ಬುಧವಾರ, ಏಪ್ರಿಲ್ 21, 2021
29 °C

ಬಿಕ್ಕಟ್ಟು ಶೀಘ್ರ ಇತ್ಯರ್ಥ, ಸಂಸದೀಯ ಮಂಡಳಿ ತೀರ್ಮಾನಕ್ಕೆ ಎಲ್ಲರೂ ಬದ್ಧ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಜ್ಯದಲ್ಲಿನ ಪ್ರಸ್ತುತ ಬಿಕ್ಕಟ್ಟಿಗೆ ಶೀಘ್ರದಲ್ಲೇ ಪರಿಹಾರ ಲಭಿಸುವ ಬಗ್ಗೆ ಪಕ್ಷವು ಭರವಸೆಯಿಂದಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಮಂಗಳವಾರ ಇಲ್ಲಿ ಹೇಳಿದರು.ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪಕ್ಷದ ಸಂಸದೀಯ ಮಂಡಳಿಯು ಕೈಗೊಳ್ಳುವ ನಿರ್ಧಾರವು ಉಭಯ ಬಣಗಳಿಗೂ ಸ್ವೀಕಾರಾರ್ಹವಾಗಿರುತ್ತದೆ ಮತ್ತು ಎಲ್ಲರೂ ಅದಕ್ಕೆ ಬದ್ಧರಾಗಿರುತ್ತಾರೆ ಎಂದೂ ಅವರು ನುಡಿದರು.ಈಮಧ್ಯೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಭಿನ್ನಾಭಿಪ್ರಾಯ ಬಗೆ ಹರಿಸಲು ಕರ್ನಾಟಕದ ಪ್ರಮುಖರ ಗುಂಪು, ಬಿ.ಎಸ್. ಯಡಿಯೂರಪ್ಪ ಮತ್ತು ಸದಾನಂದ ಗೌಡ ಶಿಬಿರಗಳ ನಾಯಕರ ಸಭೆ ಕರೆಯಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.ಕನಿಷ್ಠ ಜುಲೈ 19ರಂದು ರಾಷ್ಟ್ರಪತಿ ಚುನಾವಣೆ ಮುಗಿಯುವವರೆಗಾದರೂ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆಯಾಗಿರುವ ಬಿಜೆಪಿ ಸಂಸದೀಯ ಮಂಡಳಿಯು ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ಅದು ಕೈಗೊಳ್ಳುವ ಯಾವುದೇ ನಿರ್ಣಯಕ್ಕೆ ನಾವೆಲ್ಲರೂ ಬದ್ಧ~ ಎಂದು ಈಶ್ವರಪ್ಪ ಇಲ್ಲಿ ಪಿಟಿಐಗೆ ತಿಳಿಸಿದರು.ಬಿಜೆಪಿ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ನಿವಾರಿಸಲಾಗದ್ದೇನೂ ಅಲ್ಲ, ಅವುಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ಅವರು ನುಡಿದರು.ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಬೇಡಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಪಕ್ಷವು ನೀಡಿದ ಭರವಸೆಯನ್ನು ಅನುಸರಿಸಿ ರಾಜ್ಯ ಸಚಿವ ಸಂಪುಟದ 9 ಮಂದಿ ಭಿನ್ನಮತೀಯ ಸಚಿವರು ಸೋಮವಾರ ತಮ್ಮ ರಾಜೀನಾಮೆಗಳನ್ನು ಹಿಂದಕ್ಕೆ ಪಡೆದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.