ಬಿಜೆಪಿಯದ್ದು ರಾವಣನ ಆಡಳಿತ

7

ಬಿಜೆಪಿಯದ್ದು ರಾವಣನ ಆಡಳಿತ

Published:
Updated:

ರಾಯಚೂರು: ದೇಶದಲ್ಲಿ ಮಾತೆತ್ತಿದ್ದರೆ ಬಿಜೆಪಿ ಮಾಡುವುದು ರಾಮ ನಾಮ ಜಪ. ಈ ರಾಜ್ಯದಲ್ಲಿ ಅದು ನಡೆಸುತ್ತಿರುವುದು ರಾವಣನ ಆಡಳಿತ. ಇಲ್ಲಿನ ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಅದನ್ನು ತೊಲಗಿಸಲು ಯುವ ಸಮೂಹ ಜಾಗೃತರಾಗುವ ಮೂಲಕ ಜನಜಾಗೃತಿಗೆ ಮುಂದಾಗಬೇಕು ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಸಾತ್ವಾ ಹೇಳಿದರು.ಶುಕ್ರವಾರ ನಗರದ ಮಹಿಳಾ ಸಮಾಜದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಯುವ ಜಾಗೃತಿ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಇಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಮೇಲೆ ಹಗರಣಗಳು ಬಯಲಿಗೆ ಬಂದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಇಲ್ಲಿನ ಮುಖ್ಯಮಂತ್ರಿಗೆ ಅತ್ಯುತ್ತಮ ಮುಖ್ಯಮಂತ್ರಿ ಎಂದು ಬಿರುದು ಕೊಡುತ್ತಾರೆ. ಇದೆಂಥಾ ವಿಪರ್ಯಾಸ. ಇವರ ನಡತೆಯನ್ನು ದೇಶದ ಜನತೆ ಕಂಡಿದ್ದಾರೆ ಎಂದು ಹೇಳಿದರು.ಆದರ್ಶ ಹೌಸಿಂಗ್ ಸೊಸೈಟಿ ಪ್ರಕರಣ, ತ್ರಿಜಿ ತರಂಗಾಂತರ ಪ್ರಕರಣ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ನಿರ್ಧಾರ ಕೈಗೊಂಡು ಮಾದರಿಯಾಗಿದೆ. ಇದೇ ಅಂಶಗಳನ್ನಿಟ್ಟುಕೊಂಡು ಕೇಂದ್ರದ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು ಇಲ್ಲಿನ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದಿಲ್ಲ. ಬಿಜೆಪಿಯವರು ದೆಹಲಿಗೆ ಬಂದರೆ ರಾಮ. ರಾಜ್ಯಕ್ಕೆ ಬಂದರೆ ರಾವಣ ಆಗುತ್ತಾರೆಯೇ ಎಂದು ಲೇವಡಿ ಮಾಡಿದರು.ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳು ಸುಳ್ಳಾಗಿವೆ. ಇಂಥ ಸರ್ಕಾರವನ್ನು ತೊಲಗಿಸಲು ಹಾಗೂ ದೇಶದ ಅಭಿವೃದ್ಧಿಗೆ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ ಎಂಬ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರು ತೊಟ್ಟಿರುವ ಯುವ ಜಾಗೃತಿ ಸಮಾವೇಶ ಪಣಕ್ಕೆ ಯುವಕರು ಮುಂದಾಗಬೇಕು. ಈ ಸಮಾವೇಶದ ಉದ್ದೇಶ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಸಂಸದ ಜಿತೇಂದ್ರಸಿಂಗ್ ಮಾತನಾಡಿ, ಸಂತರು, ಶರಣರು, ದಾಸರ ನೆಲ ಈ ಕರ್ನಾಟಕದ್ದು. ಇಲ್ಲಿನ ಭ್ರಷ್ಟ ಬಿಜೆಪಿ ಸರ್ಕಾರವು ಇಲ್ಲಿನ ಮಣ್ಣನ್ನೇ ಲೂಟಿ ಮಾಡಿ ಅಧಿಕಾರ ನಡೆಸುತ್ತಿದೆ. ಯುವ ಜನತೆ ಎಚ್ಚೆತ್ತಾಗ ಇಂಥ ಅಕ್ರಮಗಳನ್ನು ತಡೆಯಲು ಸಾಧ್ಯ ಎಂದು ಅವರು ಹೇಳಿದರು.

ಶಾಸಕ ದಿನೇಶ ಗುಂಡೂರಾವ್ ಮಾತನಾಡಿ, ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ ವೆಚ್ಚ ಮಾಡುವುದರಿಂದ ಸಾಮಾನ್ಯ ಮನುಷ್ಯನಿಗೆ ಚುನಾವಣೆ ಸ್ಪರ್ಧಿಸುವುದು ಅಸಾಧ್ಯವಾಗಿದೆ. ಇಂಥ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಯುವ ಸಮೂಹ ಮುಂದಾಗಬೇಕು ಎಂದು ಹೇಳಿದರು.ಭ್ರಷ್ಟಾಚಾರ ಮೈಗೂಡಿಸಿಕೊಂಡಂಥವರನ್ನು ಮುಂದಿನ ಚುನಾವಣೆಗಳಲ್ಲಿ ಯುವ ಜನತೆ ಸಂಪೂರ್ಣವಾಗಿ ತಿರಸ್ಕರಿಸಬೇಕು. ದೇಶದ ಅಭಿವೃದ್ಧಿ ಬಗ್ಗೆಯೂ ಶ್ರಮಿಸಬೇಕು ಎಂದು ತಿಳಿಸಿದರು.ದೇಶದ ಶೇ 70ರಷ್ಟಿರುವ ಯುವಕರು ಈ ದೇಶದ ಬೆನ್ನೆಲುಬು. ರಾಹುಲ್ ಗಾಂಧಿ ಅವರು ರೂಪಿಸಿರುವ ಯುವ ಸಮಾವೇಶ ದೂರದೃಷ್ಟಿ ಯೋಜನೆ ಯಶಸ್ಸಿಗೆ ಯುವ ಸಮೂಹ ಸ್ಪಂದಿಸಬೇಕು ಎಂದು ಕಲಘಟಗಿ ಶಾಸಕ ಸಂತೋಷ ಲಾಡ ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಅವರು, ಸ್ವಚ್ಛ ರಾಜಕೀಯ ವ್ಯವಸ್ಥೆ ರೂಪಿಸಲು, ಯುವ ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಸಮಾವೇಶ ಉದ್ದೇಶ ಸಾಕಾರಕ್ಕೆ ಯುವ ಸಮೂಹ ಆಸಕ್ತಿವಹಿಸಬೇಕು ಎಂದು ತಿಳಿಸಿದರು.ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅಜಯಸಿಂಗ್, ಪ್ರಿಯಾಂಕ ಖರ್ಗೆ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ ವಸಂತಕುಮಾರ, ಶಾಸಕರಾದ ಸಯ್ಯದ್ ಯಾಸಿನ್, ರಾಜಾ ರಾಯಪ್ಪ ನಾಯಕ, ಹಂಪಯ್ಯ ನಾಯಕ, ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಎನ್.ಎಸ್ ಬೋಸರಾಜ, ಮಾಜಿ ಸಂಸದ ಎ ವೆಂಕಟೇಶ ನಾಯಕ, ಪಕ್ಷದ ಮುಖಂಡರಾದ ಬಿ.ವಿ ನಾಯಕ, ಜಯಣ್ಣ, ರುದ್ರಪ್ಪ ಅಂಗಡಿ, ಜಿಪಂ ಸದಸ್ಯ ಅಸ್ಲಂ ಪಾಷಾ  ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry