ಶನಿವಾರ, ಅಕ್ಟೋಬರ್ 19, 2019
28 °C

ಬಿಕ್ಕಟ್ಟು ನಿವಾರಣೆಗೆ ಮುಂದಾದ ಆರ್‌ಎಸ್‌ಎಸ್

Published:
Updated:

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಣೆಗೆ ಆರ್‌ಎಸ್‌ಎಸ್ ಮಧ್ಯಪ್ರವೇಶ ಮಾಡಿದ್ದು, ಒಂದೆರಡು ದಿನಗಳಲ್ಲಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಆರ್‌ಎಸ್‌ಎಸ್ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲು ಹೈಕಮಾಂಡ್ ಮೇಲೆ ಒತ್ತಡ ತಂತ್ರ ಅನುಸರಿಸುತ್ತಿರುವುದು, ಅವರಿಗೆ ನಿಷ್ಠರಾಗಿರುವ ಕೆಲ ಸಚಿವರು, ಶಾಸಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿರುವುದನ್ನು ಆರ್‌ಎಸ್‌ಎಸ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿದ ವರದಿಯಲ್ಲಿ ಯಡಿಯೂರಪ್ಪ ಅವರ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ವರಿಷ್ಠರು ಅವರ ರಾಜೀನಾಮೆ ಪಡೆದರು. ಇದಲ್ಲದೆ ಅವರ ವಿರುದ್ಧ ಹಲವಾರು ಆರೋಪಗಳು ಇವೆ. ನ್ಯಾಯಾಲಯದಲ್ಲಿರುವ ಪ್ರಕರಣಗಳು ಇತ್ಯರ್ಥವಾಗುವವರೆಗೂ ಕಾಯದೆ ಮತ್ತೆ ಮುಖ್ಯಮಂತ್ರಿ ಮಾಡುವಂತೆ ಹೈಕಮಾಂಡ್‌ಗೆ ಗಡುವು ನೀಡಲು ಮುಂದಾಗಿರುವ ಯಡಿಯೂರಪ್ಪ ವಿರುದ್ಧ ಆರ್‌ಎಸ್‌ಎಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ಆರೋಪ ಮಾಡಿರುವುದಕ್ಕೆ ಆರ್‌ಎಸ್‌ಎಸ್ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಆರೋಪ- ಪ್ರತ್ಯಾರೋಪಗಳಿಂದ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ತೀರ್ಮಾನಕ್ಕೆ ಬಂದಿರುವ ಸಂಘ ಪರಿವಾರದ ನಾಯಕರು ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.ಯಡಿಯೂರಪ್ಪ, ಈಶ್ವರಪ್ಪ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಪಕ್ಷದ ಹಿರಿಯ ಮುಖಂಡರನ್ನು ಕರೆಸಿ ಮಾತುಕತೆ ನಡೆಸುವ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಆರ್‌ಎಸ್‌ಎಸ್‌ನ ಕೆಲ ನಾಯಕರು ಸಮಾಲೋಚನೆ ನಡೆಸಿದರು. ಬುಧವಾರ ಅಥವಾ ಗುರುವಾರ ಪ್ರಮುಖರ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

Post Comments (+)