ಶನಿವಾರ, ನವೆಂಬರ್ 23, 2019
18 °C

ಬಿಜೆಪಿಗೆ ಉಳಿಕೆಯ, ಕಾಂಗ್ರೆಸ್‌ಗೆ ಗಳಿಕೆಯ ತವಕ

Published:
Updated:

ಉಡುಪಿ: ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯ ಉಡುಪಿ, ಕಾರ್ಕಳ, ಬೈಂದೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ. ಕುಂದಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೊಂದಿಗೆ ಸೆಣಸುವುದು ಅನಿವಾರ್ಯ. ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಇದ್ದರೂ ಜೆಡಿಎಸ್ ಪಡೆಯುವ ಮತಗಳು ಗೆಲ್ಲುವ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಲಿದೆ.ಎಲ್ಲ ಕ್ಷೇತ್ರಗಳಲ್ಲಿ ಬಂಟ, ಬಿಲ್ಲವ ಮತ್ತು ಮೊಗವೀರ ಸಮುದಾಯದ ಮತದಾರರು ನಿರ್ಣಾಯಕ.  ಆದರೆ ಜಾತಿಗಿಂತ ಪಕ್ಷ ಮತ್ತು ವ್ಯಕ್ತಿ ಆಧಾರಿತವಾಗಿ ಜನರು ಮತದಾನ ಮಾಡುವ ಲಕ್ಷಣಗಳು ಇರುವುದನ್ನು ಸುಲಭವಾಗಿ ಗುರುತಿಸಬಹುದು.ಉಡುಪಿ: ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಮತ್ತು ಬಿಜೆಪಿಯ ಬಿ. ಸುಧಾಕರ ಶೆಟ್ಟಿ ಅವರ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಸಿ.ಡಿ. ಹಗರಣದಿಂದ ಟಿಕೆಟ್ ಕಳೆದುಕೊಂಡಿರುವ ಹಾಲಿ ಶಾಸಕ ಕೆ. ರಘುಪತಿ ಭಟ್ ತಾವೇ ಸೂಚಿಸಿದ ಅಭ್ಯರ್ಥಿ ಸುಧಾಕರ ಶೆಟ್ಟಿ ಪರವಾಗಿ ಹಗಲಿರುಳು ಪ್ರಚಾರ ನಡೆಸಿ ಬಿಜೆಪಿ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ.ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಘುಪತಿ ಭಟ್ `ಕ್ಷೇತ್ರದಲ್ಲಿ ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಿಸಿದ್ದನ್ನೇ' ಪ್ರಚಾರ ಕಾಲದಲ್ಲಿ ವಿಶೇಷವಾಗಿ ಪ್ರಸ್ತಾಪಿಸುತ್ತಿದ್ದಾರೆ. ಇದೇ ಆಧಾರದ ಮೇಲೆ ಭಟ್ ಮತ್ತು ಸುಧಾಕರ ಶೆಟ್ಟಿ ಮತ ಯಾಚನೆ ಮಾಡುತ್ತಿದ್ದಾರೆ.ಎರಡು ಬಾರಿ ಪರಾಭವಗೊಂಡಿರುವ ಪ್ರಮೋದ್ ಮಧ್ವರಾಜ್ ಈ ಬಾರಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. 2008ರ ಚುನಾವಣೆಯಲ್ಲಿ ಸೋತ ನಂತರ ಸುಮ್ಮನೆ ಕೂರದ ಅವರು ಸ್ವಂತ ಹಣದಿಂದ ಸಹಾಯ ಮಾಡುತ್ತ ಜನರಿಗೆ ಹತ್ತಿರವಾಗಿದ್ದಾರೆ.ಕ್ಷೇತ್ರದ ಮತದಾರರನ್ನು ಮಾತನಾಡಿಸಿದರೆ ಇಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಮತ್ತು ಪ್ರಮೋದ್ ಅವರ ದಾನ- ಧರ್ಮ ಎರಡೂ ವಿಷಯದ ಬಗ್ಗೆ ಮಾತನಾಡುತ್ತಾರೆ. ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಜನರು ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಜೈ ಎನ್ನುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಜೆಡಿಎಸ್‌ನ ಸತೀಶ್ ಪೂಜಾರಿ, ಬಿಎಸ್‌ಪಿಯ ವಿ. ಮಂಜುನಾಥ್ ಹಾಗೂ ಮೂವರು ಪಕ್ಷೇತರರು ಸೇರಿ ಒಟ್ಟು ಏಳು ಮಂದಿ ಕಣದಲ್ಲಿದ್ದಾರೆ.ಕಾಪು: ಮಾಜಿ ಸಚಿವ ವಸಂತ ವಿ ಸಾಲಿಯಾನ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ನಂತರ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ಕಾಪು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಕಾಂಗ್ರೆಸ್‌ನಿಂದ ಎಐಸಿಸಿ ಕಾರ್ಯದರ್ಶಿ ವಿನಯ್ ಕುಮಾರ್ ಸೊರಕೆ ಮತ್ತು ಬಿಜೆಪಿಯ ಹಾಲಿ ಶಾಸಕ ಲಾಲಾಜಿ ಆರ್ ಮೆಂಡನ್ ಕಣದಲ್ಲಿದ್ದಾರೆ.ಲಾಲಾಜಿ ಕಳೆದ ಬಾರಿ 967 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸೌಮ್ಯ ಸ್ವಭಾವದಿಂದ ಜನರ ಪ್ರೀತಿಗೆ ಪಾತ್ರರಾಗಿರುವ ಅವರು ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದಾರೆ ಎಂಬ ಅಭಿಪ್ರಾಯ ಇದೆ. ಕ್ಷೇತ್ರದಲ್ಲಿ ಸಂಚರಿಸುವಾಗ ಸಿಗುವ ಉತ್ತಮ ರಸ್ತೆಗಳು ಇದಕ್ಕೆ ಸಾಕ್ಷಿ ಎನ್ನುತ್ತಾರೆ ಅವರ ಬೆಂಬಲಿಗರು.1999ರಲ್ಲಿ ಉಡುಪಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರೂ ವಿನಯ್‌ಕುಮಾರ್ ಕಾಪು ಕ್ಷೇತ್ರಕ್ಕೆ ಹೊಸಬರು ಎಂಬ ಅಭಿಪ್ರಾಯ ಮತದಾರರಲ್ಲಿದೆ. ಸಾಲಿಯಾನ ಬಂಡಾಯ ಮತ್ತು ಸೊರಕೆ ಹೊರಗಿನ ವ್ಯಕ್ತಿ ಎಂಬ ಭಾವನೆ ಕಾಂಗ್ರೆಸ್‌ಗೆ ಇಲ್ಲಿ ಹಿನ್ನಡೆ.ಐದು ಬಾರಿ ಶಾಸಕರಾಗಿದ್ದ ಸಾಲಿಯಾನ ಅವರಿಗೆ ವೈಯಕ್ತಿಕ ಬೆಂಬಲದ ಮತಗಳಿವೆ. ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಕಾಂಗ್ರೆಸ್‌ನ ಎಷ್ಟು ಮತಗಳನ್ನು ಅವರು ಸೆಳೆಯುತ್ತಾರೆ ಎಂಬುದರ ಮೇಲೆ ಈ ಕ್ಷೇತ್ರದ ಫಲಿತಾಂಶ ನಿರ್ಧಾರವಾಗಲಿದೆ.ಕಾರ್ಕಳ: ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಎಚ್. ಗೋಪಾಲ ಭಂಡಾರಿ ಮತ್ತು ಬಿಜೆಪಿಯ ಮಾಜಿ ಶಾಸಕ ವಿ. ಸುನಿಲ್ ಕುಮಾರ್ ಅವರ ಮಧ್ಯೆ ಭಾರಿ ಸ್ಪರ್ಧೆಯೇ ನಡೆಯುತ್ತಿದೆ. ಬಿಜೆಪಿ ಅಲೆಯ ಹೊರತಾಗಿಯೂ ಸುನಿಲ್ ಅವರನ್ನು ಗೋಪಾಲ ಭಂಡಾರಿ ಕಳೆದ ಬಾರಿ ಸೋಲಿಸಿದ್ದರು. ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಈ ಇಬ್ಬರು ಅಭ್ಯರ್ಥಿಗಳ ನಡವಳಿಕೆ, ಕೆಲಸ, ಸಕಾರಾತ್ಮಕ, ನಕಾರಾತ್ಮಕ ಗುಣಗಳ ಬಗ್ಗೆ ಜನರು ಪಟ್ಟಿಯನ್ನೇ ಮುಂದಿಡುತ್ತಾರೆ.ಸುನಿಲ್ ಕುಮಾರ್ ಜನರೊಂದಿಗೆ ಬೆರೆಯುವುದನ್ನು, ಸೌಜನ್ಯದಿಂದ ಮಾತನಾಡು ವುದನ್ನು ಇನ್ನೂ ಬಹಳ ಕಲಿಯಬೇಕು ಎಂದು ಹೇಳುವ ಜನರು, ಈ ವಿಷಯದಲ್ಲಿ ಭಂಡಾರಿ ಅವರಿಗೆ ಪೂರ್ಣ ಅಂಕ ನೀಡುತ್ತಾರೆ. `ಕೆಲಸ ಮಾಡದಿದ್ದರೂ ಸಮಾಧಾನದಿಂದ ಸಮಸ್ಯೆ ಕೇಳಿಸಿಕೊಳ್ಳುತ್ತಾರೆ, ಅದೇ ಮುಖ್ಯ ಅಲ್ಲವೇ' ಎಂದು ಪ್ರಶ್ನಿಸುವವರೂ ಬಹಳ ಸಂಖ್ಯೆಯಲ್ಲಿದ್ದಾರೆ. ಕಾರ್ಕಳ ಪುರಸಭೆಯನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಕ್ಷೇತ್ರ ಉಳಿಯುವುದೇ ಕಾದು ನೋಡಬೇಕಿದೆ.ಬೈಂದೂರು: ಬಿಜೆಪಿಯ ಬಿ.ಎಂ. ಸುಕುಮಾರ ಶೆಟ್ಟಿ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆಗಿರುವ ಕೆ. ಗೋಪಾಲ ಪೂಜಾರಿ ಅವರು ವಿಜಯ ಪತಾಕೆ ಹಾರಿಸಲು ಹರಸಾಹಸ ಪಡುತ್ತಿರುವ ಕ್ಷೇತ್ರವಿದು.ಹಿಂದಿನ ಚುನಾವಣೆಯಲ್ಲಿ ಪರಾಭವನಗೊಂಡಿದ್ದ ಗೋಪಾಲ ಪೂಜಾರಿ ಈ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಟಿಕೆಟ್ ಹಂಚಿಕೆ ಗೊಂದಲ ಇಲ್ಲದ ಕಾರಣ ಅವರು ಒಂದು ವರ್ಷದಿಂದ ಕ್ಷೇತ್ರ ಬಿಟ್ಟು ಹೋಗಿಲ್ಲ. ಗೆಲ್ಲಲು ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿ ಆಗಿದ್ದ ಸುಕುಮಾರ ಶೆಟ್ಟಿ ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದರೂ ಧಾರ್ಮಿಕ ಕಾರಣದಿಂದ ಕ್ಷೇತ್ರದಲ್ಲಿ ಪರಿಚಿತರು.ಕುಂದಾಪುರ: ಮಂತ್ರಿ ಸ್ಥಾನ ನೀಡುವುದಾಗಿ ಆಹ್ವಾನಿಸಿ ಮೋಸ ಮಾಡಿದರು ಎಂದು ಆರೋಪಿಸಿ ಬಿಜೆಪಿಗೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ನಾಲ್ಕನೇ ಬಾರಿ ಗೆಲುವು ಸಾಧಿಸಲು  ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಮಲ್ಯಾಡಿ ಶಿವರಾಮ ಶೆಟ್ಟಿ ಮತ್ತು ಬಿಜೆಪಿಯಿಂದ ಕಿಶೋರ್ ಕುಮಾರ್ ಕಣದಲ್ಲಿದ್ದಾರೆ.ಕಳೆದ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದ ಬಿಜೆಪಿ ಈ ಬಾರಿ ಅದೇ ಫಲಿತಾಂಶವನ್ನು ಉಳಿಸಿಕೊಂಡೀತೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಪ್ರತಿಕ್ರಿಯಿಸಿ (+)