ಬುಧವಾರ, ನವೆಂಬರ್ 13, 2019
23 °C

ಬಿಜೆಪಿಗೆ ಹೆಚ್ಚು ಸ್ಥಾನ: ಡಿವಿಎಸ್ ವಿಶ್ವಾಸ

Published:
Updated:

ಕಾರ್ಕಳ: ರಾಜ್ಯದಲ್ಲಿ ಇಷ್ಟು ಬಾರಿ ವಿರೋಧ ಪಕ್ಷವಾಗಿ ಚುನಾವಣೆ ಎದುರಿಸುತ್ತಿದ್ದ ಬಿಜೆಪಿ ಈ ಬಾರಿ ಆಡಳಿತ ಪಕ್ಷವಾಗಿ ಚುನಾವಣೆ ಎದುರಿಸುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆ ವಿಭಿನ್ನವಾಗಿದ್ದು, ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ. ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವಿಜಯ ಸಂಕಲ್ಪ ಯಾತ್ರೆ ಅದ್ಭುತ ಯಶಸ್ಸು ಕಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 50 ವರ್ಷಗಳ ಆಡಳಿತ, ಜೆಡಿಎಸ್ 12 ವರ್ಷಗಳ ಆಡಳಿತ ಹಾಗೂ ಬಿಜೆಪಿ 5ವರ್ಷ ಆಡಳಿತ ಮಾಡಿದೆ. ಕಳೆದ 5 ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದ ಹೆಗ್ಗಳಿಕೆ ಬಿಜೆಪಿ ಸರ್ಕಾರದ್ದಾಗಿದೆ. ಅಭಿವೃದ್ಧಿಯ ಮೂಲಮಂತ್ರ ಹಿಡಿದು ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ ಜನರ ಆಶೀರ್ವಾದ ಅಗತ್ಯ ಎಂದರು.ಪಕ್ಷದಲ್ಲಿ ಸಣ್ಣ ಪುಟ್ಟ ಕಚ್ಚಾಟಗಳು ನಡೆದಿವೆ. ಕೆಲವರು ಪಕ್ಷ ಬಿಟ್ಟದ್ದೂ ನಿಜ. ಆದರೆ ಚುನಾವಣೆಯ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಯಾವುದೇ ಪ್ರಭಾವ ಗೊಂದಲಗಳಿಗೆ ಅವಕಾಶ ನೀಡಲಿಲ್ಲ. ಶಿಸ್ತುಬದ್ಧ ಹಾಗೂ ಪಟ್ಟಿ ಸಲ್ಲಿಸುವಿಕೆಯಲ್ಲಿ ಕಾಂಗ್ರೆಸ್ ಮಾಡಿದ ಸಾಧನೆ ಹಾಗೂ ಬಿಜೆಪಿಯ ಸಾಧನೆಯನ್ನು ಜನರು ತುಲನೆ ಮಾಡಲಿ. ಹಿಂದುಳಿದ ವರ್ಗ ಹಾಗೂ ಇತರ ವರ್ಗದವರಿಗೆ ಬಿಜೆಪಿ ಸರ್ಕಾರ ಉತ್ತಮ ಬಜೆಟ್ ನೀಡಿದೆ ಎಂದರು.ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ರಾಜ್ಯದ ಆಶೀರ್ವಾದದಿಂದ ಕೇಂದ್ರ ಸಚಿವರಾಗಿದ್ದಾರೆ. ಅದನ್ನು ಅವರು ಮರೆಯಬಾರದು. ಗಾಜಿನ ಮನೆಯಲ್ಲಿ ಕುಳಿತುಕೊಂಡು ಬೇರೆ ಯವರ ಮನೆಯವರ ಮೇಲೆ ಕಲ್ಲೆಸೆಯು ವುದು ಸೂಕ್ತವಲ್ಲ ಎಂದರು.ಈ ಸಂದರ್ಭದಲ್ಲಿ ಬಿಎಸ್‌ಆರ್ ಜಿಲ್ಲಾ ಕಾರ್ಯದರ್ಶಿ ಗಣೇಶ್ ಸಫಲಿಗ ಅವರು ಬಿಜೆಪಿಗೆ ಸೇರ್ಪಡೆಯಾದರು.

ಬೋಳ ಪ್ರಭಾಕರ ಕಾಮತ್, ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಎಂ.ಕೆ. ವಿಜಯ ಕುಮಾರ್, ನಗರಾಧ್ಯಕ್ಷ ಟಿ. ಗಿರಿಧರ ನಾಯಕ್,  ಕಾರ್ಯದರ್ಶಿ ಪ್ರಕಾಶ ರಾವ್, ಆನಂದ ಬಂಡಿಮಠ, ಅಂತೋನಿ ಡಿಸೋಜಾ, ಉದಯ ಎಸ್. ಕೋಟ್ಯಾನ್, ಸುವೃತ ಕುಮಾರ್,     ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)