ಬಿಗುವಿನ ವಾತಾವರಣ: ಲಾಠಿ ಪ್ರಹಾರ

7

ಬಿಗುವಿನ ವಾತಾವರಣ: ಲಾಠಿ ಪ್ರಹಾರ

Published:
Updated:

ಸೋಮವಾರಪೇಟೆ: ಸುಜಾ ಕುಶಾಲಪ್ಪ ಮೇಲಿನ ಗುಂಡಿನ ದಾಳಿಯನ್ನು ಖಂಡಿಸಿ ಶುಕ್ರವಾರ ಬಿಜೆಪಿ ಕರೆ ನೀಡಿದ್ದ ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಸಮೀಪದ ಕಾಗಡಿಕಟ್ಟೆಯಲ್ಲಿ ಒಂದು ಕೋಮಿಗೆ ಸೇರಿದ ಅಂಗಡಿಗಳ ಮೇಲೆ ಹಿಂದೂ ಪರ ಸಂಘಟನೆಗಳು ದಾಳಿ ನಡೆಸಿ, ಹಲ್ಲೆಗೆ ಮುಂದಾದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.ಬಂದ್‌ ವೇಳೆ ಒಂದು ಕೋಮಿಗೆ ಸೇರಿದ ಕೆಲವರು ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದ್ದರು. ಇದರಿಂದ ಕುಪಿತರಾದ ಪ್ರತಿಭಟನಾಕಾರರು ಮೂರು ದಿನಸಿ ಅಂಗಡಿಗ ಹಾಗೂ ಒಂದು ಹೋಟೆಲ್‌ಗೆ ನುಗ್ಗಿ ಹಾನಿಪಡಿಸಿದರು. ದಿನಸಿ ಸಾಮಾನುಗಳನ್ನು ಹೊರಗೆ ಎಸೆದು ಒಬ್ಬನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.ಡಿವೈಎಸ್ಪಿ ನಾಗಪ್ಪ ನೇತೃತ್ವದಲ್ಲಿ ಪೊಲೀಸರು ಮಹಜರು ನಡೆಸುತ್ತಿದ್ದರು. ಅದೇ ಕಾಲಕ್ಕೆ ಸ್ಥಳಕ್ಕೆ ಬಂದ ಪ್ರತಿಭಟನಾಕಾರರು ತೆರೆದುಕೊಂಡ ಅಂಗಡಿಗಳ ಮೇಲೆ ಕಲ್ಲು ತೂರಿದರು. ಇದಕ್ಕೆ ವಿರುದ್ಧವಾಗಿ ಇನ್ನೊಂದು ಕೋಮಿನ ಯುವಕರು ಮಾರಕಾಸ್ತ್ರಗಳನ್ನು ಹಿಡಿದು ಜಗಳಕ್ಕೆ ನಿಂತರು. ಆಗ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚೆದುರಿಸಿದರು. ಕೆಲ ಪ್ರತಿಭಟನೆಕಾರರನ್ನು ಬಂಧಿಸಿದರು.ಒಂದು ಮೋಮಿನ 9 ಜನ ಹಾಗೂ ಇನ್ನೊಂದು ಕೋಮಿನ ಒಬ್ಬರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಕೂಡ ಇನ್ನೊಂದು ಕೋಮಿನ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.ಡಿವೈಎಸ್ಪಿ ನಾಗಪ್ಪ, ಸಿಪಿಐ ಪ್ರದೀಪ್, ಠಾಣಾಧಿಕಾರಿ ರವಿಕಿರಣ್, ಎಎಸ್ಐ ಬೆಳ್ಳಿಯಪ್ಪ ಹಾಗೂ ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.ಸರ್ಕಾರಿ ಕಚೇರಿಗಳು ಭಣಭಣ

ಸುಜಾ ಕುಶಾಲಪ್ಪ ಮೇಲೆ ಗುಂಡಿನ ದಾಳಿ ಖಂಡಿಸಿ ಪಟ್ಟಣದಲ್ಲಿ ಬಂದ್‌ ನಡೆಸಲಾಯಿತು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ಸರ್ಕಾರಿ ಕಚೇರಿಗಳು, ಸಿಬ್ಬಂದಿ ಕೊರತೆಯಿಂದ ಭಣಗುಡುತ್ತಿದ್ದವು.

ವಿವೇಕಾನಂದ ವೃತ್ತದ ಬಳಿ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ. ಸೋಮಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾ ನಿರ್ವಾಣಿ,  ಹಿಂದೂಪರ ಸಂಘಟನಗಳ ಮುಖಂಡರಾದ ಸುಭಾಸ್ ತಿಮ್ಮಯ್ಯ, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಮನುಕುಮಾರ್, ನಗರ ಬಿಜೆಪಿ ಅಧ್ಯಕ್ಷ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.ರಸ್ತೆಗಿಳಿಯದ ಸರ್ಕಾರಿ, ಖಾಸಗಿ ಬಸ್‌

ನಾಪೋಕ್ಲು: ಬಂದ್‌ನಿಂದಾಗಿ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ಬೆಳಿಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಜನರು ಓಡಾಡಲು ಸಮಸ್ಯೆ ಎದುರಿಸುವಂತಾಯಿತು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಮಕ್ಕಳಿಗೆ ತೊಂದರೆಯಾಗಲಿಲ್ಲ.ಘಟನೆಯನ್ನು ಖಂಡಿಸಿರುವ ನಾಪೋಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್‌ ಮುದ್ದಯ್ಯ, ಮಡಿಕೇರಿ ತಾಲ್ಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್‌, ಪದಾಧಿಕಾರಿಗಳಾದ ಕಂಗಾಂಡ ಜಾಲಿ ಪೂವಪ್ಪ, ಶಿವಚಾಳಿಯಂಡ ಜಗದೀಶ್‌, ಕೇಟೋಳಿರ ಹರೀಶ್‌ ಪೂವಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕುಟ್ಟಂಜೆಟ್ಟೀರ ಪೂಣಚ್ಚ, ಮತ್ತಿತರರು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.ಮೂರ್ನಾಡು, ಮರಗೋಡುವಿನಲ್ಲಿ ಬಂದ್ ಯಶಸ್ವಿಯಾಗಿ ನಡೆಯಿತು.

ಮೂರ್ನಾಡು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಕೆ. ಪೂವಪ್ಪ, ಮರಗೋಡು ಸ್ಥಾನೀಯ ಸಮಿತಿಯ ಅಧ್ಯಕ್ಷ ಕಾಂಗೀರ ಸತೀಶ್, ಕಾರ್ಯದರ್ಶಿ ಕೋಂಪುಳೀರ ಗಣೇಶ್ ಬೋಪಯ್ಯ, ಮಾಜಿ ಅಧ್ಯಕ್ಷ ಮುಂಡಂಡ ಕುಟ್ಟಪ್ಪ, ಆರ್.ಎಂ.ಸಿ. ಅಧ್ಯಕ್ಷ ಬೆಲ್ಲು ಸೋಮಯ್ಯ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry