ಬುಧವಾರ, ಜೂನ್ 3, 2020
27 °C

ಬಿಜೆಪಿಗೆ ವರ್ತೂರು ಬಣ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲಾ ಪಂಚಾಯತ್‌ನಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಬಹುಮತ ಬಾರದೇ ಅತಂತ್ರ ಸ್ಥಿತಿ ಏರ್ಪಟ್ಟಿರುವ ಹಿನ್ನಲೆಯಲ್ಲಿ ತಮ್ಮ ಬಣದ ಪಕ್ಷೇತರ ಸದಸ್ಯರು ಕ್ಷೇತ್ರದ ಅಭಿವೃದ್ಧಿಗಾಗಿ, ಯರಗೋಳ್ ಯೋಜನೆ ಅನುಷ್ಠಾನಕ್ಕಾಗಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಕೋಲಾರ ಜಿಪಂ ಮೇಲೆ ಬಿಜೆಪಿ ಬಾವುಟ ಹಾರಾಡಲಿದೆ ಎಂದು ಶಾಸಕ ಆರ್. ವರ್ತೂರ್ ಪ್ರಕಾಶ್ ಭವಿಷ್ಯ ನುಡಿದರು.ಚುನಾವಣಾ ಫಲಿತಾಂಶ ಮಂಗಳವಾರ ಹೊರಬಿದ್ದ ನಂತರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಹಿತದೃಷ್ಟಿಯಿಂದ ಯಡಿಯೂರಪ್ಪನವರ ಕೈ ಬಲಪಡಿಸಬೇಕಾಗಿದೆ. ತಮ್ಮ ಬಣದ ಮೂರು ಜಿಪಂ ಮತ್ತು 10 ತಾಪಂ ಅಭ್ಯರ್ಥಿಗಳಿಗೆ ಜನತೆ ಆಶೀರ್ವಾದ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ಹಿಮ್ಮೆಟ್ಟಿಸುವ ರೀತಿ ಅತ್ಯಧಿಕ ಮತಗಳ ಅಂತರದಲ್ಲಿ ನನ್ನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಎಲ್ಲಾ ರಾಜಕೀಯ ಪಕ್ಷಗಳನ್ನು ಸುತ್ತಾಡಿ ಕಳೆದ 15 ದಿನಗಳ ಹಿಂದೆ ಜೆಡಿಎಸ್‌ಗೆ ಹೋಗಿರುವ ಮಾಜಿ ಶಾಸಕ ಶ್ರೀನಿವಾಸಗೌಡರ ದಳ ನೆಲ ಕಚ್ಚಿದೆ. ಕೋಲಾರ ವಿಧಾನಸಭಾ ಕ್ಷೇತ್ರದ 16 ತಾಪಂಗಳಲ್ಲಿ 10 ಕಡೆ ಸೋಲುವ ಮೂಲಕ ಕ್ಷೇತ್ರದಲ್ಲಿ ಅವರ ಹಿಡಿತ ಕೈ ತಪ್ಪಿದೆ ಎಂದು ಟೀಕಿಸಿದರು. ಜಿಲ್ಲೆಯಲ್ಲಿ 5 ಮಂದಿ ಪಕ್ಷೇತರರು ಜಿಪಂ ಚುನಾವಣೆಯಲ್ಲಿ ಗೆದ್ದಿದ್ದು, ಅವರೆಲ್ಲರೂ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡ ಬೆಗ್ಲಿ ಸೂರ್ಯಪ್ರಕಾಶ್, ಜಿಪಂ ಸದಸ್ಯ ಅಮರ್‌ನಾಥ್, ಯುವ ಮುಖಂಡ ಕೋಳಿರಾಂ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಭಾರೀ ಜನಸ್ತೋಮದ ನಡುವೆ ಶಾಸಕರು ವಿಜಯೋತ್ಸವ ಆಚರಿಸಿದರು.  ಜಿಪಂ ಮತ್ತು ತಾಪಂ ಅಭ್ಯರ್ಥಿಗಳ ಜೊತೆ ಪೋಟೋ ಸೆಷನ್ ನಡೆಸಿದರು. ಜಿಪಂ ಗೆದ್ದ ಅಭ್ಯರ್ಥಿಗಳಾದ ನರಸಾಪುರ ಅಮರ್‌ನಾಥ್, ವಕ್ಕಲೇರಿ ಚೌಡೇಶ್ವರಿ, ವೇಮಗಲ್‌ನ ಭಾರತಿ ಪುಟ್ಟಸ್ವಾಮಾಚಾರ್, ತಾಪಂ ಸದಸ್ಯರಾದ ನರಸಾಪುರದ ನಾಗರಾಜ್, ಚೌಡದೇನಹಳ್ಳಿ ಮಂಜುನಾಥ್, ವೇಮಗಲ್‌ನ ಸಿ. ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಮದ್ದೇರಿ ಎಸ್.ಎಂ. ಮುನಿಬೈರಪ್ಪ, ಅಮ್ಮನಲ್ಲೂರು ಸುವರ್ಣ ಶ್ರೀನಿವಾಸ್, ಕ್ಯಾಲನೂರಿನ ಕೋಮಲ ಲೋಕೇಶ್, ವಕ್ಕಲೇರಿಯ ರಮಾದೇವಿ, ಬೆಗ್ಲಿಯ ನಂದಿನಿ ರಾಜಗೋಪಾಲ್, ಮುದುವತ್ತಿ ಸರಸ್ವತಮ್ಮ, ಕಸಬಾದ ಗದ್ದೆಕಣ್ಣೂರು ಕೃಷ್ಣಮೂರ್ತಿ, ಹುತ್ತೂರಿನ ಬಿಜೆಪಿ ಸದಸ್ಯೆ ಕೆ. ಸುನಂದಮ್ಮ ಹಾಜರಿದ್ದರು.ವಕ್ಕಲೇರಿ ರಾಮು, ರಘುರಾಂ, ಯಶೋಧಮ್ಮ, ಕೃಷ್ಣಾಪುರ ಶ್ರೀನಿವಾಸ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್. ರಾಜಣ್ಣ, ಕ್ಯಾಲನೂರು ಮುನ್ನಾ, ಛತ್ರಕೋಡಿಹಳ್ಳಿ ರಾಜಗೋಪಾಲ್, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.