ಬಿಜೆಪಿಗೆ ನೂತನ ಸಾರಥ್ಯ

7
ಕೆಜೆಪಿಯತ್ತ ಹೆಜ್ಜೆ ಹಾಕಿದ ಡಾ. ವೀರಬಸವಂತರಡ್ಡಿ ಮುದ್ನಾಳ

ಬಿಜೆಪಿಗೆ ನೂತನ ಸಾರಥ್ಯ

Published:
Updated:

ಯಾದಗಿರಿ: ಹಾವೇರಿ ಸಮಾವೇಶ ಮುಕ್ತಾಯವಾಗುತ್ತಿದ್ದಂತೆಯೇ ಬಿಜೆಪಿ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕವಾಗಿದ್ದು, ಇದರಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಡಾ. ವೀರಬಸವಂತರಡ್ಡಿ ಮುದ್ನಾಳರು ಕೆಜೆಪಿ ಸೇರುವುದು ಬಹುತೇಕ ಖಚಿತವಾದಂತಾಗಿದೆ.ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿದ್ದ ವೀರಣ್ಣ ಮಲ್ಲಾಬಾದಿ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಆದೇಶ ಹೊರಡಿಸಿದ್ದಾರೆ.ಬಿ.ಎಸ್. ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರೆಂದೇ ಬಿಂಬಿತವಾಗಿದ್ದ ಮುದ್ನಾಳ ಸಹೋದರರಲ್ಲಿ ಗುರುಮಠಕಲ್ ಕ್ಷೇತ್ರದ ಪ್ರಬಲ ಆಕಾಂಕ್ಷಿ ವೆಂಕಟರಡ್ಡಿ ಮುದ್ನಾಳ ಈಗಾಗಲೇ ತಮ್ಮ ಬೆಂಬಲಿಗರೊಂದಿಗೆ ಕೆಜೆಪಿಗೆ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ. ಆದರೆ ಹಾವೇರಿ ಸಮಾವೇಶಕ್ಕೆ ತೆರಳಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೀರಬಸವಂತರಡ್ಡಿ ಮುದ್ನಾಳ, ಇದುವರೆಗೆ ಅಧಿಕೃತವಾಗಿ ಕೆಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. ಬಿಜೆಪಿ ಬಿಡುತ್ತಿರುವುದಾಗಿಯೂ ಹೇಳಿಲ್ಲ. ಆದರೂ ಬಿಜೆಪಿ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿರುವುದರಿಂದ ಡಾ. ಮುದ್ನಾಳರು ಬಿಜೆಪಿಗೆ ವಿದಾಯ ಹೇಳುವುದು ನಿಶ್ಚಿತವಾದಂತಾಗಿದೆ.ಕೆಜೆಪಿ ಪಕ್ಷದ ಗಾಳಿ ಬೀಸುತ್ತಿದ್ದಂತೆಯೇ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಮೂಡಿದ್ದು, ಯಾವ ನಾಯಕರು, ಯಾವ ಪಕ್ಷದಲ್ಲಿದ್ದಾರೆ ಎಂಬುದು ತಿಳಿಯದಂತಾಗಿದೆ. ವೆಂಕಟರಡ್ಡಿ ಮುದ್ನಾಳರು ಕೆಜೆಪಿಯಲ್ಲಿ ಇರುವುದರಿಂದ ಅವರ ಬೆಂಬಲಿಗರು ಕೆಜೆಪಿ ಪಕ್ಷದ ಸಂಘಟನೆಗೆ ಕೆಲಸ ಮಾಡುತ್ತಿದ್ದಾರೆ. ಇನ್ನು ಡಾ. ವೀರಬಸವಂತರಡ್ಡಿ ಕೂಡ ಅದೇ ಹಾದಿಯನ್ನು ಮನ್ನೆಡೆಯುವುದು ಖಚಿತವಾಗಿದೆ. ಇನ್ನು ಶಹಾಪುರ, ಸುರಪುರ ಕ್ಷೇತ್ರದ ಕಾರ್ಯಕರ್ತರಲ್ಲಿ ಇನ್ನೂ ಗೊಂದಲದ ವಾತಾವರಣ ಮುಂದುವರಿದಿದೆ.2008 ರಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಡಾ. ವೀರಬಸವಂತರಡ್ಡಿ ಮುದ್ನಾಳ, ರಾಜ್ಯ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರ ಬಿಜೆಪಿ ಅಭ್ಯರ್ಥಿಯಾಗಿ ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋಲು ಅನುಭವಿಸಿದ್ದರು. ಅದಾದ ನಂತರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.ಡಾ. ವೀರಬಸವಂತರಡ್ಡಿ ಮುದ್ನಾಳರ ಸಾರಥ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರಸಭೆಯ ಉಪಚುನಾವಣೆಗಳನ್ನು ಎದುರಿಸಿದ್ದ ಬಿಜೆಪಿ, ಎಲ್ಲಿಯೂ ಅಧಿಕಾರಿದ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಲಿಲ್ಲ. ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಏಳು ಸ್ಥಾನ ಗಳಿಸಿದರೆ, ಕಾಂಗ್ರೆಸ್ 15 ಸ್ಥಾನ ಪಡೆದು, ಅಧಿಕಾರ ಹಿಡಿಯಿತು. ಮೂರು ತಾಲ್ಲೂಕು ಪಂಚಾಯಿತಿಗಳಲ್ಲೂ ಬಿಜೆಪಿ ಅಧಿಕಾರದಿಂದ ದೂರವೇ ಉಳಿಯುವಂತಾಗಿದೆ. ಇತ್ತೀಚೆಗಷ್ಟೇ ನಡೆದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾದಗಿರಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿತ್ತು. ಇದನ್ನು ಬಿಟ್ಟರೆ, ಜಿಲ್ಲೆಯಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಅಧಿಕಾರ ಸಿಕ್ಕಿಲ್ಲ.ಹೊಸ ಅಧ್ಯಕ್ಷರ ಮೇಲೆ ಹೆಚ್ಚಿದ ಜವಾಬ್ದಾರಿ:

ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ವೀರಣ್ಣ ಮಲ್ಲಾಬಾದಿ ಅವರನ್ನು ನೇಮಕ ಮಾಡಲಾಗಿದ್ದು, ಮುದ್ನಾಳ ಸಹೋದರರು ಇಲ್ಲದೇ ಬಿಜೆಪಿ ಪಕ್ಷವನ್ನು ಸಂಘಟಿಸಬೇಕಾಗಿದೆ. ಜೊತೆಗೆ ಬರಲಿರುವ ವಿಧಾನಸಭೆ ಚುನಾವಣೆಗೂ ಕಡಿಮೆ ಅವಧಿಯಲ್ಲಿ ಪಕ್ಷವನ್ನು ಸಿದ್ಧಗೊಳಿಸಬೇಕಾಗಿದೆ.ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ. ಗುರುಮಠಕಲ್ ಮತಕ್ಷೇತ್ರದಲ್ಲಿ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇನ್ನು ಯಾದಗಿರಿ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದು, ತೊಗರಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ ಮಧ್ಯೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ಶಹಾಪುರ ಕ್ಷೇತ್ರದಲ್ಲಿ ಗುರು ಪಾಟೀಲ ಶಿರವಾಳ ಅವರನ್ನು ಕಣಕ್ಕೆ ಇಳಿಸುವ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಸುರಪುರ ಕ್ಷೇತ್ರದಲ್ಲಿ ಹಾಲಿ ಸಚಿವ ರಾಜುಗೌಡರೇ ಅಭ್ಯರ್ಥಿಯಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಒಂದು ವೇಳೆ ರಾಜುಗೌಡರು ಕಾಂಗ್ರೆಸ್‌ಗೆ ಸೇರಿದರೆ, ಮತ್ತೊಬ್ಬ ಅಭ್ಯರ್ಥಿಯನ್ನು ಹುಡುಕುವುದು ಅನಿವಾರ್ಯವಾಗಲಿದೆ ಎಂದು ಹೇಳಲಾಗುತ್ತಿದೆ.ಇದರಿಂದಾಗಿ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ವೀರಣ್ಣ ಮಲ್ಲಾಬಾದಿ ಅವರ ಮೇಲೆ ಜವಾಬ್ದಾರಿ ಹೆಚ್ಚಾಗಿದ್ದು, ಪಕ್ಷದ ಸಂಘಟನೆ ಮಾಡುವ ದಿಸೆಯಲ್ಲಿ ಕಾರ್ಯಕರ್ತರ ಪಡೆಯನ್ನು ತಯಾರು ಮಾಡಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry