ಬಿಜೆಪಿಗೆ ರಾಜೀನಾಮೆ ನೀಡಿದ್ದು ಬಹಿರಂಗಪಡಿಸಲಿ

7

ಬಿಜೆಪಿಗೆ ರಾಜೀನಾಮೆ ನೀಡಿದ್ದು ಬಹಿರಂಗಪಡಿಸಲಿ

Published:
Updated:

ಚಿಕ್ಕಬಳ್ಳಾಪುರ: `ಜಿಲ್ಲಾ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಆರ್.ನರಸಿಂಹಮೂರ್ತಿಯವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಒಂದು ವಾರದ ಅವಧಿಯೊಳಗೆ ಬಹಿರಂಗಪಡಿಸಬೇಕು~ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಆಗ್ರಹಿಸಿದರು.ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ ಮತ್ತು ಜಿಲ್ಲಾ ಪಂಚಾಯಿತಿಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಏಕೈಕ ಕಾರಣಕ್ಕೆ ನರಸಿಂಹಮೂರ್ತಿಯವರಿಗೆ ಸಿಪಿಎಂನ ಇಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಅಧ್ಯಕ್ಷರ ಚುನಾವಣೆಯಲ್ಲಿ ಅವರ ಪರವಾಗಿ ಮತ ಚಲಾಯಿಸಿದರು ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚುನಾವಣೆ ನಡೆಯುವ ಹಿಂದಿನ ದಿನ ಅಂದರೆ, ಅಕ್ಟೋಬರ್ 3ರವರೆಗೆ ಯಾವುದೇ ರೀತಿ ರಾಜಕೀಯ ಬೆಳವಣಿಗೆ ಕಂಡು ಬಂದಿರಲಿಲ್ಲ. ಆದರೆ ಚುನಾವಣೆ ನಡೆಯುವ ದಿನ ಕಾಂಗ್ರೆಸ್‌ನ ಬಂಡಾಯ ಸದಸ್ಯರು ನಮ್ಮ ಸಿಪಿಎಂ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಸಂಪರ್ಕಿಸಿದರು. ನರಸಿಂಹಮೂರ್ತಿ ಬಿಜೆಪಿಗೆ ರಾಜೀನಾಮೆ ನೀಡುತ್ತಿರುವ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಸಮಾನ ಮನಸ್ಕರ ವೇದಿಕೆ ರಚನೆಯಾಗಿರುವ ಬಗ್ಗೆ ಮಾಹಿತಿ ನೀಡಿದರು ಎಂದು ಅವರು ಹೇಳಿದರು.ಚುನಾವಣೆ ಪ್ರಕ್ರಿಯೆಯು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿದ್ದರೂ ಕಾಂಗ್ರೆಸ್ ಬಂಡಾಯ ಸದಸ್ಯರು ನಮ್ಮಂದಿಗೆ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಬೆಳಿಗ್ಗೆ 9 ಗಂಟೆಯಿಂದಲೇ ಸಂಪರ್ಕದಲ್ಲಿ ಇದ್ದರು. ಬಿಜೆಪಿಗೆ ನರಸಿಂಹಮೂರ್ತಿ ರಾಜೀನಾಮೆ ನೀಡಿರುವ ವಿಷಯ ಕೆಲ ಮಾಧ್ಯಮಗಳ ಮೂಲಕ ತಿಳಿದು ಬಂತು.

 

ಅವರು ಪಕ್ಷೇತರರಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ವಿಷಯ ಖಾತ್ರಿಗೊಂಡ ನಂತರವಷ್ಟೇ ಸಿಪಿಎಂನ ಇಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯರು ಚುನಾವಣೆಯಲ್ಲಿ ನರಸಿಂಹಮೂರ್ತಿ ಪರ ಮತ ಚಲಾಯಿಸಿದರು ಎಂದು ಅವರು ಹೇಳಿದರು.ಜಿಲ್ಲಾ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನರಸಿಂಹಮೂರ್ತಿಯವರು ಬಿಜೆಪಿ ಪಕ್ಷದ ಸದಸ್ಯರಾಗಿ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸುವಂತಿಲ್ಲ. ಅವರು ಒಂದು ವೇಳೆ ಬಿಜೆಪಿ ಸದಸ್ಯರಾಗಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲಿ ಅದು ವಿಶ್ವಾಸಘಾತಕ ಕೃತ್ಯವಾಗಲಿದೆ.

 

ಅದು ಸಾಬೀತಾದಲ್ಲಿ, ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಇಬ್ಬರು ಸದಸ್ಯರು ಅವರಿಗೆ ಅಸಹಕಾರ ತೋರುತ್ತಾರೆ. ವಿವಿಧ ಯೋಜನೆಗಳ ಮಂಜೂರಾತಿಗೆ ಅಡ್ಡಿಪಡಿಸುತ್ತಾರೆ ಎಂದು ಅವರು ಹೇಳಿದರು. ಸಿಪಿಎಂ ಮುಖಂಡರಾದ ಚನ್ನರಾಯಪ್ಪ, ಸಿದ್ದಗಂಗಪ್ಪ, ವೆಂಕಟೇಶ್, ಬಿ.ಎನ್.ಮುನಿಕೃಷ್ಣಪ್ಪ ಹಾಜರಿದ್ದರು.ಅವಿಶ್ವಾಸ ನಿರ್ಣಯದ ಎಚ್ಚರಿಕೆ

ಚಿಕ್ಕಬಳ್ಳಾಪುರ:
`ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಎಂ ಪಾತ್ರ ಪ್ರಮುಖವಾಗಿತ್ತು. ಜಿಲ್ಲಾ ಪಂಚಾಯಿತಿಯ 27 ಸ್ಥಾನಗಳಲ್ಲಿ ನಾವು 2 ಸ್ಥಾನಗಳಲ್ಲಿದ್ದೇವೆ. ನಾವೇ ಯಾರ ಪರವಾಗಿ ಮತ ಚಲಾಯಿಸಿದರೂ ರಾಜಕೀಯ ಚಿತ್ರಣವೇ ಬದಲಾಗುತ್ತಿತ್ತು~ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಬಿ.ಸಾವಿತ್ರಮ್ಮ ಮತ್ತು ನಾರಾಯಣಮ್ಮ ತಿಳಿಸಿದರು.`ಈ ಅಂಶವನ್ನು ಬಹಿರಂಗಪಡಿಸದೆ ಕೆಲವರು ಬಿಜೆಪಿಯೇ ಗೆಲುವು ಸಾಧಿಸಿದೆ ಎಂಬುದನ್ನು ಬಿಂಬಿಸುತ್ತಿದ್ದಾರೆ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ಬಿಜೆಪಿಗೆ ರಾಜೀನಾಮೆ ನೀಡಿದ ನಂತರವಷ್ಟೇ ನರಸಿಂಹಮೂರ್ತಿಯವರ ಪರವಾಗಿ ಮತ ಚಲಾಯಿಸಿದ್ದೇವೆ. ಪಕ್ಷೇತರ ಅಧ್ಯಕ್ಷರಾಗಲು ಅವಕಾಶ ಮಾಡಿಕೊಟ್ಟಿದ್ದೇವೆ ಹೊರತು ಬಿಜೆಪಿ ಅಧ್ಯಕ್ಷರಾಗಿ ಉಳಿಯಲು ಅಲ್ಲ.

 

ಅವರು ಒಂದು ವೇಳೆ ಬಿಜೆಪಿ ಸದಸ್ಯರಾಗಿಯೇ ಉಳಿದಲ್ಲಿ, ಅವರ ವಿರುದ್ಧ ಕೆಲವೇ ದಿನಗಳಲ್ಲಿ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಗುವುದು. ಇದಕ್ಕೆ ಸದಸ್ಯರ ಸಮಾನ ಮನಸ್ಕರ ವೇದಿಕೆಯು ಸಮ್ಮತಿ ಸೂಚಿಸಲಿದೆ ಎಂಬ ವಿಶ್ವಾಸವಿದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry