ಭಾನುವಾರ, ಏಪ್ರಿಲ್ 18, 2021
29 °C

ಬಿಕರಿಯಾಗುತ್ತಿದೆ ಹಂಚಿನ ಕಾರ್ಖಾನೆ

ಪ್ರಜಾವಾಣಿ ವಾರ್ತೆ ಎಂ.ಜಿ.ಹೆಗಡೆ Updated:

ಅಕ್ಷರ ಗಾತ್ರ : | |

ಬಿಕರಿಯಾಗುತ್ತಿದೆ ಹಂಚಿನ ಕಾರ್ಖಾನೆ

ಹೊನ್ನಾವರ: ಕೆಲವೇ ವರ್ಷಗಳ ಹಿಂದೆ ಸಾವಿರಾರು ಕಾರ್ಮಿಕರಿಂದ ಗಿಜಿಗುಡುತ್ತಿದ್ದ ಸುಂದರ ಮಾವಿನಕುರ್ವ ದ್ವೀಪದಲ್ಲಿರುವ ಶಾರದಾ ಹಂಚಿನ ಕಾರ್ಖಾನೆಯ ಪ್ರದೇಶದ್ಲ್ಲಲೀಗ ಯುದ್ಧಾನಂತರದ ಪರಿಸ್ಥಿತಿ. ಈಗ ಇಡೀ ದಿನ ಕೆಲಸ ನಡೆಯುತ್ತದೆ. ಆದರೆ ಅದು ಕಟ್ಟುವ ಕೆಲಸವಲ್ಲ, ಕೆಡವುವ ಕೆಲಸ. ಕಾರ್ಖಾನೆಯ ಕಟ್ಟಿಗೆಗಳು, ಯಂತ್ರಗಳು ಅಷ್ಟೇ ಏಕೆ ಕಟ್ಟಡದ ಇಟ್ಟಂಗಿಗಳು ಸಹ ಅಕ್ಷರಶಃ ಬಿಕರಿಯಾಗುತ್ತಿವೆ.1971ರಲ್ಲಿ ಮಣಿಪಾಲ್ ಗ್ರೂಪ್‌ನಿಂದ ಸ್ಥಾಪಿಸಲ್ಪಟ್ಟ ಶಾರದಾ ಹಂಚಿನ ಕಾರ್ಖಾನೆಯಲ್ಲಿ ಸ್ಥಳೀಯರನೇಕರು ಉದ್ಯೋಗ ಕಂಡುಕೊಂಡಿದ್ದರು. ಹೆಚ್ಚಿನ ಮಹಿಳೆಯರ ಸಬಲೀಕರಣದ ಕನಸು ನನಸಾಗಿತ್ತು. ದಿನನಿತ್ಯ ವಿವಿಧ ಗುಣಮಟ್ಟದ ಸಹಸ್ರಾರು ಹಂಚುಗಳು ಕಾರ್ಖಾನೆಯಲ್ಲಿ ಅಚ್ಚಾಗುತ್ತಿದ್ದವು. ಕೇವಲ ಕೃಷಿ ಹಾಗೂ ಕೃಷಿ ಕೂಲಿಯನ್ನಷ್ಟೇ ಈ ಮೊದಲು ನೆಚ್ಚಿಕೊಂಡಿದ್ದ ಸ್ಥಳೀಯ ಆರ್ಥಿಕ ಸ್ಥಿತಿ ಚೇತರಿಕೆ ಕಂಡಿತ್ತು.ಅದರೆ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿಲ್ಲ. ಕಾರ್ಖಾನೆ ಲಾಭದಿಂದ ನಷ್ಟದ ಕಡೆಗೆ ಹೊರಳಿತು. ಉಳಿದ ಹಂಚು ಕಾರ್ಖಾನೆಗಳ ಪೈಪೋಟಿ, ಕಳಪೆ ಗುಣಮಟ್ಟದ ಹಂಚುಗಳು, ವೇತನ ಹೆಚ್ಚಳಕ್ಕಾಗಿ ಕಾರ್ಮಿಕರಿಂದ ಆಗಾಗ ನಡೆದ ಮುಷ್ಕರ, ಆರ್‌ಸಿಸಿ ಮನೆಗಳ ನಿರ್ಮಾಣ ಹೆಚ್ಚಳದಿಂದ ಹಂಚಿನ ಬೆಡಿಕೆ ಕುಸಿದಿದ್ದು, ಅಧಿಕ ಲಾಭ ತರದ ಹಂಚು ಉದ್ಯಮದ ಪುನಃಶ್ಚೇತನಕ್ಕೆ ಮಾಲೀಕ ವರ್ಗ ತೋರಿದ ನಿರಾಸಕ್ತಿ ಮೊದಲಾದವು ಕಾರ್ಖಾನೆ ಅವನತಿಯ ಹಾದಿ ಹಿಡಿಯಲು ಕಾರಣಗಳೆನ್ನಲಾಗಿದೆ.ಕಳೆದ 40 ವರ್ಷಗಳಲ್ಲಿ ಕಾರ್ಖಾನೆಯ ಮಾಲೀಕತ್ವ ಬದಲಾಗುತ್ತ ಸಾಗಿದ್ದು ಇದೀಗ ಮೈಸೂರಿನ ಸಮೀರ (ಮುನ್ನಾ) ಎನ್ನುವವರಿಗೆ ಕಾರ್ಖಾನೆಯ ಚರ ಹಾಗೂ ಸ್ಥಿರಾಸ್ಥಿಗಳು ಸೇರಿವೆಯೆನ್ನಲಾಗಿದೆ. `ಈಗಿನ ಕಟ್ಟಡವನ್ನು ಕೆಡವಿ ಇಲ್ಲಿ ಮೀನು ಆಹಾರ ತಯಾರಿಕೆಗೆ ಸಂಬಂಧಿಸಿದ ಹೊಸ ಉದ್ಯಮ ಆರಂಭಿಸಲಾಗುವುದು. ಸುಮಾರು 400 ಸ್ಥಳೀಯರಿಗೆ ಇದರಲ್ಲಿ ಉದ್ಯೋಗ ನೀಡಲಾಗುವುದು~ ಎಂದು ಮುನ್ನಾ ಹೇಳುತ್ತಾರೆ.ಆದರೆ ಉದ್ಯೋಗ ಕಳೆದುಕೊಂಡಿರುವ ಕೆಲ ಸ್ಥಳೀಯರು ಹೊಸ ಉದ್ದಿಮೆ ಆರಂಭಿಸುವ ಆಶ್ವಾಸನೆಯನ್ನು ನಂಬುತ್ತಿಲ್ಲ. `ಕಟ್ಟಡ ತೆರವುಗೊಳಿಸುವವರೆಗೆ ಮಾತ್ರ ಈ ಆಶ್ವಾಸನೆ. ನಂತರ 14 ಎಕ್ರೆಯಷ್ಟಿರುವ ಈ ಭೂಮಿ ಮತ್ತ್ಯಾರದೋ ವಶವಾಗುತ್ತದೆ. ಕಟ್ಟಡ ಕಟ್ಟಲು,ಕೆಡವಲು ಬೇಕಾದಾಗ ನಿರಾಪೇಕ್ಷಣೆ ಪತ್ರ ನೀಡುತ್ತಿರುವ ಸ್ಥಳೀಯ ಪಂಚಾಯಿತಿಯ ಕ್ರಮ ಸಂಶಯಕ್ಕೆಡೆ ಮಾಡಿಕೊಟ್ಟಿದೆ~ ಎಂದು ಸ್ಥಳೀಯರಾದ ಮಂಜುನಾಥ ನಾಯ್ಕ ಹೇಳಿದರು.ಆದರೆ ಹಂಚು ಉದ್ಯಮದ ದುಸ್ಥಿತಿ ಮಾವಿನಕುರ್ವಕ್ಕಷ್ಟೇ ಸೀಮಿತವಾಗಿಲ್ಲ. ಸಹಕಾರ ಕ್ಷೇತ್ರದ ಆಶಾತಾರೆಯಂತೆ ಉದಯಿಸಿದ್ದ ಸಮೀಪದ ಕಾಸರಕೋಡ ಹಂಚಿನ ಕಾರ್ಖಾನೆ ಮುಚ್ಚಿ ವರ್ಷಗಳೇ ಸಂದಿವೆ. ಬಾಗಿಲು ಮುಚ್ಚಿರುವ ಕಾರ್ಖಾನೆ ಪುನಃ ಆರಂಭವಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಹಳೆಯ ಕಾರ್ಖಾನೆಗಳಿಗೆ ಹೊಸ ಕಾಯಕಲ್ಪ ಕೊಡುವ ಕಾಳಜಿ, ಸಾಮರ್ಥ್ಯ ಇಂದಿನ ರಾಜಕೀಯ, ಸಹಕಾರಿ ಮುಖಂಡರೆನಿಸಿಕೊಂಡವರಿಗೆ ಇದ್ದಂತಿಲ್ಲ. ಈ ಕಟ್ಟಡ ಒಡೆಯುವುದು ಯಾವಾಗ, ಸೆಕೆಂಡ್ ಹ್ಯಾಂಡ್ ಮಾರಾಟದಲ್ಲಿ ನಾನೆಷ್ಟು ಲಾಭ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಕೆಲವರು ಮುಳುಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.