ಬಿಚ್ಚಲಾಗದ ಶೂ! ಆತ್ಮಗೌರವದ ಸಂಕೇತ?

7

ಬಿಚ್ಚಲಾಗದ ಶೂ! ಆತ್ಮಗೌರವದ ಸಂಕೇತ?

Published:
Updated:
ಬಿಚ್ಚಲಾಗದ ಶೂ! ಆತ್ಮಗೌರವದ ಸಂಕೇತ?

`ಕಾನೂನುಬದ್ಧ ಅಲ್ಲವಾದ್ದರಿಂದ ಬೂಟು ಬಿಚ್ಚಲಾರೆ~ ಎಂದು ನ್ಯಾಯಮೂರ್ತಿ ಜೊತೆ ವಾದ ಹೂಡುವ ವ್ಯಕ್ತಿಯೊಬ್ಬನ ಈ ಕಥನ 1862ರ ಏಪ್ರಿಲ್ 2ರಂದು `ಬಾಂಬೆ ಗೆಜೆಟ್~ ಎನ್ನುವ ಬ್ರಿಟಿಷ್ ಪರ ಪತ್ರಿಕೆಯಲ್ಲಿ ನಾಟಕೀಯವಾಗಿ ಪ್ರಕಟಗೊಂಡಿತ್ತು.ಈ ಘಟನೆಯನ್ನು ಕೇರಳದ ಚಿಂತಕ ಕೆ.ಎನ್.ಪಣಿಕ್ಕರ್ ಅವರು ತಮ್ಮ `ಕಲೋನಿಯಲ್, ಕಲ್ಚರ್ ಅಂಡ್ ರೆಸಿಸ್ಟೆನ್ಸ್~ ಕೃತಿಯಲ್ಲಿ ದಾಖಲಿಸಿ, ವಿಶ್ಲೇಷಿಸಿದ್ದಾರೆ. ಬ್ರಿಟಿಷ್ ಪ್ರಭುತ್ವದ ವಿರುದ್ಧ ಕಾನೂನುಬದ್ಧವಾಗಿಯೇ ತನ್ನ ಪ್ರತಿರೋಧವನ್ನು ತೋರುವ ಇಲ್ಲಿನ ಶ್ರೀಸಾಮಾನ್ಯನ ಅಂತರಂಗದಲ್ಲಿ ಉಜ್ವಲ ಸ್ವಾತಂತ್ರ್ಯಪ್ರೇಮ ಕಾಣಿಸುತ್ತದೆ. ಎದುರುಬೀಳದೆ, ಗಂಟಲನ್ನು ಹರಿಬಿಡದೆ, ಕಾನೂನನ್ನು ಉಲ್ಲಂಘಿಸದೆ, ವಿವೇಕ ಕಳೆದುಕೊಳ್ಳದೆ ಪ್ರತಿರೋಧ ತೋರುವ ಸಾವಧಾನದ ಮಾದರಿ ಇಲ್ಲಿಯದು.ಭ್ರಷ್ಟಾಚಾರ ರಾಜಕಾರಣದಲ್ಲಿ ಅನಿವಾರ್ಯ ಎಂದು ಜನಸಾಮಾನ್ಯರು ಮೌನವಾಗಿಯೇ ಅಂಗೀಕರಿಸಿರುವ ಹಾಗೂ ಸ್ವಾತಂತ್ರ್ಯದ ಅಂತರ್ಜಲದ ಬಗ್ಗೆ ನಕಾರಾತ್ಮಕ ಧೋರಣೆ ಬೆಳೆಸಿಕೊಂಡಿರುವ ವರ್ತಮಾನದ ಸಂದರ್ಭದಲ್ಲಿ `ಬಿಚ್ಚಲಾಗದ ಶೂ~ ಪ್ರಸಂಗ ಹಲವು ಅರ್ಥಗಳನ್ನು ಧ್ವನಿಸುತ್ತದೆ.-ಇದು, ಆಗಸ್ಟ್ 15ರ ಸ್ವಾತಂತ್ರ್ಯ ದಿನದ ವಿಶೇಷ.

1862 ಮಾರ್ಚ್ 2. ಸೂರತ್‌ನಗರದ ಕೋರ್ಟ್. ವಾರ್ಡನ್ ಎಂಬ ಸೆಷನ್ಸ್ `ಜಡ್ಜ್~ ಹಾಗೂ ಮನೋಕ್‌ಜೀ ಕೊವಾಸ್‌ಜೀ ಎಂಟೀ ಎಂಬ `ಕರ ನಿರ್ಧಾರಕ~ರ (ತೆರಿಗೆ ಗೊತ್ತುಪಡಿಸುವ ವ್ಯಕ್ತಿ) ನಡುವೆ ಒಂದು ಸುದೀರ್ಘ ವಾಗ್ವಾದ ನಡೆಯಿತು. ಅದು ಹೀಗಿದೆ:ಕೋರ್ಟ್ ಪೇದೆ: ನಿಲ್ಲಿ, ನಿಮ್ಮ ಬೂಟುಗಳನ್ನು ತೆಗೆದು ಬನ್ನಿ.

ಮನೋಕ್‌ಜೀ: ಅರೆ... ಆಗದು.

ಪೇದೆ: ಇಲ್ಲಿ ಎಲ್ಲರೂ ಬೂಟು ಕಳಚಿಟ್ಟೇ ಒಳಬರುವುದು.

ಮನೋಕ್‌ಜೀ: ನಿಮ್ಮ ಸಾಹೇಬರಿಗೆ ಹೇಳು, ನಾನು ತೆಗೆಯುವುದಿಲ್ಲ ಅಂತ.

ಜಡ್ಜ್‌ಗೆ ಶಿರಸ್ತೇದಾರ: ಆ ಪಾರಸೀ ಬೂಟು ತೆಗೆಯಲು ಒಲ್ಲೆ ಎನ್ನುತ್ತಿದ್ದಾರೆ.

ಜಡ್ಜ್: ಅವರು ಬೂಟನ್ನು ಬಿಚ್ಚಿಯೇ ಬರಬೇಕು. ಇಲ್ಲಿ ಎಲ್ಲರೂ ಹಾಗೆಯೇ ಮಾಡುವುದು.ಜಡ್ಜ್ (ಮನೋಕ್‌ಜೀ ಕಡೆ ನೋಡುತ್ತಾ): ಬನ್ನಿ... ಬೂಟು ಕಳಚಿ ಒಳಬನ್ನಿ.

ಮನೋಕ್‌ಜೀ: ಒಳ್ಳೆಯದು ಮಹಾಸ್ವಾಮಿ. ಆದರೆ, ಬೂಟು ತೆಗೆಯಲು ನನಗಿರುವ ತಕರಾರುಗಳನ್ನು ಮೊದಲು ಕೇಳಿಸಿಕೊಳ್ಳಿ. ಆಮೇಲೆ ನಿಮ್ಮ ತೀರ್ಮಾನ ಹೇಳಿ.

ಜಡ್ಜ್: ನೀನು ಜಗಳಗಂಟನಂತೆ ವಾದ ಮಾಡುವ ಹಾಗೆ ಕಾಣುತ್ತಿದೆ. ನಿನ್ನ ಮಾತನ್ನು ನಾನು ಕೇಳುವುದಿಲ್ಲ.ಮನೋಕ್‌ಜೀ: ಇಲ್ಲ ಮಹಾಸ್ವಾಮಿ, ಯಾವುದು ಕಾನೂನಿಗೆ ಬದ್ಧವಾಗಿರುತ್ತದೋ ಅದನ್ನು ಆಲಿಸಬೇಕು.ಜಡ್ಜ್: ಇದರಲ್ಲಿ ಕಾನೂನಿನ ವಿಷಯ ಏನೂ ಇಲ್ಲ. ಸುಮ್ಮನೆ ಕೋರ್ಟ್‌ನ ವಿಚಾರಣೆಗೆ ನೀನು ಅಡ್ಡಿಪಡಿಸುತ್ತಿದ್ದೀಯ. ಇದಕ್ಕಾಗಿ ನಿನಗೆ ತಕ್ಕ ಶಾಸ್ತಿಯಾಗುತ್ತದೆ.

ಮನೋಕ್‌ಜೀ: ಕೋರ್ಟ್‌ನ ಬಗ್ಗೆ ನನಗೂ ಗೌರವವಿದೆ. ಒಳಗೆ ಬರಲು ಅನುಮತಿ ಕೊಡಿ, ನನಗೆ ಸಂತೋಷವಾದೀತು.

ಜಡ್ಜ್: ಬೂಟು ಕಳಚಿಟ್ಟು ಒಳಗೆ ಬಾ.ಮನೋಕ್‌ಜೀ: ವ್ಯಕ್ತಿಯೊಬ್ಬ ತನ್ನ ಬರಿಗಾಲನ್ನು ತೋರಿಸುವುದು ಮಾನವನ ಘನತೆಗೆ ಕುಂದು ತರುವ ಸಂಗತಿ. ಅದು ನಮ್ಮ ಧರ್ಮಗ್ರಂಥ ಪ್ರತಿಪಾದಿಸುವ ತತ್ವಗಳಿಗೂ ವಿರುದ್ಧವಾದದ್ದು. ಕಾನೂನಿನ ಚೌಕಟ್ಟಿನಲ್ಲೇ ನಂಬಿದ ಧರ್ಮ, ತತ್ವವನ್ನು ಪಾಲಿಸಲು ನಾನು ಬದ್ಧ ಎಂದು ನಮ್ರತೆಯಿಂದ ಹೇಳುತ್ತಿದ್ದೇನೆ.ಜಡ್ಜ್: ಇಲ್ಲಿ ಅಂಥಾದ್ದೇನೂ ಇಲ್ಲ. ಸುಮ್ಮನೆ ಬೂಟು ತೆಗೆ. ಇಲ್ಲವಾದರೆ ಪರಿಸ್ಥಿತಿ ನೆಟ್ಟಗಾಗದು. ಸುಚೀನ್‌ನ ನವಾಬರೇ ಇಲ್ಲಿಗೆ ಬಂದಾಗ ಬೂಟು ತೆಗೆದರು. ನೀನ್ಯಾವ ಮಹಾ. ಅವರಿಗಿಂತ ನೀನು ದೊಡ್ಡವನೇನು?ಮನೋಕ್‌ಜೀ: ನಾನು ನಿಮ್ಮ ಆದೇಶಕ್ಕೆ ಸದಾ ತಲೆಬಾಗುತ್ತೇನೆ. ಆದರೆ, ಅದಕ್ಕೆ ಅಧಿಕೃತವಾದ ಯಾವುದಾದರೂ ಕಾನೂನಾತ್ಮಕ ಕಾರಣವಿರಬೇಕು.

ಜಡ್ಜ್: ಕಾನೂನು! ಇದು ಕಾನೂನಿನ ವಿಷಯವಲ್ಲ. ಇಲ್ಲಿ ಕಾನೂನುಗಳ ಬಗ್ಗೆ ಮಾತಾಡಬೇಡ.ಮನೋಕ್‌ಜೀ: ಯಾಕೆ ಮಾತನಾಡಬಾರದು? ಇದಲ್ಲದೆ ಕಾನೂನಾತ್ಮಕವಾಗಿ ನನ್ನದು ಇನ್ನೊಂದು ತಕರಾರೂಇದೆ. `ಅಪರಾಧ ಪ್ರಕ್ರಿಯಾ ಕಾಯ್ದೆ~ ಪ್ರಕಾರ ಕಂದಾಯ ಲೆಕ್ಕ ಹಾಕುವವರಿಗೆ ಮೂರು ದಿನ ಮುಂಚಿತವಾಗಿಯೇ ಸಮನ್ಸ್ ನೀಡಿ ಕರೆಸಬೇಕು. ಆದರೆ, ನನಗೆ ಅಂಥ ಯಾವುದೇ ಸಮನ್ಸ್ ಬಂದಿಲ್ಲ. ಕೋರ್ಟ್‌ನ ಪೇದೆಯೊಬ್ಬ ನೆನ್ನೆಯಷ್ಟೆ (ಭಾನುವಾರ) ಇಂದು ಕೋರ್ಟ್‌ಗೆ ಬರಬೇಕೆಂದು ತಿಳಿಸಿದ. ನಾನು ಯಾಕೆ ಬರಬೇಕು ಎಂದು ಕೂಡ ಹೇಳಲಿಲ್ಲ. ನಾನು ಅರ್ಥ ಮಾಡಿಕೊಂಡಿರುವುದು ಸರಿಯಾಗಿಯೇ ಇದ್ದಲ್ಲಿ, ಇಲ್ಲಿ ನನ್ನ ಹಾಜರಿ ಕಾನೂನುಬದ್ಧವಲ್ಲ. ಹಾಗಾಗಿ ಮಹಾಸ್ವಾಮಿಗಳು ನನ್ನನ್ನು ಮನ್ನಿಸಬೇಕು.ಜಡ್ಜ್: ಇಲ್ಲ. ನಿನಗೆ ಕಂದಾಯ ಲೆಕ್ಕ ಹಾಕುವುದು ಬೇಡವಾಗಿದೆ ಎಂದು ನನಗೆ ಗೊತ್ತು. ಅದಕ್ಕೇ ಹೀಗೆಲ್ಲಾ ಕೋರ್ಟನ್ನೇ ಕೆಣಕುವಂತೆ ಮಾತಾಡುತ್ತಿದ್ದೀಯೆ. ಬೇರೆಯವರನ್ನು ವಿಚಾರಣೆಗೆ ಒಳಪಡಿಸುವಂತೆಯೇ ನಿನ್ನನ್ನೂ ಇಲ್ಲಿಗೆ ಕರೆಸಿದ್ದೇವೆ. ನಿನಗೆಂದೇ ಒಂದು ನಿಯಮ ಮಾಡಲು ಸಾಧ್ಯವಿಲ್ಲ. ನೀನು ಕೋರ್ಟ್‌ನ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀಯ. ಇದಕ್ಕಾಗಿ ನಿನಗೆ ತಕ್ಕ ಶಾಸ್ತಿಯಾಗುತ್ತದೆ. ಮತ್ತೊಮ್ಮೆ ಹೇಳುತ್ತಿದ್ದೇನೆ, ಬೂಟು ಕಳಚಿಟ್ಟು ಬಾ.ಮನೋಕ್‌ಜೀ: ನಿಮ್ಮ ಆದೇಶವನ್ನು ನಾನು ವಿಧೇಯನಾಗಿ ಪಾಲಿಸುತ್ತೇನೆ. ಆದರೆ, ಹೀಗೆ ಆದೇಶಿಸುವ ಮೂಲಕ ನೀವು ನನ್ನ ಭಾವನೆಗಳಿಗೆ ಘಾಸಿ ಮಾಡುತ್ತಿದ್ದೀರಿ. ಇದು ನಿಮ್ಮಿಂದ ನನಗಾಗುತ್ತಿರುವ ಅಗೌರವ. ನೀವು ಹೇಳಿದ್ದನ್ನು ಪಾಲಿಸಿದರೆ ನನ್ನ ಧರ್ಮಕ್ಕೆ ನಾನು ಅಪಚಾರವೆಸಗಿದಂತಾಗುತ್ತದೆ.ಜಡ್ಜ್: ನನಗದು ಮುಖ್ಯವಲ್ಲ. ಕೋರ್ಟ್‌ಗೆ ನೀನು ಸುಮ್ಮನೆ ತೊಂದರೆ ಒಡ್ಡುತ್ತಿರುವೆ. ನಿನಗೆ ತಕ್ಕ ಶಾಸ್ತಿ ಆಗುತ್ತದೆ. ಈಗೇನು, ನನ್ನ ಆದೇಶವನ್ನು ಪಾಲಿಸುವೆಯೋ ಇಲ್ಲವೋ?ಮನೋಕ್‌ಜೀ: ಇಲ್ಲ ಮಹಾಸ್ವಾಮಿ, ನಾನು ಕೋರ್ಟ್‌ನ ಕಲಾಪಕ್ಕೆ ಅಡ್ಡಿಪಡಿಸುವುದಿಲ್ಲ. ನೀವು ಆದೇಶ ಕೊಡುವವರೆಗೆ ಇಲ್ಲಿಯೇ ನಿಂತು ಕಾಯುತ್ತೇನೆ.

ಜಡ್ಜ್: ಬೂಟುಗಳನ್ನು ಹಾಕಿಕೊಂಡು ಅದು ಹೇಗೆ ಒಳಗೆ ಬರುತ್ತೀಯೋ ನಾನೂ ನೋಡುತ್ತೇನೆ.ಮನೋಕ್‌ಜೀ: ಇಲ್ಲ ಮಹಾಸ್ವಾಮಿ, ನಿಮ್ಮ ಆದೇಶ ಉಲ್ಲಂಘಿಸಿ ನಾನು ಬರುವುದಿಲ್ಲ. ನೀವು ಬಾ ಎಂದು ಕರೆಯುವವರೆಗೆ ಕಾಯುವೆ.ಜಡ್ಜ್: ನೀನು ಬೂಟನ್ನು ತೆಗೆಯುತ್ತೀಯೋ ಇಲ್ಲವೋ? ಹೌದು ಅಥವಾ ಇಲ್ಲ ಎಂದು ಹೇಳು.ಮನೋಕ್‌ಜೀ: ಮಹಾಸ್ವಾಮಿ, ನೀವು ಈ ಆದೇಶದ ಮೂಲಕ ನನ್ನ ಧರ್ಮನಿಷ್ಠೆಗೆ ಭಂಗ ತರುತ್ತಿದ್ದೀರಿ. ನಿಮ್ಮ ಆದೇಶಕ್ಕೆ ಕಾನೂನಾತ್ಮಕ ಕಾರಣವಿದ್ದರೆ ತಿಳಿಸಿ. ಮನಃಸಾಕ್ಷಿಯನ್ನು ಮೀರುವುದು, ನಾನು ನಂಬಿದ ಮಾನವ ಘನತೆಗೆ ಕುಂದುತರುವಂತೆ ವರ್ತಿಸುವುದು ನನ್ನ ಧರ್ಮಕ್ಕೆ ಪ್ರತಿಕೂಲವಾದದ್ದು. ಅದನ್ನು ನಾನು ಮಾಡಲಾರೆ.ಜಡ್ಜ್: ಇಲ್ಲ, ನಿನ್ನ ಧರ್ಮ ಇದಕ್ಕೆ ಅವಕಾಶ ಕೊಡುವುದಿಲ್ಲವೆಂದು ಸುಳ್ಳು ಹೇಳುತ್ತಿರುವೆ. ಈ ಕೋರ್ಟ್‌ನಲ್ಲಿ ಕೆಲವು ಪಾರಸಿಗಳು ಇದ್ದಾರೆ. ನಿನ್ನ ಪ್ರಶ್ನೆಯನ್ನು ಅವರಿಗೆ ಹಾಕು.ಮನೋಕ್‌ಜೀ: ಇಲ್ಲ ಮಹಾಸ್ವಾಮಿ... ನಿಮಗೆ ನಾನು ಸತ್ಯವನ್ನೇ ಹೇಳುತ್ತಿರುವುದು. ಇದಷ್ಟೇ ಅಲ್ಲ, ವೈಯಕ್ತಿಕ ಘನತೆಗೆ ಕುಂದುತರುವ ಇನ್ನೂ ಕೆಲವು ನಡಾವಳಿಗಳಿಗೆ ನನ್ನ ಧರ್ಮದಲ್ಲಿ ನಿಷೇಧವಿದೆ. ಇಲ್ಲಿರುವ ಪಾರಸಿಗಳನ್ನು ಕೋರ್ಟ್ ಕೇಳಬಹುದು. ಆದರೆ, ಎಲ್ಲರೂ ಧರ್ಮವನ್ನು ನಂಬಲೇಬೇಕು ಎಂದೇನೂ ಇಲ್ಲ.ಜಡ್ಜ್: ನೀನು ಸುಳ್ಳುಗಾರ. ನಿನ್ನ ಮಾತು ಸತ್ಯ ಎಂದು ಹೇಳಲು ಇಲ್ಲಿ ಯಾರಾದರೂ ಇದ್ದಾರೆಯೇ, ತಿಳಿಸು. ಇಲ್ಲವಾದಲ್ಲಿ ನಿನಗೆ ತಕ್ಕ ಶಾಸ್ತಿಯಾಗುತ್ತದೆ.ಮನೋಕ್‌ಜೀ: ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನನ್ನ ಮಾತು ಸತ್ಯ. ಕಾನೂನು ಏನು ಹೇಳುತ್ತದೋ ಅದಕ್ಕೆ ನಾನು ಸದಾ ತಲೆಬಾಗುತ್ತೇನೆ.

ಜಡ್ಜ್: ಇಲ್ಲಿ ನಿನ್ನ ಮಾತು ಸರಿ ಎನ್ನುವವರಾರು; ಅವರ ಹೆಸರು ಹೇಳು?

ಮನೋಕ್‌ಜೀ: ನನಗೆ ಗೊತ್ತಿಲ್ಲ.ಜಡ್ಜ್: ಹಾಗಾದರೆ, ಅದೇ ಸರಿ ಎಂದು ಹೇಳುವವರು ಯಾರು?

ಮನೋಕ್‌ಜೀ: ಅದರ ಬಗ್ಗೆ ಒಲವಿದ್ದರೆ ಖುದ್ದು ಈ ಕೋರ್ಟ್ ಹೇಳಬಹುದು.ಜಡ್ಜ್: ಆದರೆ, ನೀನು ಸುಳ್ಳು ಹೇಳುತ್ತಿರುವೆ. ನನಗೆ ಗೊತ್ತು, ಧರ್ಮದಲ್ಲಿ ಇದಕ್ಕೆ ನಿರ್ಬಂಧವೇನೂ ಇಲ್ಲ.ಮನೋಕ್‌ಜೀ: ಇಲ್ಲ ಮಹಾಸ್ವಾಮಿ, ನಾನು ನಂಬಿರುವಂತೆ ನಿರ್ಬಂಧ ಇದೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.ಜಡ್ಜ್: ಹಾಗಾದರೆ, ನಾನು ಸುಳ್ಳು ಹೇಳುತ್ತಿದ್ದೇನೆಯೇ? ಬೇಗ ಹೇಳು; ನಿನ್ನ ಮಾತು ನಿಜವೇ ಎಂದು ಯಾರನ್ನು ಕೇಳುವುದು?ಮನೋಕ್‌ಜೀ: ನಾನು ಯಾರ ಹೆಸರನ್ನೂ ಹೇಳಲಾರೆ. ಕೆಲವರಷ್ಟೇ ನನ್ನ ಧರ್ಮವನ್ನು ಸರಿಯಾಗಿ ಓದಿ ಗ್ರಹಿಸಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್ ಹಾಗೂ ಬಾಂಬೆಯ ಎಲ್ಲೆಡೆ ಬೂಟು ಹಾಕಿಕೊಂಡು ಹೋಗಲು ಅನುಮತಿ ಇದೆ ಎಂಬುದು ತಮಗೂ ಗೊತ್ತು. ಅದರಿಂದ ಅಗೌರವ ಸೂಚಿಸಿದಂತೆ ಆಗುತ್ತದೆ ಎಂದಿದ್ದರೆ ಅಲ್ಲೆಲ್ಲಾ ಅನುಮತಿ ಸಿಗುತ್ತಲೇ ಇರಲಿಲ್ಲ.ಜಡ್ಜ್: ಬಾಂಬೆ ಬಗ್ಗೆ ಮಾತನಾಡಬೇಡ. ಪ್ರತಿಯೊಬ್ಬ ಪಾರಸಿಯೂ ಇಲ್ಲಿ ಬೂಟು ಬಿಚ್ಚಿಯೇ ಬರುತ್ತಾನೆ. ಕೋರ್ಟ್‌ನ ಈ ನಿಯಮವನ್ನು ನೀನೂ ಪಾಲಿಸಬೇಕಷ್ಟೆ.

ಮನೋಕ್‌ಜೀ: ಇಲ್ಲ ಮಹಾಸ್ವಾಮಿ, ನನ್ನ ಧರ್ಮ ಅದನ್ನು ವಿರೋಧಿಸುತ್ತದೆ.

ಜಡ್ಜ್: ನಮಗದು ಗೊತ್ತಿಲ್ಲ.ಮನೋಕ್‌ಜೀ: ಹಾಗಿದ್ದರೆ ಈ ಕೋರ್ಟ್‌ಗೆ ವಿನಮ್ರವಾಗಿ ನಾನು ಈ ವಿಷಯ ತಿಳಿಸುತ್ತಿದ್ದೇನೆ.ಜಡ್ಜ್: (ಆವೇಶದಿಂದ) ಅದೇನು ಹೇಳಬೇಕೋ ಹೇಳು.

ಮನೋಕ್‌ಜೀ: ಒಳ್ಳೆಯದು... ಮಹಾಸ್ವಾಮಿ.ಜಡ್ಜ್: ಇನ್ನೊಮ್ಮೆ ಆದೇಶಿಸುತ್ತಿದ್ದೇನೆ- ನಿನ್ನ ಬೂಟನ್ನು ಮೊದಲು ಬಿಚ್ಚು.

ಮನೋಕ್‌ಜೀ: ನಮ್ಮ ಧರ್ಮದ ಕಟ್ಟಳೆಯನ್ನು ಮೀರಿ ನೀವು ಈ ಆದೇಶ ಕೊಡುತ್ತಿದ್ದೀರಿ. ಇದರಿಂದ ನನ್ನ `ಮನುಷ್ಯ ಭಾವನೆ~ಗೆ ಹಾನಿಯುಂಟಾದರೂ ಪರವಾಗಿಲ್ಲ ಎಂದು ತಾವು ಹೇಳುವವರೆಗೆ ನಾನು ಬೂಟು ಬಿಚ್ಚಲಾರೆ ಮಹಾಸ್ವಾಮಿ.

ಜಡ್ಜ್: ಈ ವಿಷಯ ಸ್ಪಷ್ಟಪಡಿಸಿಕೊಳ್ಳಲು ಒಬ್ಬ ವ್ಯಕ್ತಿಯನ್ನು ಸೂಚಿಸು.ಮನೋಕ್‌ಜೀ: ಸೂರತ್‌ನಲ್ಲಿ ಅಂಥವರಾರೂ ನನಗೆ ಗೊತ್ತಿಲ್ಲ.

ಜಡ್ಜ್: ಅಂದರೆ, ಯಾರಿಗೂ ಇಲ್ಲಿ ನಿನ್ನ ಧರ್ಮದ ಬಗ್ಗೆ ಗೊತ್ತಿಲ್ಲವೇ?

ಮನೋಕ್‌ಜೀ: ಹಾಗಲ್ಲ ಮಹಾಸ್ವಾಮಿ, ನನಗೆ ಅಂಥವರು ಇಲ್ಲಿ ಗೊತ್ತಿಲ್ಲವೆಂದೆ.

ಜಡ್ಜ್: ಇಲ್ಲಿನ ದಸ್ತೂರರು, ಮೋದಿಗಳಿಗೂ ತಿಳಿದಿಲ್ಲವೇ?ಮನೋಕ್‌ಜೀ: ಇಲ್ಲ ಮಹಾಸ್ವಾಮಿ. ಬಹಳ ಹಿಂದೆ ಇಲ್ಲಿ ಪಂಚಾಯತಿಯವರು ಒಬ್ಬ ಮೋದಿಯವರಲ್ಲಿ ಧಾರ್ಮಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದರು. ಆದರೆ, ಅವರು ನಮ್ಮ ರೀತಿ ರಿವಾಜುಗಳನ್ನು ಸುಮ್ಮನೆ ಪಾಲಿಸಿಕೊಂಡು ಬಂದವರಷ್ಟೇ; ಧರ್ಮಗ್ರಂಥಗಳನ್ನು ಓದಿ ತಿಳಿದವರಲ್ಲ.ಜಡ್ಜ್: ಈ ಬಗ್ಗೆ ಹೇಳುವ ಯಾರೇ ಆದರೂ ಪರವಾಗಿಲ್ಲ, ಅವರನ್ನು ಹೆಸರಿಸು.

ಮನೋಕ್‌ಜೀ: ಸುಂಜನ್‌ನ ಎದುಲ್ದಾರೂ ಎಂಬುವರ ಮಗ ಈಗ ಬಾಂಬೆಯಲ್ಲಿ ದಸ್ತೂರರಾಗಿದ್ದಾರೆ. ಅವರ ಓರಗೆಯವರು ಈ ಪ್ರಶ್ನೆಗೆ ಉತ್ತರ ಕೊಡಬಹುದು. ನೀವು ಅಗೌರವ ಎಂದು ಭಾವಿಸದೇ ಇದ್ದಲ್ಲಿ ನನ್ನ `ಪುರ್ಗಿ~ (ಮುಂಡಾಸು) ಬಿಚ್ಚಿಟ್ಟು, ಬಿಗಿಯಾದ ಟೊಪ್ಪಿಯನ್ನು ಮಾತ್ರ ತೊಟ್ಟು ಬರಲು ಸಿದ್ಧ. ಏನಂತೀರಿ?ಜಡ್ಜ್: ಏನು, `ಪುರ್ಗಿ~ ತೆಗೆಯುತ್ತೀಯಾ? ಯಾಕೆ, ನಾನಾಗಲೀ ಇಲ್ಲಿರುವವರಾಗಲೀ ಅದನ್ನು ತೊಟ್ಟು ಕೂರಬಾರದು ಎಂಬುದೇ ನಿನ್ನ ಭಾವನೆ? ನೀನು ಕೋರ್ಟನ್ನು ಅವಮಾನಿಸುತ್ತಿದ್ದೀಯಾ?ಮನೋಕ್‌ಜೀ: ಇಲ್ಲ ಮಹಾಸ್ವಾಮಿ, ಕೋರ್ಟ್‌ಗೆ ಹಾಗೆ ಬಂದರೆ ಆದೀತೆ ಎಂದು ಕೇಳಿದೆನಷ್ಟೆ. `ಪುರ್ಗಿ~ ತೆಗೆಯುವುದು ಕೋರ್ಟ್‌ಗಷ್ಟೇ ಅಲ್ಲ, ಅದು ನನಗೆ ನಾನೇ ಮಾಡಿಕೊಳ್ಳುವ ಅಪಮಾನವೂ ಹೌದು. ಅದರಲ್ಲಿ ಯಾವ ಧರ್ಮಸೂಕ್ಷ್ಮ, ವಿವೇಚನೆ ಏನಾದರೂ ಇಲ್ಲವೇ ಎಂದು ಅರ್ಥ ಮಾಡಿಕೊಳ್ಳಲು ಹಾಗೆ ಕೇಳಿದೆ. ಬೂಟು ಹಾಕಿಕೊಳ್ಳುವುದು ಅಥವಾ ಹಾಕಿಕೊಳ್ಳದೇ ಇರುವುದು ನಮಗೆ ಗೌರವದ ಪ್ರಶ್ನೆಯಲ್ಲ.ಆದರೆ, `ಪುರ್ಗಿ~ಯ ಬಗ್ಗೆ ನಮಗೆ ತುಂಬಾ ಗೌರವ. ಮನೆಯಲ್ಲಿರುವಾಗ ಮಾತ್ರ ಅದನ್ನು ತೊಡುವುದಿಲ್ಲ. ಉಳಿದಂತೆ ಹೊರಗೆ ಹೋಗುವಾಗ ಅದು ಇರಲೇಬೇಕು.ಅದಿಲ್ಲದೆ ದೊಡ್ಡ ಮನುಷ್ಯರನ್ನು ನಾವು ಇದಿರುಗೊಳ್ಳುವುದೇ ಇಲ್ಲ. ಇದು ನಮ್ಮ, ಪಾರಸೀಗಳ ಆಚಾರ. ಬೂಟಿನ ವಿಷಯ ಹಾಗಲ್ಲ. `ಅಬ್ರೂ~ ಹೇಳಿರುವಂತೆ ಎಂಥ ಹಿರಿಯರೇ ಎದುರಲ್ಲಿದ್ದರೂ ನಾವು ಬೂಟು ತೆಗೆಯುವಂತಿಲ್ಲ.

ಜಡ್ಜ್: ನಮಗೆ ಈ ವಿಷಯ ಗೊತ್ತಿಲ್ಲ.ಮನೋಕ್‌ಜೀ: ಬೇಕಿದ್ದರೆ ನೀವು ವಿಚಾರಣೆ ಮಾಡಿ ತಿಳಿದುಕೊಳ್ಳಬಹುದು.

ಜಡ್ಜ್: ಸಾಕುಮಾಡು. ಕೋರ್ಟ್‌ನಿಂದ ಆಚೆ ತೊಲಗು.ಮನೋಕ್‌ಜೀ: ಆಗಲೀ ಮಹಾಸ್ವಾಮಿ (ಆಚೆಗೆ ಹೋಗಲು ಮುಂದಾಗುತ್ತಾನೆ)

ಜಡ್ಜ್: ಬೇಡ, ಬೇಡ... ಬಾ ಇಲ್ಲಿ. ಅಲ್ಲಿ ನಿಲ್ಲು. ನೋಡು, ನಿನಗೆ ಕುರ್ಚಿ ಮೇಲೆ ಕೂರುವ ಅವಕಾಶ ಕೊಡಲಾರೆ. ನಿಂತೇ ವಿಚಾರಣೆಯನ್ನು ಆಲಿಸಬೇಕು.ಮನೋಕ್‌ಜೀ: ಮನುಷ್ಯನ ಘನತೆ, ಧಾರ್ಮಿಕ ಭಾವನೆಗೆ ಧಕ್ಕೆ ಬರದೇ ಇದ್ದಲ್ಲಿ ನಾನು ನಿಲ್ಲಲ್ಲು ಸಿದ್ಧ. (ತುಸು ತಡೆದು, ಶಿರಸ್ತೇದಾರರನ್ನು ಉದ್ದೇಶಿಸಿ) ಕರ ನಿರ್ಧಾರಕನ ಕೆಲಸ ಏನೆಂದು ನಿಮ್ಮ ಸಾಹೇಬರನ್ನು ಕೇಳು.

ಜಡ್ಜ್: ನಿನಗೆ ಸುಪ್ರೀಂಕೋರ್ಟ್, `ಸುದ್ದರ್~ ಎಂದೆಲ್ಲಾ ಮಾತಾಡಲು ಗೊತ್ತು. ಕಂದಾಯ ಲೆಕ್ಕ ಹಾಕುವವನ ಬಗ್ಗೆ ಗೊತ್ತಿಲ್ಲ!ಮನೋಕ್‌ಜೀ: ಇಲ್ಲಿಗೆ ಬರುವ ಮೊದಲು ನಾವು ಕಾನೂನನ್ನು ಓದಿಕೊಂಡು ಬರಬೇಕು ಎಂದು ಯಾರೂ ನಿರೀಕ್ಷಿಸುವುದಿಲ್ಲ. ಅಲ್ಲದೆ, ನ್ಯಾಯಾಂಗದವರು ಹಾಗೂ ಕಂದಾಯ ಲೆಕ್ಕ ಹಾಕುವವರ ಅಧಿಕಾರ ಸಮವಾದದ್ದಲ್ಲ ಎಂದು ಕೇಳಿದ್ದೇನೆ (ನ್ಯಾಯಾಂಗದವರು ಹಾಗೂ ಕಂದಾಯ ಲೆಕ್ಕ ಹಾಕುವವರ ನಡುವಿನ ವ್ಯತ್ಯಾಸವನ್ನು ಜಡ್ಜ್ ಸವಿವರವಾಗಿ ಹೇಳುತ್ತಾರೆ. ಅದಕ್ಕೆ ಮನೋಕ್‌ಜೀ ಧನ್ಯವಾದ ಅರ್ಪಿಸುತ್ತಾರೆ).

ಜಡ್ಜ್: (ಮೊದಲ ಸಾಕ್ಷಿಯು ತನ್ನ ಹೇಳಿಕೆಯನ್ನು ಅರ್ಧ ಕೊಟ್ಟ ನಂತರ) ನಿನಗೆ ಕೂರಬೇಕು ಎಂದಿದ್ದರೆ ಬೂಟು ಕಳಚಿಟ್ಟು ಒಳಗೆ ಬರಬಹುದು. ಕುರ್ಚಿ ಇಲ್ಲಿದೆ. ಆಚೆಯೇ ಇರಬೇಕು ಎಂದಾದರೆ ನೆಲದ ಮೇಲೆ ಕೂರಬಹುದು.ಮನೋಕ್‌ಜೀ: ಇಲ್ಲ ಮಹಾಸ್ವಾಮಿ, ನೀವು ಕೊಟ್ಟ ಕುರ್ಚಿಯ ಆಹ್ವಾನವನ್ನು ಸ್ವೀಕರಿಸಲಾಗದ ಇಕ್ಕಟ್ಟಿಗೆ ನನ್ನನ್ನು ದೂಡಿದ್ದೀರಿ. ಯಾಕೆಂದರೆ, ನಾನು ಬೂಟು ಬಿಚ್ಚುವ ಹಾಗಿಲ್ಲ. ನೆಲದ ಮೇಲೆ ಕೂರುವುದು ಇನ್ನೂ ಅವಮಾನದ ವಿಷಯ. ಅದರ ಬದಲು ನೀವು ಬೇರೆ ರೀತಿಯ ಕೂರುವ ವ್ಯವಸ್ಥೆಯನ್ನು ನನಗೆ ಮಾಡಿಕೊಡಬಹುದು. `ಗದ್ದಿ~ (ಬಟ್ಟೆಯಲ್ಲಿ ರೂಪಿಸಿದ ಆಸನ ವ್ಯವಸ್ಥೆ) ಕೊಟ್ಟರೂ ಆದೀತು. ಆಗ ಸಂತಸವಾಗುತ್ತದೆ. ಆದರೆ...ಜಡ್ಜ್: ಸಾಕುಮಾಡು. ಕುರ್ಚಿ ಬೇಡದಿದ್ದರೆ ಬಿಡು.

ಮನೋಕ್‌ಜೀ: ಒಳ್ಳೆಯದು ಮಹಾಸ್ವಾಮಿ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry