ಬಿಜೆಪಿಗೆ ಪಾಠ ಕಲಿಸಲು ಸಕಾಲ

7

ಬಿಜೆಪಿಗೆ ಪಾಠ ಕಲಿಸಲು ಸಕಾಲ

Published:
Updated:

ಗದಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಭ್ರಷ್ಟಾಚಾರ ಹಾಗೂ ಜೆಡಿಎಸ್ ಪಕ್ಷವು ಕುಟುಂಬ ರಾಜಕಾರಣದಲ್ಲಿ ತೊಡಗಿಕೊಂಡಿದ್ದು, ಅವರಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್‌ಗೆ ಇದು ಸಕಾಲ ಎಂದು ಎಐಸಿಸಿ ಕಾರ್ಯದರ್ಶಿ ವಿ. ಹನುಮಂತರಾವ್ ಅಭಿಪ್ರಾಯ ಪಟ್ಟರು.ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಕಾಲದಲ್ಲಿ ಕರ್ನಾಟಕವು ವಿಶ್ವೇಶ್ವರಯ್ಯ ಅವರಂತಹ ಮೇಧಾವಿಗಳು, ಅನಿಲ್ ಕುಂಬ್ಳೆ, ಶ್ರೀನಾಥ್, ದ್ರಾವಿಡ್, ಅಶ್ವಿನಿ ನಾಚಪ್ಪರಂತಹ ಕ್ರೀಡಾ ಕಲಿಗಳ ತವರೆಂದು ಹೆಸರಾಗಿತ್ತು.ಆದರೆ ಇಂದು ಈ ರಾಜ್ಯವನ್ನು ಭ್ರಷ್ಟಾಚಾರದ ಮುಖೇನ ಜನ ಗುರುತಿಸುವಂತಾಗಿದೆ. ಜೆಡಿಎಸ್ ಮಾಡಿದ ಅಧಿಕಾರ ಹಸ್ತಾಂತರ ವಂಚನೆಯ ಅನುಕಂಪ ಪಡೆದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಮತ್ತವರ ಪಕ್ಷ ರಾಜ್ಯವನ್ನು ಲೂಟಿ ಮಾಡಿದೆ. ಡಿನೋಟಿಫಿಕೇಶನ್, ಗಣಿ ಹಗರಣದ ಧೂಳು ಮೆತ್ತಿಕೊಂಡಿದೆ. ಹೀಗಾಗಿ ಜನ ಬಿಜೆಪಿ ಮೇಲೆ ಬೇಸತ್ತಿದ್ದು, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ಮನಸ್ಸು ಮಾಡುತ್ತಿದ್ದಾರೆ ಎಂದು ಅವರು ನುಡಿದರು.

ಭ್ರಷ್ಟಾಚಾರದ ವಿರುದ್ಧ ಇಡೀ ರಾಜ್ಯದ ತುಂಬ ಅಡ್ವಾಣಿಯವರು  ಚೈತನ್ಯ ಯಾತ್ರೆ ನಡೆಸಿದರೂ ಯಡ್ಡಿ, ರೆಡ್ಡಿಗಳ ಭ್ರಷ್ಟಾಚಾರದ ಬಗ್ಗೆ ಚಕಾರ ಎತ್ತದಿರುವುದು ಆಶ್ಚರ್ಯ ಎಂದು ಅವರು ನುಡಿದರು.ಸ್ತ್ರೀಯರನ್ನು ದೇವರು ಎಂದು ಪೂಜಿಸುವ ಆರ್‌ಎಸ್‌ಎಸ್‌ನ ಪಕ್ಷದವರೇ ಪವಿತ್ರವಾದ ವಿಧಾನಸೌಧದಲ್ಲಿ ಬ್ಲೂ ಫಿಲಂ ವೀಕ್ಷಿಸಿ ಸಿಕ್ಕಿಬಿದ್ದಿರುವುದು ನಾಚಿಕೆಗೇಡು. ಈ ಮೂವರು ಶಾಸಕರನ್ನು ಸದಸ್ಯತ್ವದಿಂದ ಉಚ್ಛಾಟಿಸುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರೆಯಲಿದೆ ಎಂದರು.ಕಳಂಕಿತರನ್ನು ಮತ್ತೆ ಆರಿಸಬೇಕೇ ಎಂಬುದನ್ನೂ ಜನ ಯೋಚಿಸಬೇಕಿದೆ ಎಂದು ಅವರು ನುಡಿದರು. ಶ್ರೀರಾಮುಲು ಹಣ ಹಂಚಿ ಗೆಲ್ಲುತ್ತಾರೆ. ಆದರೆ ಹೀಗೆ ಮತವನ್ನು ಮಾರಿಕೊಂಡರೆ ನಿಮ್ಮ ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುತ್ತೀರಿ. ಹೀಗಾಗಿ ಸೂಕ್ತ ವ್ಯಕ್ತಿಗಳಿಗೆ ಮತ ಚಲಾಯಿಸಿ ಎಂದರು.ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರವು ಭ್ರಷ್ಟಾಚಾರದ ಮೂಲಕ ನೈತಿಕ ಅಧಃಪತನ ಹೊಂದುತ್ತಿದ್ದು, ಅದಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದರು.ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಗದುಗಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ಅವರು, `ಅಂದು ಇಂದಿರಾ ಅವರು ರಾತ್ರಿ ರೈಲಿನಲ್ಲೇ ಮಲಗಿ, ಬೆಳಿಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರದಾನಿಯೊಬ್ಬರು ಹೀಗೆ ರೈಲಿನಲ್ಲೇ ಕಾಲ ಕಳೆದದ್ದು ಇತಿಹಾಸವೇ ಸರಿ. ಅಂತೆಯೇ ಕಾಟನ್ ಕಾರ್ಪೋರೇಶನ್ ಸ್ಥಾಪನೆ ಮೂಲಕ ಇಲ್ಲಿನವರ ಬೇಡಿಕೆಗಳಿಗೆ ಸ್ಪಂದಿಸಿದ್ದರು~ ಎಂದರು.ಕೆಪಿಸಿಸಿ ಕಾರ್ಯದರ್ಶಿ ಹನುಮಂತಯ್ಯ ಮಾತನಾಡಿ, ಆರ್‌ಎಸ್‌ಎಸ್, ವಿಎಚ್‌ಪಿಯಂತಹ ಸಂಘಟನೆಗಳು ಆಗಿನಿಂದಲೂ ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ಮಹಾತ್ಮ ಗಾಂಧಿವರನ್ನು 9 ಬಾರಿ ಹತ್ಯೆಗೆ ಯತ್ನಿಸಿ ಕೊಲೆ ಮಾಡಿವೆ. ಈಗ ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸುವ ಮೂಲಕ ಮತ್ತೆ ಸಮಾಜದ ಶಾಂತಿ ಹಾಳು ಮಾಡುವ ಪ್ರಯತ್ನ ಮಾಡಿವೆ. ಈ ಕುರಿತು ತನಿಖೆ ನಡೆಸಲು ಬಿಜೆಪಿ ಸರ್ಕಾರಕ್ಕೆ ಧೈರ್ಯ ಇಲ್ಲ ಎಂದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಶಾಸಕ ಡಿ.ಆರ್. ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಘಟಕ ಜಿ.ಎಸ್. ಗಡ್ಡದೇವರ ಮಠ, ಕಾಂಗ್ರೆಸ್ ಮುಖಂಡ ವೆಂಕಟೇಶಗೌಡ, ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಹಾಗೂ ಇತರರು ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry