ಬುಧವಾರ, ಜೂಲೈ 8, 2020
26 °C

ಬಿಜೆಪಿಗೆ ಫಲ ನೀಡದ ಜಿಲ್ಲಾ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ನೂತನ ಜಿಲ್ಲೆಯಾಗಿ ರಚನೆ ಆದ ನಂತರ ಪ್ರಥಮ ಬಾರಿಗೆ ನಡೆದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಫಲಿತಾಂಶ ಹಲವಾರು ಚರ್ಚೆಗಳಿಗೆ ಗ್ರಾಸವಾಗಿದೆ. ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಲೆ ಇರುವುದು ಫಲಿತಾಂಶದಿಂದ ಸ್ಪಷ್ಟವಾಗಿದ್ದು, ಕಾಂಗ್ರೆಸ್ ತನ್ನ ಕೋಟೆಯನ್ನು ಇನ್ನಷ್ಟು ಭದ್ರಪಡಿಸಿಕೊಂಡಂತಾಗಿದೆ.ಜಿಲ್ಲೆಯ ಮೂವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಈ ಬಾರಿಯ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿಯ ಅಧಿಕಾರವನ್ನು ಹಿಡಿದಿದ್ದು, ತಾಲ್ಲೂಕು ಪಂಚಾಯಿತಿಗಳಲ್ಲಿಯೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಏಕೈಕ ಶಾಸಕರನ್ನು ಹೊಂದಿರುವ ಬಿಜೆಪಿ ಮಾತ್ರ ಜಿಲ್ಲಾ ಪಂಚಾಯಿತಿಯ ಏಳು ಸ್ಥಾನಗಳನ್ನು ಗೆಲ್ಲುವ ಮೂಲಕ ನೀರಸ ಪ್ರದರ್ಶನ ನೀಡಿದೆ.ರಾಜ್ಯ ಸರ್ಕಾರದ ಸಾಧನೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಇಳಿದಿದ್ದ ಬಿಜೆಪಿ, ಕಳಪೆ ಸಾಧನೆ ಮಾಡಿದ್ದು, ಇದೀಗ ಆತ್ಮಾವಲೋಕನಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಹಲವಾರು ಯೋಜನೆಗಳು, ಯಾದಗಿರಿ ಜಿಲ್ಲಾ ರಚನೆಯನ್ನು ಬಿಜೆಪಿ ತನ್ನ ಬಂಡವಾಳವನ್ನಾಗಿ ಮಾಡಿಕೊಂಡಿತ್ತು. ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದೂ ಹೇಳಿತ್ತು. ಆದರೆ ಈ ಮಾತು ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದೆ.ನೂತನ ಜಿಲ್ಲೆಯನ್ನು ರಚಿಸಿದ ಬಿಜೆಪಿಗೆ ಮತದಾರರ ಓಲೈಕೆ ಪಡೆಯುವುದು ಸಾಧ್ಯವಾಗಿಲ್ಲ ಎಂಬುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ. ಈ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆ, ಸ್ಥಳೀಯ ಅಭ್ಯರ್ಥಿಗಳೇ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ಕಂದಕೂರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಭೀಮರಾಯ ಸ್ಥಳೀಯರಾಗಿದ್ದು, ಜಿ.ಪಂ. ಮಾಜಿ ಸದಸ್ಯರಿಬ್ಬರನ್ನು ಸೋಲಿಸಿದ್ದಾರೆ.ಇನ್ನೊಂದೆಡೆ ಬಹುತೇಕ ಹೊಸ ಮುಖಗಳೇ ಚುನಾವಣೆಯಲ್ಲಿ ಕಂಡು ಬಂದಿದ್ದು, ಮತದಾರರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮತ ಚಲಾಯಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರದ ಸಾಧನೆ ಹಾಗೂ ನೂತನ ಜಿಲ್ಲಾ ರಚನೆಯಂತಹ ವಿಷಯಗಳು ಮತದಾರರಿಗೆ ಪ್ರಾಮುಖ್ಯವಾಗಿಲ್ಲ ಎಂಬುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ.ಜಿಲ್ಲೆಯಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷವನ್ನೇ ಗೆಲ್ಲಿಸುತ್ತ ಬಂದಿರುವ ಮತದಾರ ಈ ಬಾರಿಯೂ ಅದನ್ನೇ ಮುಂದುವರಿಸಿದ್ದಾರೆ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ. ಯಾದಗಿರಿ, ಗುರುಮಠಕಲ್, ಶಹಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಸುರಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಜೊತೆಗೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಕೂಡ ಹೆಚ್ಚಿನ ಆಸಕ್ತಿ ವಹಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.ಮೇಲ್ನೋಟಕ್ಕೆ ಭದ್ರವಾಗಿದ್ದರೂ, ಒಡೆದ ಮನೆಯಂತಿರುವ ಕಾಂಗ್ರೆಸ್‌ಗೆ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವ ದೊರೆತಿದ್ದು, ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವಾಗಿದೆ. ಕೇಂದ್ರ ಸಚಿವರು ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ಅನುಕೂಲವಾಯಿತು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.ಖಾತೆ ತೆರೆಯದ ಜೆಡಿಎಸ್: ಕಳೆದ ಬಾರಿ ಕೆಲ ಸ್ಥಾನಗಳನ್ನು ಪಡೆಯುವ ಮೂಲಕ ಜಿಲ್ಲಾ ಪಂಚಾಯಿತಿಯಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದ ಜೆಡಿಎಸ್, ಈ ಬಾರಿ ಸಂಪೂರ್ಣವಾಗಿ ನೆಲಕಚ್ಚಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಒಂದೂ ಸ್ಥಾನವನ್ನು ಗಳಿಸುವಲ್ಲಿ ಜೆಡಿಎಸ್ ವಿಫಲವಾಗಿದೆ.ಕೊನೆಯ ಕ್ಷಣದವರೆಗೆ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ ಜೆಡಿಎಸ್, ಅಂತಿಮವಾಗಿ 20 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿದಿತ್ತು. ಇನ್ನೊಂದೆಡೆ ಜಿಲ್ಲಾ ಘಟಕ ಇಲ್ಲದಿರುವುದು, ಹರಿದು ಹಂಚಿಹೋದ ನಾಯಕತ್ವ, ರಾಜ್ಯ ಮಟ್ಟದ ಧುರೀಣರಿಲ್ಲದ ಪ್ರಚಾರಗಳು ಜೆಡಿಎಸ್‌ಗೆ ಮಾರಕವಾಗಿ ಪರಿಣಮಿಸಿವೆ ಎನ್ನುತ್ತಾರೆ ರಾಜಕೀಯ ಪರಿಣಿತರು.ಗುರುಮಠಕಲ್ ಕ್ಷೇತ್ರ ವ್ಯಾಪ್ತಿಯಲ್ಲಿ ನಾಗನಗೌಡ ಕಂದಕೂರ, ಯಾದಗಿರಿ ಹಾಗೂ ಶಹಾಪುರ ಮತಕ್ಷೇತ್ರಗಳಲ್ಲಿ ಶ್ರೀನಿವಾಸರೆಡ್ಡಿ ಚೆನ್ನೂರ, ಸುರಪುರ ಕ್ಷೇತ್ರದಲ್ಲಿ ಜೆಡಿಎಸ್ ಗುಲ್ಬರ್ಗ ಘಟಕದ ಅಧ್ಯಕ್ಷ ಶಂಕರಣ್ಣ ವಣಿಕ್ಯಾಳ ಜೆಡಿಎಸ್‌ನ ನೇತೃತ್ವ ವಹಿಸಿದ್ದರು. ಇದರಿಂದಾಗಿ ಆಯಾ ಭಾಗದ ನಾಯಕರಷ್ಟೇ ಪ್ರಚಾರಕ್ಕೆ ಸೀಮಿತ ಆಗಿ ಉಳಿದಿದ್ದರಿಂದ ಜೆಡಿಎಸ್ ನಷ್ಟ ಅನುಭವಿಸಬೇಕಾಯಿತು ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.ಜಿಲ್ಲೆಯಾದ ನಂತರ ನಡೆದ ಪ್ರಮುಖ ರಾಜಕೀಯ ಚಟುವಟಿಕೆಯಾದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಬಿಜೆಪಿ ಆತ್ಮಾವಲೋಕನಕ್ಕೆ ಮುಂದಾಗಿದೆ. ಜೆಡಿಎಸ್ ಕೂಡ ಸೋಲನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸೋಲಿನ ಕಾರಣಗಳನ್ನು ಹುಡುಕುತ್ತಿದೆ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.