ಗುರುವಾರ , ಮೇ 13, 2021
40 °C

ಬಿಜೆಪಿಯಲ್ಲಿ ಹಿರಿಯರು ಮೂಲೆಗುಂಪು- ನಿತೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ): ಬಿಜೆಪಿ ಆಂತರಿಕ ಬೆಳವಣಿಗೆಯನ್ನು ಕಟುವಾಗಿ ಟೀಕಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್.ಕೆ. ಅಡ್ವಾಣಿ ಅವರ ಹೆಸರೆತ್ತದೆ ಆ ಪಕ್ಷದಲ್ಲಿ ಹಿರಿಯರನ್ನು ಮೂಲೆಗುಂಪು ಮಾಡಿ ವಿಶ್ವಾಸ ದ್ರೋಹ ಬಗೆಯಲಾಗಿದೆ ಎಂದು ಆಪಾದಿಸಿದರು.`ಪಕ್ಷದ ಹಿರಿಯ ಮುಖಂಡರಿಗೆ ದ್ರೋಹ ಬಗೆದಿರುವ ಬಿಜೆಪಿಯವರಿಗೆ ಬೇರೆಯವರನ್ನು ದೂಷಿಸುವ ಹಕ್ಕಿಲ್ಲ' ಎಂದು ತಮ್ಮ ನಿವಾಸದಲ್ಲಿ ಸೋಮವಾರ ನಡೆದ `ಜನತಾ ದರ್ಶನ' (ಜನತಾ ಕಿ ದರ್ಬಾರ್ ಮೆ ಮುಖ್ಯಮಂತ್ರಿ) ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

`ಬಿಜೆಪಿಯಲ್ಲಿ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದಂತೆ ಜೆಡಿಯುನಲ್ಲೂ ಜಾರ್ಜ್ ಫರ್ನಾಂಡಿಸ್ ಅವರನ್ನು ಕಡೆಗಣಿಸಲಾಯಿತೆ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಇದು ಸತ್ಯಕ್ಕೆ ದೂರವಾದುದು... ಅವರು (ಫರ್ನಾಂಡಿಸ್) ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದಾರೆ. ಅವರನ್ನು ನಾವು ಆಗಾಗ್ಗೆ ಭೇಟಿ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ' ಎಂದರು.`ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಕೆಲವು ಹಿತೈಷಿಗಳು 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮುಜಾಫರ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದರು. ಆದರೆ, ಅವರು ಸೋತಾಗ ಸಲಹೆ ನೀಡಿದ ಹಿತೈಷಿಗಳು ಅವರಿಂದ ದೂರ ಸರಿಸಿದರು' ಎಂದರು.

`ನಂತರದಲ್ಲಿ ನಾನು ಫರ್ನಾಂಡಿಸ್ ಅವರನ್ನು ಭೇಟಿಯಾಗಿದ್ದೆ. ರಾಜ್ಯಸಭಾ ಸದಸ್ಯರಾಗುವಂತೆ ಮನವಿ ಮಾಡಿಕೊಂಡೆ. ಅದಕ್ಕೆ ಅವರೂ ಒಪ್ಪಿದರು. ಅದರಂತೆ ಪಕ್ಷವು ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿತು. ನಮಗೆ ಹಿರಿಯರನ್ನು ಗೌರವದಿಂದ ಕಾಣುವುದರಲ್ಲಿ ನಂಬಿಕೆ ಇದೆ' ಎಂದು ನಿತೀಶ್ ಹೇಳಿದರು.

`ವಿಶ್ವಾಸಘಾತ ಆಗಿದ್ದು ನಮಗೆ': ಜೆಡಿಯು ವಿಶ್ವಾಸ ದ್ರೋಹ ಮಾಡಿದೆ ಎಂಬ ಬಿಜೆಪಿ ಆಪಾದನೆಯನ್ನು ತಳ್ಳಿಹಾಕಿದ ಅವರು, `ಮೈತ್ರಿ ಮುರಿಯುವಂತಹ ಸನ್ನಿವೇಶಕ್ಕೆ ಬಿಜೆಪಿ ಕಾರಣ. ನಮ್ಮಿಂದ ಆಗಿರುವ ದ್ರೋಹವಾದರೂ ಏನು? ವಾಸ್ತವದಲ್ಲಿ ಅವರಿಂದ ನಮಗೆ ವಿಶ್ವಾಸಘಾತವಾಗಿದೆ. ಮೈತ್ರಿಕೂಟದಲ್ಲಿ ಮುಂದುವರಿಯಲಾಗದಂತಹ ಸನ್ನಿವೇಶವನ್ನು ಸೃಷ್ಟಿಸಿದವರು ಅವರು. ಒತ್ತಡದಿಂದ ಮೈತ್ರಿಕೂಟ ನಡೆಸಲಾಗದು' ಎಂದರು.

`ಎನ್‌ಡಿಎ ತೊರೆಯುವ ನಿಲುವು ಅವಸರದ ನಿರ್ಧಾರವಲ್ಲ. ಎಲ್ಲಾ ಆಯಾಮದಲ್ಲೂ ಯೋಚಿಸಿ, ಪಕ್ಷದಲ್ಲಿ ಚರ್ಚಿಸಿ ವಿವೇಚನೆಯಿಂದ ತೆಗೆದುಕೊಂಡ ತೀರ್ಮಾನ ಮತ್ತು ಸರಿಯಾದ ವೇಳೆಯಲ್ಲಿ ಕೈಗೊಂಡ ನಿರ್ಧಾರ' ಎಂದರು.`ಇನ್ನು ಕೆಲವು ಕಾಲ ಕಾದಿದ್ದರೆ ನಮಗೆ ನಾವು ವಂಚನೆ ಮಾಡಿಕೊಳ್ಳುತ್ತಿದ್ದೆವು. ಬಿಜೆಪಿ ವರಿಷ್ಠರು ನಮಗೆ ಯಾವುದೇ ಭರವಸೆ (ಮೋದಿ ಅವರನ್ನು ಪ್ರಧಾನಿ ಹುದ್ದೆ ಅಭ್ಯರ್ಥಿ ಎಂದು ಘೋಷಿಸುವುದಿಲ್ಲ) ನೀಡಲು ಸಿದ್ಧರಿರಲಿಲ್ಲ. ಬದಲಿಗೆ ಮೈತ್ರಿ ಮುರಿಯುವ ನಿರ್ಧಾರವನ್ನು ತಡೆಹಿಡಿಯುವಂತೆ ಮಾತ್ರ ಹೇಳುತ್ತಿದ್ದರು' ಎಂದು ನಿತೀಶ್ ತಿಳಿಸಿದರು.2003ರಲ್ಲಿ ತಾವು  ರೈಲ್ವೆ ಸಚಿವರಾಗಿದ್ದಾಗ ಗುಜರಾತ್‌ನಲ್ಲಿ ನಡೆದ ರೈಲ್ವೆ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯವನ್ನು ಹೊಗಳಿದ್ದ ಬಗ್ಗೆ ಸ್ಪಷ್ಟನೆ ನೀಡಿದ ನಿತೀಶ್, `ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಕೇಂದ್ರ ಸಚಿವರು ಅಲ್ಲಿನ ರಾಜ್ಯ ಸರ್ಕಾರವನ್ನು ಟೀಕಿಸುವುದು ಶಿಷ್ಟಾಚಾರವಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಬಾರದು' ಎಂದರು.`ಕಾಂಗ್ರೆಸ್ ಮೈತ್ರಿ: ಸೂಕ್ತ ಸಮಯವಲ್ಲ': `ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವಿರಾ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಈ ಕುರಿತು ಮಾತನಾಡಲು ಇದು ಸೂಕ್ತ ಸಮಯವಲ್ಲ. ಈಗ ನಮ್ಮ ಆದ್ಯತೆ ಬಿಹಾರದ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುವುದೇ ಆಗಿದೆ ಮತ್ತು ಇದು ನಮ್ಮ ಹೊಣೆ ಕೂಡ' ಎಂದರು.ಮಂಗಳವಾರ (ಜೂನ್ 18)ಬಿಹಾರ  ಬಂದ್‌ಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್, `ಬಿಹಾರದ ಬಿಜೆಪಿ ಮುಖಂಡರ ವಿರುದ್ಧ ಯಾವುದೇ ಆಕ್ಷೇಪ ಇಲ್ಲ. ನಾವು ಒಟ್ಟಾಗಿಯೇ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆವು. ಆದರೆ, ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶವಾದ ಕಾರಣ ಈ ಮೈತ್ರಿಗೆ ಕುತ್ತುಂಟಾಯಿತು' ಎಂದರು.`ಅವಕಾಶವಾದಿಯಲ್ಲ':ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಮತ್ತು ಬಿಜೆಪಿಯ ಕೆಲವು ಮುಖಂಡರು ತಮ್ಮನ್ನು `ಅವಕಾಶವಾದಿ' ಎಂದು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ನಿತೀಶ್, `ಅವಕಾಶವಾದಿ ರಾಜಕೀಯವನ್ನು ನಾವು ಎಂದೂ ಮಾಡಿಲ್ಲ. 1996ರಲ್ಲಿ ಸಮತಾ ಪಕ್ಷವು ಬಿಜೆಪಿ ಜೊತೆಗೆ ಸಖ್ಯ ಬೆಳೆಸಿದ್ದರೂ ವಾಜಪೇಯಿ ಅವರು ಮೊದಲು ರಚಿಸಿದ 13 ದಿನಗಳ ಸರ್ಕಾರದಲ್ಲಿ ನಾವು ಭಾಗಿಯಾಗಿರಲಿಲ್ಲ. 1998ರಲ್ಲಿ ಬಿಜೆಪಿ ವಿವಾದಾತ್ಮಕ ಆಯೋಧ್ಯೆ ವಿಷಯದಲ್ಲಿ ಮುಂದುವರಿದಾಗ ನಾವು ಆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದೆವು. 1999ರಲ್ಲಿ ನಾವು ವಾಜಪೇಯಿ ಅವರ ಸರ್ಕಾರದಲ್ಲಿ ಇದ್ದೆವು' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.