ಭಾನುವಾರ, ಜೂಲೈ 12, 2020
22 °C

ಬಿಗ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಗ್ ಪ್ರಶಸ್ತಿ

ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಶಸ್ತಿಗಳ ಪಾತ್ರ ಬಹುಮುಖ್ಯ’ ಎಂದವರು ‘ಒಲವೇ ಮಂದಾರ’ ಚಿತ್ರದ ನಿರ್ದೇಶಕ ಜಯತೀರ್ಥ.

ಬಿಗ್ ಎಫ್‌ಎಂ ಮತ್ತು ಆರ್‌ಬಿಎನ್‌ಎಲ್ ಜಂಟಿಯಾಗಿ ಮನರಂಜನಾ ಕ್ಷೇತ್ರದ ಪ್ರತಿಭಾವಂತರನ್ನು ಆರಿಸಿ ಪ್ರಶಸ್ತಿ ನೀಡಲಿದೆ. ಅಂದು ಕಲಾವಿದರನ್ನು ಮತದಾನದ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಕಾರ್ಯಕ್ರಮ. ಅಲ್ಲಿ ಹಾಜರಿದ್ದ ಜಯತೀರ್ಥ ಮತದಾನ ಮಾಡಿ ಶುಭ ಹಾರೈಸಿದರು. ನಟಿ ಹರ್ಷಿಕಾ ಪೂಣಚ್ಚ, ನಟ ಶ್ರೀಕಾಂತ್, ಉಷಾ ದಾತಾರ್ ಮುಖ್ಯ ಅತಿಥಿಗಳಾಗಿ ಬಂದಿದ್ದರು.ಈ ಮೊದಲು ಧಾರಾವಾಹಿ ಕಲಾವಿದರಿಗೆ ಪ್ರಶಸ್ತಿ ನೀಡಿದ್ದ ಬಿಗ್ ಎಫ್‌ಎಂ ರೇಡಿಯೋ ಈ ವರ್ಷ ಸಿನಿಮಾ, ಸಂಗೀತ, ಕಿರುತೆರೆ, ನೃತ್ಯ, ರಂಗಭೂಮಿ ಹಾಗೂ ಕ್ರೀಡಾ ಕ್ಷೇತ್ರದ ಪ್ರತಿಭಾವಂತರಿಗೆ ಪ್ರಶಸ್ತಿ ನೀಡಲಿದೆ.ಇದು ಶ್ರೋತೃಗಳು ಆಯ್ಕೆ ಮಾಡಲಿರುವ ಪ್ರಶಸ್ತಿ ಎಂದ ನಿರೂಪಕರು, ಕೆಲವು ವಿಭಾಗಗಳಲ್ಲಿ ಮಾತ್ರ ತೀರ್ಪುಗಾರರು ಪ್ರತಿಭಾವಂತರನ್ನು ಆರಿಸಲಿದ್ದಾರೆ ಎಂದರು. ಹಿರಣ್ಣಯ್ಯ, ಪದ್ಮಿನಿ ರಾವ್, ಶ್ರೀನಾಥ್ ತೀರ್ಪುಗಾರರಾಗಿ ಕೆಲಸ ನಿರ್ವಹಿಸಲಿದ್ದಾರೆ.ಶ್ರೋತೃಗಳು 92.7 ಎಫ್‌ಎಂಗೆ ಕರೆ ಮಾಡಿ ಮತ ಚಲಾಯಿಸಬಹುದು. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕ, ಅತ್ಯುತ್ತಮ ನಟ- ನಟಿ, ಖಳನಾಯಕ, ಹಾಡು, ಸಿನಿಮಾ, ಹಿನ್ನೆಲೆ ಗಾಯಕ ಹಾಗೂ ಗಾಯಕಿ, ಸಂಗೀತ ನಿರ್ದೇಶಕ ಮುಂತಾದ ವಿಭಾಗಗಳಿವೆ.ಅತ್ಯುತ್ತಮ ಶಾಸ್ತ್ರೀಯ ಸಂಗೀತಗಾರ, ಶಾಸ್ತ್ರೀಯ ನೃತ್ಯಪಟು, ಸಂಗೀತ ವಾದಕ ಹಾಗೂ ರಂಗಭೂಮಿ ಕಲಾವಿದ, ಕಿರುತೆರೆ ನಿರೂಪಕ ಹೀಗೆ ವಿವಿಧ ವಿಭಾಗಗಳಲ್ಲಿ ಅಲ್ಲದೆ ಚರ್ಚಾ ಕಾರ್ಯಕ್ರಮ, ರಿಯಾಲಿಟಿ ಶೋ, ಅತ್ಯುತ್ತಮ ಕ್ರೀಡಾಪಟು ವಿಭಾಗಗಳಲ್ಲಿಯೂ ಪ್ರಶಸ್ತಿಗಳನ್ನು ನೀಡಲಿದ್ದಾರೆ.ಹರ್ಷಿಕಾ ‘ಎಲ್ಲರೂ ಗೆಲ್ಲಲಿ’ ಎಂದು ಹಾರೈಸಿದರೆ, ಉಷಾ ದಾರಾತ್ ‘ಶಾಸ್ತ್ರೀಯ ನೃತ್ಯ ಸಂಪ್ರದಾಯ ಕಡಿಮೆಯಾಗುತ್ತಿದೆ ಇಂಥ ಪ್ರಶಸ್ತಿಗಳಿಂದ ಉತ್ತೇಜನ ಸಿಗಬಹುದು’ ಎಂದು ಆಶಾವಾದ ವ್ಯಕ್ತಪಡಿಸಿದರು.‘ಪ್ರಶಸ್ತಿಗಳು ಪ್ರತಿಭೆ ಇರುವವರಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡುತ್ತವೆ’ ಎಂದು ನುಡಿದವರು ಶ್ರೀಕಾಂತ್. ಶ್ರೋತೃಗಳ ಮೂಲಕ ಮಾತ್ರವಲ್ಲದೇ ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ಬಿಗ್‌ಎಫ್‌ಎಂ ವಾಹನದ ಮೂಲಕ ತೆರಳಿ ಮತ ಪಡೆಯಲಾಗುತ್ತದೆ. ಇದೇ ಪ್ರಕ್ರಿಯೆ ಮೈಸೂರು ಮತ್ತು ಮಂಗಳೂರಿನಲ್ಲೂ ನಡೆಯಲಿದೆ ಎಂದ ನಿರೂಪಕರು, ತಮ್ಮ ರೇಡಿಯೋ ಜೊತೆ ಈ-ಟಿವಿ ಸಹಭಾಗಿತ್ವ ಇರುವುದರಿಂದ ಕರ್ನಾಟಕದಾದ್ಯಂತ ಮತದಾನ ಪಡೆಯುವ ಯೋಜನೆಯೂ ಇದೆ ಎಂದರು. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 23ರಂದು ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.