ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ರೇಣುಕಾಚಾರ್ಯ

7

ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ರೇಣುಕಾಚಾರ್ಯ

Published:
Updated:

ಯಾದಗಿರಿ: ನಮ್ಮ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಹಿಂದುಳಿದವರು ಸಾಕಷ್ಟು ಜನರಿದ್ದಾರೆ. ಅವರಿಗೂ ಒಳ್ಳೆಯ ಖಾತೆ ನೀಡಲಿ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನಾಲ್ಕೈದು ಖಾತೆ ಹೊಂದಿದ್ದಾರೆ. ರಾಜುಗೌಡರು, ರೇವುನಾಯಕ ಬೆಳಮಗಿ, ಗೋವಿಂದ ಕಾರಜೋಳ ಅಂಥವರಿಗೆ ಒಂದೇ ಖಾತೆ ನೀಡಲಾಗಿದೆ. ಅವರಿಗೂ ಒಳ್ಳೆಯ ಖಾತೆ ನೀಡಬೇಕು ಎಂದರು.ಪಕ್ಷದಲ್ಲಿ ಕೆಲವರು ಮಾತ್ರ ಸಮರ್ಥರೇ ಎಂದು ಪ್ರಶ್ನಿಸಿದರಲ್ಲದೆ, ಆಷಾಢಭೂತಿತನ ಬಿಟ್ಟು ಹೊಂದಿರುವ ಮೂರ‌್ನಾಲ್ಕು ಖಾತೆಗಳನ್ನು ಪಕ್ಷದಲ್ಲಿರುವ ಇತರರಿಗೆ ಬಿಟ್ಟು ಕೊಡಲಿ. ನಂತರ ಸಾಮಾಜಿಕ ನ್ಯಾಯದ ಮಾತನಾಡಲಿ ಎಂದು ಡಿಸಿಎಂಗಳಾದ ಆರ್. ಅಶೋಕ, ಕೆ.ಎಸ್. ಈಶ್ವರಪ್ಪ, ಸಚಿವ ಸುರೇಶ ಕುಮಾರರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಅನಂತ ನಾಯಕತ್ವ:

ಅನಂತಕುಮಾರರು ಬಿಜೆಪಿಯ ರಾಷ್ಟ್ರೀಯ ನಾಯಕರು. ಅವರಿಗೂ ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ ಇದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಅವರೇ ವಹಿಸಿಕೊಳ್ಳಲಿ. ಅವರ ನೇತೃತ್ವದಲ್ಲಿ ಬರುವ ಚುನಾವಣೆ ಎದುರಿಸೋಣ. ಜನರು ಅವರ ಪರ ತೀರ್ಪು ನೀಡಿದರೆ ಅವರೇ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರು.ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರಿಗೆ ಅಧ್ಯಕ್ಷ ಸ್ಥಾನವೂ ಬೇಕಿಲ್ಲ, ಮುಖ್ಯಮಂತ್ರಿ ಸ್ಥಾನವೂ ಬೇಕಾಗಿಲ್ಲ. ನಾವೆಲ್ಲ ಹಿಂದೆಯೂ ಅವರ ಜೊತೆಗಿದ್ದವು. ಮುಂದೆಯೂ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು.ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಅವರನ್ನು ಬಲಿಪಶು ಮಾಡಲಾಗಿದೆ. ನರೇಂದ್ರ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾದ ನಂತರ ಗುಜರಾತ್‌ಗೆ ಮೊದಲ ಸ್ಥಾನ ಸಿಕ್ಕಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಎರಡನೇ ವರ್ಷದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ದೊರೆತಿದೆ. 5 ವರ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಬಹುದಿತ್ತು ಎಂಬ ನೋವು ಯಡಿಯೂರಪ್ಪನವರಲ್ಲಿದೆ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry