂಚಿಕೊಳ್ಳುವುದೇ ಇಲ್ಲ.‘ನರ್ಮ್’ ಅನ್ವಯ ಮೆಟ್ರೊಪಾಲಿಟನ್ ಯೋಜನಾ ಸಮಿತಿ ರಚಿಸುವುದು ಅಗತ್ಯ. ಈ ಸಮಿತಿಯ ಮೂಲಕ ಇಷ್ಟು ದೊಡ್ಡ ಪ್ರಮಾಣದ ಮತ್ತು ದೀರ್ಘಾವಧಿಯ ಯೋಜನೆ ಮತ್ತು ನಗರ ಅಭಿವೃದ್ಧಿ ವಿಷಯಗಳನ್ನು ನಿಭಾಯಿಸಲು ಸಾಧ್ಯ. ಆದರೆ ಇದಕ್ಕೆ ಪೂರಕವಾದ ಕಾಯ್ದೆಯನ್ನು ಕರ್ನಾಟಕ ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ಬೆಂಗಳೂರಿನ ವಿಸ್ತಾರ ಯೋಜನೆ ಮತ್ತು ಕ್ರಮಬದ್ಧ ಅಭಿವೃದ್ಧಿಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮೆಟ್ರೊಪಾಲಿಟನ್ ಯೋಜನಾ ಸಮಿತಿಗಿದೆ. ನಾವು ಈ ಸಮಿತಿಯನ್ನು ಹೊಂದುವವರೆಗೆ ಬೆಂಗಳೂರಿನ ಅಭಿವೃದ್ಧಿಗಾಗಿರುವ ಸರ್ಕಾರದ ವಿವಿಧ ಇಲಾಖೆಗಳ ನಡುವೆ ನಿರುತ್ಸಾಹ ಮತ್ತು ಅಸಹಕಾರ ಮುಂದುವರೆಯಲಿದೆ. ಇದರಿಂದಾಗಿ ನಗರದ ಅಭಿವೃದ್ಧಿಗಾಗಿ ಯೋಜನಾ ದೃಷ್ಟಿಕೋನದ ಕೊರತೆ ಕಾಣಿಸಲಿದೆ.ಈ ಎರಡು ಪ್ರಸ್ತಾವನೆಗಳಲ್ಲಿ ನಾವು ಪರಿಶೀಲನೆಗಾಗಿ ಕೈಗೆತ್ತಿಕೊಳ್ಳಬೇಕಾದ ಎರಡು ಪ್ರಮುಖ ಅಂಶಗಳು ಯಾವುವು?

ಅನುಕೂಲತೆ, ವೆಚ್ಚ ಮತ್ತು ವ್ಯಾಪ್ತಿ ಮತ್ತು ಪ್ರಯಾಣಿಕರ ಅನುಕೂಲತೆ.ಮೆಟ್ರೊ ಮತ್ತು ಎಚ್‌ಎಸ್‌ಆರ್‌ಎಲ್ ಹೀಗೆ ಎರಡು ವ್ಯವಸ್ಥೆಗಳನ್ನು ಇಟ್ಟುಕೊಂಡು ನಿರ್ದಿಷ್ಟ ನಿಲ್ದಾಣದಲ್ಲಿ (ಎಂಜಿ ರಸ್ತೆ) ಒಂದರಿಂದ (ಮೆಟ್ರೊ) ಇನ್ನೊಂದು ಮಾದರಿಗೆ (ಎಚ್‌ಎಸ್‌ಆರ್‌ಎಲ್) ಸಾರಿಗೆ ಸ್ವರೂಪವನ್ನು ಬದಲಿಸುವ ವ್ಯವಸ್ಥೆ ಪ್ರಯಾಣಿಕ ಸ್ನೇಹಿಯಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಈ ವ್ಯವಸ್ಥೆಯಿಂದಾಗಿ ಅನೇಕರು ವಿಮಾನ ನಿಲ್ದಾಣಕ್ಕೆ ಎಚ್‌ಎಸ್‌ಆರ್‌ಎಲ್‌ವನ್ನು ಬಳಸಿಕೊಳ್ಳದೇ ಪರ್ಯಾಯ ವ್ಯವಸ್ಥೆಯನ್ನು ನೆಚ್ಚಿಕೊಳ್ಳಲಿದ್ದಾರೆ.ಬೊಕ್ಕಸಕ್ಕೆ ಆಗುವ ವೆಚ್ಚ:

ಮೆಟ್ರೊ ಮತ್ತು ಎಚ್‌ಎಸ್‌ಆರ್‌ಎಲ್ ಆಯ್ಕೆಗಳನ್ನು ಪರಾಮರ್ಶಿಸುವಾಗ ಅದರಿಂದ ಬೊಕ್ಕಸಕ್ಕೆ ಆಗುವ ವೆಚ್ಚದ ಬಗ್ಗೆ ಮಹತ್ವ ನೀಡಬೇಕಾಗುತ್ತದೆ. ಎಚ್‌ಎಸ್‌ಆರ್‌ಎಲ್ ವ್ಯವಸ್ಥೆಯನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಡಿ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಇದಕ್ಕೆ ಉಚಿತವಾದ ಭೂಮಿ ಸಿಗುವ ಬಗ್ಗೆ ಅನುಮಾನಗಳಿವೆ. ಎಚ್‌ಎಸ್‌ಆರ್‌ಎಲ್‌ಗೆ ಖಾಸಗಿ ಸಂಸ್ಥೆಗಳು ಹಣಕಾಸು ನೆರವು ನೀಡಲಿವೆ ಎಂದಿದ್ದರೂ ಆ ಸಂಸ್ಥೆಗಳಿಗೆ ನಾವು ನೀಡಬೇಕಾದ ತೆರಿಗೆ ಕಡಿತಗಳು, ಕೊಡುಗೆಗಳು, ಭೂಮಿ ಖರೀದಿಯ ಮೇಲಾಗುವ ವೆಚ್ಚ ಇತ್ಯಾದಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಡಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದಲ್ಲಾದ ತಪ್ಪುಗಳಿಂದ ನಾವು ಕಲಿಯಬೇಕಾಗಿದೆ. ವಿಮಾನ ನಿಲ್ದಾಣ ನಮ್ಮ ಅಂದಾಜಿನ ಸಾಮರ್ಥ್ಯ ಮತ್ತು ಗುಣಮಟ್ಟ ಎರಡರಲ್ಲಿಯೂ ಹಿಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಮೆಟ್ರೊ ರೈಲಿನ ವಿಸ್ತರಣೆಯಲ್ಲಾಗುವ ವೆಚ್ಚವನ್ನು ನಾವು ಎಚ್‌ಎಸ್‌ಆರ್‌ಎಲ್‌ನ ಪ್ರಸ್ತಾಪದಲ್ಲಿರುವ ಅನುದಾನ, ಭೂಮಿ ಖರೀದಿ ಇತ್ಯಾದಿಗಳ ಮೇಲಾಗುವ ವೆಚ್ಚಗಳ ಹಿನ್ನೆಲೆಯಲ್ಲಿ ನೋಡಬೇಕು. ಒಂದೊಮ್ಮೆ ಎಚ್‌ಎಸ್‌ಆರ್‌ಎಲ್‌ನಲ್ಲಿ ಈ ಎಲ್ಲವೂ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ ಎಂದಾದರೆ ನಾವು ಎಚ್‌ಎಸ್‌ಆರ್‌ಎಲ್ ವ್ಯವಸ್ಥೆಯನ್ನೇ ಆಯ್ಕೆ ಮಾಡಿಕೊಳ್ಳಬಹುದು.ವ್ಯಾಪ್ತಿ ಪ್ರದೇಶ:

ಮೆಟ್ರೊ ಮತ್ತು ವಿಮಾನನಿಲ್ದಾಣದ ಸಂಪರ್ಕದಿಂದಾಗಿ ನಗರದಲ್ಲಿ ಮೆಟ್ರೊ ಬಳಸುವ ಎಲ್ಲ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ. ಆದರೆ ಎಚ್‌ಎಸ್‌ಆರ್‌ಎಲ್‌ನಿಂದ ಕೇಂದ್ರ ಭಾಗದ ಸುತ್ತಮುತ್ತಲ ಜನರಿಗೆ ಮಾತ್ರ ಲಾಭವಾಗಲಿದೆ.ಒಟ್ಟಾರೆ ಸಾರಾಂಶ:

ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ ಅಗತ್ಯ ಮತ್ತು ಜನರ ಬಯಕೆಯೂ ಹೌದು. ಆದರೆ ಅದಕ್ಕೆ ಒಳ್ಳೆಯ ಆಯ್ಕೆ ಯಾವುದು ಎಂಬ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಬೇಕು. ನಾವು ತುಲನಾತ್ಮಕ ಅಧ್ಯಯನ ಮತ್ತು ವೆಚ್ಚದ ಪರಾಮರ್ಶೆ ನಡೆಸಿದರೆ ಮಾತ್ರವೇ ಫಲಿತಾಂಶ ಹೊರಬೀಳುತ್ತದೆ. ಯಾರಿಗೆ ಗೊತ್ತು, ನಮಗೆ ನಗರದ ಪೂರ್ವ ಮತ್ತು ಪಶ್ಚಿಮ ಭಾಗದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೊ ವಿಸ್ತರಣೆ ಮತ್ತು ಎಚ್‌ಎಸ್‌ಆರ್‌ಎಲ್ ಎರಡೂ ಪ್ರಸ್ತಾವನೆಗಳು ಅನುಕೂಲವಾಗಬಹುದು.ನಾವು ಹಿಂದೆ ಬಹಳಷ್ಟು ಬಾರಿ ತಾತ್ಕಾಲಿಕ ಸಾರಿಗೆ ಮತ್ತು ನಗರ ಯೋಜನೆ, ಸರ್ಕಾರಿ- ಖಾಸಗಿ ಸಹಭಾಗಿತ್ವ ಇತ್ಯಾದಿ ಪ್ರಯೋಗಗಳನ್ನು ನಡೆಸಿದ್ದೇವೆ. ಆದರೆ ಅವುಗಳಿಂದ ನಮಗೆ ಒಂದೋ ಕಳಪೆ ಗುಣಮಟ್ಟದ, ಕಡಿಮೆ ಸಾಮರ್ಥ್ಯದ ವಿಮಾನ ನಿಲ್ದಾಣ ಸಿಕ್ಕಿದೆ ಅಥವಾ ಅತ್ಯಂತ ವಿವಾದದ ನೈಸ್ ಕಾರಿಡಾರ್ ದೊರಕಿದೆ. ಈ ಬಾರಿಯಾದರೂ ನಾವು ಸಮರ್ಪಕವಾದ ಯೋಜನೆ ರೂಪಿಸೋಣ.ನಾಳಿನ ಸಂಚಿಕೆಯಲ್ಲಿ ‘ಅಬೈಡ್’ ಸದಸ್ಯರ ವಿರೋಧ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry