ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಚ್ಚಿಕೊಳ್ಳುವ ಗಾಂಧಿ, ದ್ವೀಪವಾಗುವ ನಾವು

Last Updated 25 ಜನವರಿ 2014, 19:30 IST
ಅಕ್ಷರ ಗಾತ್ರ

‘ಗಾಂಧಿ’ ಎನ್ನುವುದನ್ನು ಈಗ ಕೇವಲ ರೂಪಕ ಅಥವಾ ಸಂಕೇತದಂತೆ ಬಳಸಲಾಗುತ್ತದೆ. ಅಂದರೆ ಖಾದಿ, ಚರಕಾ, ಅಹಿಂಸೆ, ಬಡವರ ಉದ್ಧಾರ ಇತ್ಯಾದಿ... ಆದರೆ ಗಾಂಧೀಜಿ ಅಂದರೆ ಅದಷ್ಟೇ ಅಲ್ಲ. ತುಂಬಾ ಸಂಕೀರ್ಣ ವ್ಯಕ್ತಿತ್ವ ಅವರದು. ಅವರು ಹೆಚ್ಚು ಒತ್ತು ಕೊಡುತ್ತಿದ್ದುದೇ ನೈತಿಕತೆಗೆ.

ಗಾಂಧೀಜಿ ನನಗೆ ಅರ್ಥವಾಗಿದ್ದು ತಡವಾಗಿ. ಯುವಕನಾಗಿದ್ದಾಗ ಎಲ್ಲರಿಗೂ ಅನಿಸುವಂತೆ ನನಗೂ ‘ಈ ಗಾಂಧಿ ಸರಿಯಿಲ್ಲವೇನೋ’ ಎಂದು ಭಾಸವಾಗುತ್ತಿತ್ತು. ಒಂದರ್ಥದಲ್ಲಿ ಅವರು ಬರೀ ಆದರ್ಶ ಅನಿಸುತ್ತಿತ್ತು. ಬಳಿಕ ಕೆ.ವಿ. ಸುಬ್ಬಣ್ಣ, ಯು.ಆರ್. ಅನಂತಮೂರ್ತಿ ಇತರರು ಗಾಂಧಿ ಬಗ್ಗೆ ಮತ್ತೆ ಮತ್ತೆ ಮಾತಾಡುವುದು, ಬರೆಯುವುದನ್ನು ಗಮನಿಸಿದಾಗ– ಗಾಂಧಿ ಎಂದರೆ ಪರ್ಯಾಯವಾದ ಒಂದು ವ್ಯವಸ್ಥೆ; ಇದರಲ್ಲೇನೋ ಸತ್ವವಿದೆ ಎನಿಸಿತು.

ಜಾಗತೀಕರಣ ಎನ್ನುವ ಪರಿಕಲ್ಪನೆಗೆ ಅನೇಕ ವಿವರಣೆಗಳನ್ನು ಕೊಡಬಹುದು. ಜಾಗತೀಕರಣದಿಂದ ಉಂಟಾಗುವ ಅಡ್ಡ ಪರಿಣಾಮಗಳೂ ಹಲವು. ಇದರಿಂದ ಸಮಾಜ ಪಾರಾಗುವುದು ಹೇಗೆ ಎಂದು ಯೋಚಿಸಿದಾಗ ಉತ್ತರರೂಪವಾಗಿ ನನಗೆ ಕಾಣಿಸಿದ್ದು ಗಾಂಧೀವಾದ. ಹಾಗಾಗಿ ಗಾಂಧಿಯನ್ನು ಹೆಚ್ಚು ಹೆಚ್ಚು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆ. ಜಾಗತೀಕರಣ ಅಂದರೆ ಇಡೀ ಪ್ರಪಂಚಕ್ಕೆ ಅನ್ವಯ ಆಗುವಂಥದ್ದು ಎಂಬರ್ಥವಿದೆ. ಆದರೆ ಗಾಂಧೀಜಿಯದ್ದು ಇದಕ್ಕೆ ವ್ಯತಿರಿಕ್ತ ನಿಲುವು. ‘ಪ್ರತಿ ಸಮುದಾಯ, ಗ್ರಾಮಕ್ಕೂ ಅದರದ್ದೇ ಆದ ಸ್ವತಂತ್ರ ವ್ಯವಸ್ಥೆ ಇರಬೇಕು’ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು.

ಒಂದು ರಾಜ್ಯ (ದೇಶ) ಹೇಗಿರಬೇಕು? ಗಾಂಧೀಜಿ ಪ್ರಕಾರ, ಸಿಂಹದಂತೆ ಅಲ್ಲ; ಮುಳ್ಳುಹಂದಿ ತರಹ ಇರಬೇಕು. ಸಿಂಹ ಇತರ ಪ್ರಾಣಿಗಳ ಮೇಲೆ ದಾಳಿ ಮಾಡುವ ಸ್ವಭಾವ ಹೊಂದಿದೆ. ಆದರೆ ಮೈತುಂಬ ಮುಳ್ಳುಗಳನ್ನು ಹೊಂದಿದ್ದರೂ ಮುಳ್ಳುಹಂದಿ ದಾಳಿಕೋರ ಗುಣವನ್ನು ಹೊಂದಿಲ್ಲ. ಬೇರೆ ಪ್ರಾಣಿಗಳಿಗೂ ಅದನ್ನು ಕಚ್ಚಲು ಸಾಧ್ಯವಿಲ್ಲ. ಗ್ರಾಮಗಳು ಹೀಗೆಯೇ ಇರಬೇಕು. ಯಾರಿಗೂ ಕೆಡುಕನ್ನು ಬಯಸದೇ, ಹಾನಿಯುಂಟು ಮಾಡದೇ ಸಣ್ಣ ಸಣ್ಣ ಸ್ವಾವಲಂಬಿ ಘಟಕಗಳಾಗಿ ಬೆಳೆಯುವ ಹಳ್ಳಿಗಳಿಂದ ಇಡೀ ರಾಜ್ಯ, ದೇಶ ಹಾಗೂ ವಿಶ್ವವನ್ನು ಕಟ್ಟುವ ವ್ಯವಸ್ಥೆಯು ಈಗಿರುವ ಸ್ಥಿತಿಗಿಂತ ಹೆಚ್ಚು ಬಲಿಷ್ಠವಾಗಿರುತ್ತದೆ. ಆದರೆ ಈ ಪರ್ಯಾಯ ವ್ಯವಸ್ಥೆ ನಿರ್ಮಾಣ ಮಾಡಲು ಇಂದಿನ ನಾಗರಿಕ ಜಗತ್ತು ಅವಕಾಶ ಮಾಡಿಕೊಡುತ್ತದೆಯೇ? ಇದು ನನ್ನನ್ನು ಕಾಡುತ್ತಿರುವ ದೊಡ್ಡ ಆತಂಕ. ಜಾಗತೀಕರಣ ತಂದಿಟ್ಟ ದುಷ್ಪರಿಣಾಮವೇ ನಾನು ‘ಕೂರ್ಮಾವತಾರ’ ಸಿನಿಮಾ ಮಾಡಲು ಪ್ರೇರಣೆಯಾಗಿದೆ. ಈ ದುಷ್ಪರಿಣಾಮಗಳಿಗೆ ಗಾಂಧೀವಾದದಲ್ಲಿ ಸಮರ್ಥ ಪರಿಹಾರವಿದೆ.

ನೈತಿಕತೆಯ ಅಗ್ನಿಪರೀಕ್ಷೆ
ಇವತ್ತು ನಾವು ಮುಖ ಮಾಡಿರುವುದು ಜಾಗತೀಕರಣದ ಕಡೆಗೆ. ಬೇಕಿರಲಿ, ಬೇಡವಿರಲಿ, ಎಲ್ಲವನ್ನೂ ಖರೀದಿಸಿ ಮನೆಗೆ ಹೊತ್ತು ತಂದುಹಾಕುವ ಕೊಳ್ಳುಬಾಕತನ ಎಲ್ಲೆಡೆಯೂ ವ್ಯಾಪಿಸಿದೆ. ಆದರೆ ಅದಕ್ಕೆ ವಿರುದ್ಧವಾಗಿರುವ ನಡೆಯನ್ನು ಗಾಂಧೀಜಿ ನಮಗೆ ತೋರಿಸಿಕೊಟ್ಟಿದ್ದಾರೆ. ಪದಾರ್ಥವೊಂದರ ಬಗ್ಗೆ ವಿಪರೀತ ಪ್ರಚಾರ, ಇನ್ನೊಬ್ಬರ ಮೇಲೆ ಆಕ್ರಮಣ ಮಾಡಿ ನಮ್ಮತನವನ್ನು ಮೆರೆಸುವುದು ಸರಿಯಲ್ಲ ಎನ್ನುವುದು ಅವರ ಅಭಿಮತ. ಕೊಳ್ಳುಬಾಕತನಕ್ಕೆ ವ್ಯತಿರಿಕ್ತವೆನಿಸುವ ವಾದ ಅವರದು. ತೀರಾ ಅಗತ್ಯವಾಗಿ ಬೇಕೆನಿಸಿದ್ದನ್ನು ಮಾತ್ರ ಬಳಸಬೇಕು ಎನ್ನುವುದು ಗಾಂಧೀಜಿ ನಂಬಿಕೆ. ಆದರೆ ಅದರ ಬಗ್ಗೆ ನಾವು ಯೋಚಿಸುತ್ತಲೇ ಇಲ್ಲ. ಗಾಂಧೀಜಿಯನ್ನು ಕೆಲವು ರೂಪಕಗಳಿಗೆ ಸೀಮಿತ ಮಾಡಿಬಿಟ್ಟಿದ್ದೇವೆ. ಅವರು ಹೆಚ್ಚು ಒತ್ತು ಕೊಡುತ್ತಿದ್ದುದು ನೈತಿಕತೆಗೆ. ಏನೇ ಕೆಲಸ ಮಾಡಿದರೂ ಅದರಲ್ಲಿ ನೈತಿಕತೆ ಇರಬೇಕು ಅನ್ನುತ್ತಿದ್ದರು. ಅದನ್ನೀಗ ನಾವು ಗಾಳಿಗೆ ತೂರಿದ್ದೇವೆ. ಒಂದೆಡೆ ಗಾಂಧಿಯನ್ನು ನೆನಪಿಸಿಕೊಳ್ಳುತ್ತ, ಇನ್ನೊಂದೆಡೆ ಅವರ ನಡೆಗೆ ವಿರುದ್ಧವಾಗಿ ಸಾಗುತ್ತಿದ್ದೇವೆ. ಇದು ನನ್ನ ಗೊಂದಲವೂ ಹೌದು; ‘ಕೂರ್ಮಾವತಾರ’ದ ಆನಂದರಾವ್‌ನ ಗೊಂದಲವೂ...
ಉದಾಹರಣೆಗೆ, ಮಗ ಹಣ ಕೇಳಿದಾಗ ಆನಂದರಾವ್ ಕೊಡುವುದಿಲ್ಲ. ಮಗ ಎಷ್ಟೇ ಹಟ ಮಾಡಿದರೂ ಹಣ ಕೊಡಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ‘ಅಷ್ಟೆಲ್ಲ ದುಡ್ಡು ಏಕೆ ಬೇಕು’ ಎಂಬ ಪ್ರಶ್ನೆ ಆನಂದರಾವ್‌ನದು. ಆದರೆ ಮಗ ಬಂಧಿತನಾದಾಗ, ಮೊಮ್ಮಗನ ನೆಮ್ಮದಿಗಾಗಿ ಆತನನ್ನು ಬಿಡಿಸಿಕೊಂಡು ಬರುತ್ತಾನೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧಗಳು ಹಾಗೂ ಪಾಲಿಸಬೇಕಾದ ಆದರ್ಶಗಳು ಒಟ್ಟಿಗೇ ಹೋಗುತ್ತಿಲ್ಲ. ಇವೆರಡೂ ಒಟ್ಟಿಗೇ ಸಾಗುವ ಹಾಗೆ ಸಮಾಜ ಇರಬೇಕಿತ್ತು. ಇದೊಂದು ವೈರುಧ್ಯ.

ಗಾಂಧೀವಾದವನ್ನು ಎಲ್ಲರೂ ಪಾಲಿಸಬಹುದಾದ ಸಾಧ್ಯತೆ ಇದೆ. ಆದರೆ ಈಗ ಅದು ಯುಟೋಪಿಯನ್ ಆಗಿ ಕಾಣಿಸುತ್ತಿದೆ. ಇದು ನನ್ನ ಆತಂಕ. ಗಾಂಧಿಯನ್ನು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ನಮಗೆ ಏನೇನೋ ಬೇಕು. ಗಾಂಧಿ ಬಗ್ಗೆ ಮಾತಾಡುವವರೆಲ್ಲ ಇದೇ ಗೊಂದಲಕ್ಕೆ ಸಿಲುಕಿದ್ದಾರೆ! ಹಾಗೆಂದು ಇಲ್ಲಿ ಗಾಂಧೀವಾದವನ್ನು ದೂರುವುದು ಸರಿಯಲ್ಲ. ಮುಖ್ಯ ತಪ್ಪು ಇರುವುದು ನಮ್ಮ ಸಮಾಜ ಹೋಗುತ್ತಿರುವ ದಿಕ್ಕಿನಲ್ಲಿ.

ಕೊನೆಯದಾಗಿ ಒಂದು ಮಾತು. ಕೆಲ ದಿನಗಳ ಹಿಂದೆ ವಿದೇಶಿ ನೇರ ಬಂಡವಾಳ ಹೂಡಿಕೆ ಕುರಿತು ಚರ್ಚೆಯೊಂದನ್ನು ಟಿವಿಯಲ್ಲಿ ನೋಡುತ್ತಿದ್ದೆ. ಹತ್ತರಲ್ಲಿ ಎಂಟು ಮಂದಿ ಈ ಹೂಡಿಕೆ ಬೇಕು ಅಂತ ವಾದಿಸಿದರು. ಇನ್ನಿಬ್ಬರು ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೇಳಲು ಹೋದಾಗ, ಉಳಿದವರೆಲ್ಲ ಸೇರಿಕೊಂಡು ಅಂಕಿ–ಸಂಖ್ಯೆಗಳ ಮೂಲಕ ಅವರ ದನಿಯನ್ನು ಅಡಗಿಸಿಬಿಟ್ಟರು. ವಾಸ್ತವ ಏನೆಂಬುದನ್ನು ಅರಿಯುವ ವ್ಯವಧಾನವಾಗಲೀ, ಅದರತ್ತ ಗಮನಹರಿಸುವುದಾಗಲೀ ಯಾರಿಗೂ ಬೇಕಿಲ್ಲ. ನಮ್ಮ ಸುಖ, ನೆಮ್ಮದಿ ಕಲ್ಪನೆಯೇ ಬೇರೆಯಾಗಿದೆ. ನಮ್ಮಷ್ಟಕ್ಕೆ ನಾವೆಲ್ಲರೂ ಒಂದೊಂದು ದ್ವೀಪವಾಗುತ್ತಿದ್ದೇವೆ. ಆದರೆ ಮನುಷ್ಯ ಪರಸ್ಪರ ಬಿಚ್ಚಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದ ಗಾಂಧಿಯವರಲ್ಲಿ ದ್ವೀಪವಾಗುವ ಈ ಕಲ್ಪನೆಯೇ ಇರಲಿಲ್ಲ.

ವ್ಯಕ್ತಿ ಮತ್ತು ಸಿದ್ಧಾಂತ

ಬೇರೆ ಬೇರೆ ಭಾಷೆಗಳಲ್ಲೂ ಗಾಂಧೀಜಿ ಬಗ್ಗೆ ಹಲವಾರು ಸಿನಿಮಾಗಳು ಬಂದಿವೆ. ಅಟೆನ್ ಬರೋ ಹಾಗೂ ಶಾಮ್ ಬೆನಗಲ್ ಅವರ ಚಿತ್ರಗಳಲ್ಲಿ ಗಾಂಧೀಜಿಯನ್ನು ವ್ಯಕ್ತಿಯಾಗಿ ತೋರಿಸಲಾಗಿದೆ. ನನ್ನ ಚಿತ್ರದಲ್ಲಿ ಗಾಂಧಿಯನ್ನು ಒಂದು ವಾದ ಅಥವಾ ಸಿದ್ಧಾಂತವಾಗಿ ತೋರಿಸಿದ್ದೇನೆ. ಗಾಂಧಿಯನ್ನು ಸಿದ್ಧಾಂತವಾಗಿ ಇಟ್ಟುಕೊಂಡು ಹಲವು ಸಿನಿಮಾಗಳೂ ಬಂದಿವೆ. ಅಲ್ಲೆಲ್ಲ ತುಂಬಾ ಭಾವನಾತ್ಮಕ ನೆಲೆಯಲ್ಲಿ ಗಾಂಧೀಜಿಯನ್ನು ಬಿಂಬಿಸಿದ್ದಾರೆ.

ಗಾಂಧಿಯನ್ನು ಸಂಕೇತವಾಗಿಟ್ಟುಕೊಂಡು ಬಂದ ‘ಲಗೋ ರಹೋ ಮುನ್ನಾಭಾಯಿ’ಯನ್ನೂ ಇಲ್ಲಿ ಉಲ್ಲೇಖಿಸಬಹುದು. ಗಾಂಧಿಯಲ್ಲಿರುವ ವೈರುಧ್ಯಗಳು, ಗಾಂಧಿವಾದ ಹಾಗೂ ಇಂದಿನ ಸ್ಥಿತಿಗತಿ ಮಧ್ಯೆ ಕಾಣುವ ಸಂಘರ್ಷಗಳ ಕುರಿತು ಹಲವು ಸಿನಿಮಾಗಳು ಬಂದಿವೆ. ಅಷ್ಟರ ಮಟ್ಟಿಗೆ ಗಾಂಧಿ ನಮ್ಮ ನಡುವೆ ಇಂದಿಗೂ ಇದ್ದಾರೆ.

ಲೇಖಕರು ಅಂತರರಾಷ್ಟ್ರೀಯ ಖ್ಯಾತಿಯ ಕನ್ನಡ ಸಿನಿಮಾ ನಿರ್ದೇಶಕರು. ಅವರ ನಿರ್ದೇಶನದ ‘ಕೂರ್ಮಾವತಾರ’ ಗಾಂಧಿಮಾರ್ಗದ ಜಿಜ್ಞಾಸೆಗಳ ಒಂದು ಅಪೂರ್ವ ಪ್ರಯತ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT