ಶುಕ್ರವಾರ, ಮೇ 14, 2021
32 °C
`ಅರ್ಹ' ಮುಖ್ಯಮಂತ್ರಿ ಅಭ್ಯರ್ಥಿಗಳಿಂದ ಕಾಂಗ್ರೆಸ್ ಗೆಲುವು ಸಲೀಸು

ಬಿಜೆಪಿಗೆ ಈ ಬಾರಿ `ಬೊಕ್ಕಸ' ಇರಲಿಲ್ಲ: ಮೇನರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿಗೆ ಈ ಬಾರಿ `ಬೊಕ್ಕಸ' ಇರಲಿಲ್ಲ: ಮೇನರ್

ಬೆಂಗಳೂರು: `ಯಾವುದೇ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದರೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವುದು ಭಾರತದಲ್ಲಿ ಒಂದು ಸಂಪ್ರದಾಯವಾಗಿ ಬೆಳೆದಿದೆ. ರಾಜ್ಯದಲ್ಲಿ ಆ ಸಂಪ್ರದಾಯ ಮುಂದುವರಿದ ಕಾರಣ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಚುಕ್ಕಾಣಿ ಹಿಡಿಯುವಂತಾಗಿದೆ' ಎಂದು ಹೆಸರಾಂತ ರಾಜಕೀಯ ಚಿಂತಕ ಪ್ರೊ. ಜೇಮ್ಸ ಮೇನರ್ ವಿಶ್ಲೇಷಣೆ ಮಾಡಿದರು.ರಾಜ್ಯ ರಾಜಕಾರಣದ ಆಗು-ಹೋಗುಗಳನ್ನು ಕಳೆದ ನಾಲ್ಕು ದಶಕಗಳಿಂದ ಅಧ್ಯಯನ ಮಾಡುತ್ತಿರುವ ಅವರು, ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ `ಕರ್ನಾಟಕ ಚುನಾವಣಾ ಗ್ರಹಿಕೆ' ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.`ಕಳೆದ ಎರಡು ಚುನಾವಣೆಗಳಲ್ಲಿ ಕರ್ನಾಟಕದ ಉತ್ತರ ಭಾಗದಲ್ಲಿ ಬಿಜೆಪಿ ಮತ್ತು ದಕ್ಷಿಣದಲ್ಲಿ ಜೆಡಿಎಸ್ ಗಟ್ಟಿಯಾಗಿ ನಿಂತಿದ್ದರಿಂದ ಕಾಂಗ್ರೆಸ್ ವೈಫಲ್ಯದ ಹಾದಿ ಹಿಡಿದಿತ್ತು. ಈ ಸಲ ಯಾವುದೇ ಪವಾಡ ನಡೆಯದೆ ಎರಡೂ ಕಡೆ ಆ ಪಕ್ಷ ಯಶಸ್ಸು ಸಾಧಿಸಿತು' ಎಂದು ಹೇಳಿದರು.`ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಿಜೆಪಿ ಎಲ್ಲಿಯೂ ಬೇರುಮಟ್ಟದ ನೆಲೆ ಹೊಂದಿಲ್ಲ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಕೇಂದ್ರಿತವಾಗಿ ಆ ಪಕ್ಷ ಬೆಳೆದಿತ್ತು. ಹೀಗಾಗಿ ಯಡಿಯೂರಪ್ಪ ಹೊರಹೋದ ಮೇಲೆ ಬಿಜೆಪಿ ಮತ್ತಷ್ಟು ದುರ್ಬಲವಾಯಿತು' ಎಂದು ತಿಳಿಸಿದರು.`ದೇಶದಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕರ ಪರಿಶ್ರಮ ಅಪಾರವಾಗಿದೆ. ಸ್ವಯಂಸೇವಕರು ಹಿಂದಿ ಭಾಷೆಯನ್ನು ಸೊಗಸಾಗಿ ಮಾತನಾಡಬಲ್ಲರು. ಹೀಗಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆದರೆ, ಹಿಂದಿ ಮಾತನಾಡದ ಕರ್ನಾಟಕದಂತಹ ರಾಜ್ಯಗಳಲ್ಲಿ ಕುಂಠಿತಗೊಂಡಿದೆ' ಎಂದು ವಿಶ್ಲೇಷಿಸಿದರು.`ರಾಜ್ಯದ ಜನ ಹಿಂದುತ್ವದ ಕುರಿತು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಹುಬ್ಬಳ್ಳಿಯ ಈದ್ಗಾ, ಚಿಕ್ಕಮಗಳೂರಿನ ದತ್ತಪೀಠ ವಿವಾದಗಳೇ ಅದಕ್ಕೆ ಸಾಕ್ಷಿಯಾಗಿವೆ. ಈ ಘಟನೆಗಳು ಬಿಜೆಪಿಗೆ ನಿರೀಕ್ಷಿತ ಫಲ ನೀಡಿಲ್ಲ. ನರೇಂದ್ರ ಮೋದಿ ಬಂದು ಹೋದರೂ ಕರಾವಳಿಯಲ್ಲಿ ಸ್ಥಾನಗಳನ್ನು ಉಳಿಸಿಕೊಳ್ಳಲು ಆ ಪಕ್ಷಕ್ಕೆ ಆಗಲಿಲ್ಲ' ಎಂದು ವ್ಯಾಖ್ಯಾನಿಸಿದರು.`ಕಳೆದ ಚುನಾವಣೆಯಲ್ಲಿ ಗಣಿ ಲಾಬಿ ರೂಪದಲ್ಲಿ ಬಿಜೆಪಿ ಬಳಿ ಬಹುದೊಡ್ಡ ಆರ್ಥಿಕ ಸಂಪನ್ಮೂಲ ಇತ್ತು. ಈ ಸಲ ಅಂತಹ ಬೊಕ್ಕಸವನ್ನೇ ಅದು ಕಳೆದುಕೊಂಡಿತ್ತು. ಪಕ್ಷದ ಸೋಲಿನಲ್ಲಿ ಈ ಅಂಶವೂ ಪಾತ್ರ ವಹಿಸಿದೆ' ಎಂದು ಹೇಳಿದರು.`ಕಾಂಗ್ರೆಸ್ ಪಕ್ಷವೇನೂ ಚುನಾವಣೆಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಿಲ್ಲ. ಪ್ರಜಾತಂತ್ರದ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಯಿತು ಎಂಬುದು ಬೊಗಳೆ. ಮೊದಲ ಪಟ್ಟಿಯಲ್ಲಿದ್ದ ಹೆಸರುಗಳಲ್ಲಿ ಸೋಲುವ ಮುಖಗಳು ಹೆಚ್ಚಾಗಿದ್ದವು. ಚುನಾವಣೆ ಮುಗಿಯುವವರೆಗೆ ಒಗ್ಗಟ್ಟು ಕಾಣಲಿಲ್ಲ. ಭಿನ್ನಮತ ರಂಗಸಜ್ಜಿಕೆ ಮೇಲೇ ಮೆರೆಯಿತು. ಅಂಬರೀಷ್ ಮತ್ತು ಅನಿಲ್ ಲಾಡ್ ಬಹಿರಂಗ ಬಂಡಾಯ ಸಾರಿದರು' ಎಂದು ಮೆಲುಕು ಹಾಕಿದರು.`ಕಾಂಗ್ರೆಸ್ ಎಂದರೆ ರೈಲ್ವೆ ಪ್ಲಾಟ್‌ಫಾರ್ಮ್ ಇದ್ದಂತೆ. ಹತ್ತುವವರು, ಇಳಿಯುವವರು ಇದ್ದೇ ಇರುತ್ತಾರೆ ಎಂದೊಮ್ಮೆ ಪಿ.ವಿ. ನರಸಿಂಹರಾವ್ ಹೇಳಿದ್ದರು. ಅದು ನಿಜ ಕೂಡ. ಮುಂಬೈನಲ್ಲಿ ಈ ಹಿಂದೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದಿಂದ ಎರಡು ರೈಲುಗಳನ್ನು ಬಿಡಲಾಗಿತ್ತು. ಅಲ್ಲಿದ್ದ ಎರಡೂ ಗುಂಪುಗಳ ನಡುವೆ ಯಾವುದೇ ಕದನ ನಡೆಯಬಾರದು ಎನ್ನುವ ಮುನ್ನೆಚ್ಚರಿಕೆ ಕ್ರಮ ಅದಾಗಿತ್ತು' ಎಂದು ಮೇನರ್ ಚಟಾಕಿ ಹಾರಿಸಿದರು.`ರಾಜ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಇದ್ದರೂ ಪರಿಸ್ಥಿತಿ ಅಷ್ಟೇನೂ ಕೆಟ್ಟಿಲ್ಲ. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಂತಹ `ಅರ್ಹ' ಮುಖ್ಯಮಂತ್ರಿ ಅಭ್ಯರ್ಥಿಗಳು ಆ ಪಕ್ಷದಲ್ಲಿದ್ದರು. ಬೇರೆ ಪಕ್ಷಗಳಿಗೆ ಹೋಲಿಸಿದರೆ ಯುವ ಅಭ್ಯರ್ಥಿಗಳು ಕಾಂಗ್ರೆಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ಪಕ್ಷದ ಗೆಲುವಿಗೆ ಕಾರಣವಾದ ಇತರ ಅಂಶಗಳು ಇವಾಗಿವೆ' ಎಂದು ಪಟ್ಟಿ ಮಾಡಿದರು.`ಚುನಾವಣಾ ಆಯೋಗವೂ ಕೆಲವು ಸಂದರ್ಭದಲ್ಲಿ ತನ್ನ ಮಿತಿಯನ್ನು ದಾಟಿ ಪಕ್ಷಗಳಿಗೆ ಮೂಗುದಾರ ಹಾಕಲು ಹೋಯಿತು. ಅದರ ಪ್ರಭಾವವೂ ಫಲಿತಾಂಶದ ಮೇಲೆ ಬೀರಿತು' ಎಂದು ಅಭಿಪ್ರಾಯಪಟ್ಟರು. `ಬೆಂಗಳೂರಿನ ಕೆಲವು ಬಿಜೆಪಿ ಶಾಸಕರು ಹೆಸರು ಕೆಡಿಸಿಕೊಂಡಿರಲಿಲ್ಲ. ಒಂದಿಷ್ಟು ಕೆಲಸವನ್ನೂ ಮಾಡಿದ್ದರು. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಮೀನ-ಮೇಷ ಮಾಡಿತು. ಹೀಗಾಗಿ ರಾಜಧಾನಿಯಲ್ಲಿ ಕಾಂಗ್ರೆಸ್ ಯಶ ಸಾಧಿಸಲಿಲ್ಲ' ಎಂದರು.ನಿತೀಶ್ ಮುಂದಿನ ಪ್ರಧಾನ ಮಂತ್ರಿ?

`ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುಪಿಎ ನೆಲ ಕಚ್ಚಲಿದ್ದು, ಎನ್‌ಡಿಎ ಸಹ ಆಡಳಿತಕ್ಕೆ ಬರುವುದಿಲ್ಲ. ಈ ಹಿಂದೆ ಎಚ್.ಡಿ. ದೇವೇಗೌಡ ಪ್ರಧಾನಿಯಾದಂತೆ ತೃತೀಯ ರಂಗದ ವ್ಯಕ್ತಿಯೊಬ್ಬರು ಆ ಹುದ್ದೆ ಅಲಂಕರಿಸಲಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಆ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ' ಎಂದು ಜೇಮ್ಸ ಮೇನರ್ ಹೇಳಿದರು.`ನರೇಂದ್ರ ಮೋದಿ ಅವರ ಮೋಡಿ ಯಾವುದೇ ಪ್ರಭಾವ ಮಾಡದು' ಎಂದು ಭವಿಷ್ಯ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.