ಬಿಜಿಎಂಎಲ್ ಭೂಮಿ ಪರಭಾರೆ ಆರೋಪ

ಕೆಜಿಎಫ್: ಬಿಜಿಎಂಎಲ್ಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬ್ ಜಾಗ ಅಕ್ರಮವಾಗಿ ಇ ಖಾತೆ ಮಾಡಲಾಗಿದೆ ಎಂದು ಘಟ್ಟಕಾಮಧೇನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.
ಘಟ್ಟಕಾಮಧೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ್ ಈ ಅಕ್ರಮಕ್ಕೆ ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ್ ಕೆಲವು ಸಿಬ್ಬಂದಿ ಜೊತೆಗೂಡಿ,ಬಂಗಾರಪೇಟೆ–ಕೆಜಿಎಫ್ ಮುಖ್ಯ ರಸ್ತೆಯಲ್ಲಿರುವ ಬಿಜಿಎಂಎಲ್ಗೆ ಸೇರಿದ ಖರಾಬ್ ಜಮೀನಿಗೆ ಇ–ಖಾತೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಥಂಬ್( ಹೆಬ್ಬೆರಳು ಸಹಿ) ದುರುಪಯೋಗ ಪಡಿಸಿಕೊಂಡು ಈ ಕೃತ್ಯ ಮಾಡಲಾಗಿದೆ. ಉಪಾಧ್ಯಕ್ಷರ ಸಂಬಂಧಿಕರಿಗೆ ಕೃಷ್ಣರಾಜಪುರದ ಖಾತೆ ನಂಬರ್ ಪ್ರಸ್ತುತ ಎಲ್ಲಾ ಜಾಗಗಳು ಬಿಜಿಎಂಎಲ್ (ಚಿನ್ನದ ಗಣಿ)ಯ ವ್ಯಾಪ್ತಿಗೆ ಸೇರಿದ್ದು, ಖರಾಬ್ ಜಾಗವಾಗಿದೆ.
ಸದರಿ ಖಾತೆ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ. ಸಾಮಾನ್ಯ ಸಭೆಯ ಗಮನಕ್ಕೆ ತಂದಿಲ್ಲ. ಈ ಕೃತ್ಯಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೂಡ ಬೆಂಬಲ ನೀಡಿದ್ದರಿಂದ ಅಕ್ರಮ ನಡೆಸಲು ಸಾಧ್ಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ಈ ಆರೋಪಗಳನ್ನು ಉಪಾಧ್ಯಕ್ಷ ಶಶಿಧರ್ ನಿರಾಕರಿಸಿದ್ದಾರೆ. ರಾಜಕೀಯ ವೈರತ್ವದಿಂದ ಆರೋಪಮಾಡುತ್ತಿದ್ದಾರೆ. ಇ ಖಾತೆ ಮಾಡಲು ನನ್ನ ಕುಟುಂಬದವರು ಯಾರೂ ಮನವಿ ಪತ್ರ ನೀಡಿಲ್ಲ. ದಾಖಲೆ ಕೊಟ್ಟಿಲ್ಲ. ದುರುದ್ದೇಶಪೂರ್ವಕವಾಗಿ ಇ ಖಾತೆ ಸೃಷ್ಟಿಸಲಾಗಿದೆ.
ಸರ್ಕಾರಿ ಜಮೀನಿಗೆ ಇ ಖಾತೆ ಮಾಡಲು ಸಾಧ್ಯವೇ ಇಲ್ಲ. ಈ ಸಂಬಂಧವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪೊಲೀಸರಿಗೆ ನಾನು ದೂರು ನೀಡಿದ್ದೇನೆ. ಅಕ್ರಮವಾಗಿ ಮಾಡಲಾಗಿರುವ ಖಾತೆಯನ್ನು ರದ್ದುಗೊಳಿಸಬೇಕೆಂದು ಕೋರಿದ್ದೇನೆ ಎಂದು ತಿಳಿಸಿದ್ದಾರೆ.
ಪರಭಾರೆ ನಿವೇಶನಗಳ ವಿವರ
471/ಎ , 472/2, 493/ಎ ನಲ್ಲಿ 10,000 ಚ.ಮೀ. ಖಾತೆ ನಂಬರ್ 477/1 ರಲ್ಲಿ 15,000 ಚ.ಮೀ. ಖಾತೆ ನಂಬರ್ 630 ರಲ್ಲಿ 557.42 ಚ.ಮೀ ಮತ್ತು ಖಾತೆ ನಂಬರ್ 53/ಎ ರಲ್ಲಿ 15,000 ಚ.ಮೀ ಇ ಖಾತೆ ಮಾಡಲಾಗಿದೆ.
ಉಳಿದಂತೆ ಖಾತೆ ನಂಬರ್ 637 ರಲ್ಲಿ 15,000 ಚ.ಮೀ, ಖಾತೆ ನಂಬರ್ 246ರಲ್ಲಿ 3,000 ಚ.ಮೀ, ಖಾತೆ ನಂಬರ್ 651 ರಲ್ಲಿ 15,000 ಚ.ಮೀ, ಖಾತೆ ನಂಬರ್ 626 ರಲ್ಲಿ 557.4 ಚ.ಮೀ, ಮತ್ತು ಖಾತೆ ನಂಬರ್ 514/ಎ ರಲ್ಲಿ 5,000 ಚ.ಮೀ ವಿಸ್ತಿರ್ಣದ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
***
‘ಕಂಪ್ಯೂಟರ್ ಆಪರೇಟರ್ ರಾಜೇಂದ್ರ ನನ್ನಿಂದ ಥಂಬ್ ಪಡೆದು ಈ ರೀತಿ ಕೃತ್ಯ ಎಸಗಿದ್ದಾರೆ. ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ಖಾತೆ ಮಾಡಲಾದ ಇ ಖಾತೆಗಳನ್ನು ರದ್ದು ಮಾಡಲಾಗಿದೆ’
-ರತ್ನಮ್ಮ, ಹಿಂದಿನ ಪಿಡಿಒ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.