ಬಿಜೆಪಿಯಲ್ಲಿ ಹೆಚ್ಚಿದ ಪೈಪೋಟಿ

7

ಬಿಜೆಪಿಯಲ್ಲಿ ಹೆಚ್ಚಿದ ಪೈಪೋಟಿ

Published:
Updated:

ಮಾಲೂರು ತಾ.ಪಂ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

ವಿಶೇಷ ವರದಿ

ಮಾಲೂರು: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದ್ದು, ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ಕೂಡಿವೆ. ತಾ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. 18 ಸ್ಥಾನಗಳ ಪೈಕಿ ಬಿಜೆ.ಪಿ ಮೊದಲ ಬಾರಿಗೆ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದೆ. ಇನ್ನುಳಿದ ಮೂರು ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಬಿಜೆಪಿಗೆ ಅಧ್ಯಕ್ಷ ಪಟ್ಟ ದೊರಕುವುದು ಬಹುತೇಕ ಖಚಿತವಾಗಿದೆ. ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿರುವ ನೂಟವೇ ಕ್ಷೇತ್ರದ ಅಭ್ಯರ್ಥಿ ಆರ್.ಆನಂದ್, ಸುಗ್ಗೊಂಡಹಳ್ಳಿ ಕ್ಷೇತ್ರದ ಕೆ.ಗೋಪಾಲ್‌ಗೌಡ, ಕೋಡಿಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಅಭ್ಯರ್ಥಿ ಮೂರ್ತಿ ಅಧ್ಯಕ್ಷ ಸ್ಥಾನಕ್ಕೆ ಎದ್ದು ಕಾಣುವ ಅಭ್ಯರ್ಥಿಗಳೆಂದು ತಿಳಿದುಬಂದಿದೆ. ಬಿಜೆಪಿಗೆ ಅಧ್ಯಕ್ಷ ಸ್ಥಾನ ಖಚಿತವಾದರೂ, ಮೂವರು ಅಭ್ಯರ್ಥಿಗಳ ನಡುವೆ ಅಧ್ಯಕ್ಷ ಗಾದಿಗೆ ನೇರ ಪೈಪೋಟಿ ಏರ್ಪಟ್ಟಿದೆ. ಮೀಸಲಾತಿ ಅಧ್ಯಕ್ಷ ಸ್ಥಾನ ಸಾಮಾನ್ಯಆಗಿರುವುದರಿಂದ ಎಲ್ಲಾ ಪಂಗಡದ ಅಭ್ಯರ್ಥಿಗಳು ಸ್ಫರ್ಧಿಸುವ ಸಾಧ್ಯತೆಯಂತೂ ನಿಚ್ಚಳವಾಗಿದೆ.ಹತ್ತು ವರ್ಷದಿಂದ ತಾ.ಪಂ ಆಡಳಿತ ಮಾಜಿ ಶಾಸಕ, ಜೆಡಿಎಸ್ ಪ್ರಮುಖ ಎ.ನಾಗರಾಜು ಅವರ ವಶದಲ್ಲಿತ್ತು. ಅವರು ಕಾಂಗ್ರೆಸ್‌ನಲ್ಲಿದ್ದಾಗ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪ್ರಬಲವಾಗಿತ್ತು.ನಂತರ ಅವರು ಜೆಡಿಎಸ್‌ಗೆ ಸೇರಿದ್ದರು. ಕಳೆದ ಅವಧಿಯಲ್ಲಿ ಬಿ.ಜೆ.ಪಿ 8 ಸ್ಥಾನ ಪಡೆದಿದ್ದರೂ ಅಧಿಕಾರದಿಂದ ದೂರವೇ ಉಳಿದಿತ್ತು. ಆದರೆ, ಈ ಬಾರಿ ಬಿಜಿಪಿಗೆ ಅದೃಷ್ಟ ಖುಲಾಯಿಸಿದೆ. ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ನಾಮಬಲದಿಂದ ಪಕ್ಷ 15 ಸ್ಥಾನ ಗಳಿಸಿದೆ. ತಾಲ್ಲೂಕು ಪಂಚಾಯಿತಿ ಕಚೇರಿ ಮೇಲೆ ಕೇಸರಿ ಬಾವುಟ ಹಾರಿಸುವುದು ಬಹುತೇಕ ಖಚಿತವಾಗಿದೆ. ತಾಲ್ಲೂಕು ಮಟ್ಟದ ಹೈಕಮಾಂಡ್ ಆಗಿರುವ ಕೃಷ್ಣಯ್ಯಶೆಟ್ಟರ ನಿರ್ಧಾರವೇ ಅಂತಿಮವಾಗಲಿದೆ. ಅವರ ಕೃಪಾ ಕಟಾಕ್ಷ ಯಾರಿಗೆ ದೊರಕಲಿದೆ ಎಂಬುದೇ ಸದ್ಯಕ್ಕೆ ಕುತೂಹಲ ವಿಷಯ.ಟೇಕಲ್ ಜಿ.ಪಂ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಅಲ್ಲಿ ಬಿಜೆಪಿಯನ್ನು ಬಲಗೊಳಿಸುವ ಇರಾದೆ ಶೆಟ್ಟರಿಗಿರುವುದರಿಂದ ಅಲ್ಲಿನ ನೂಟವೇ ತಾ.ಪಂ ಕ್ಷೇತ್ರದಲ್ಲಿ ಆಯ್ಕೆಯಾಗಿರುವ, ಪಕ್ಷದ ಒಕ್ಕಲಿಗ ಸಮುದಾಯದ ಆನಂದ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ಹಾಗೆ ನಡೆದರೆ, ಅದೇ ಜಿಪಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ವಸಂತ ಅವರ ಪತಿ ಮತ್ತು ತಮ್ಮ ಅನುಯಾಯಿ ವೆಂಕಟೇಶ್‌ಗೌಡರನ್ನು ಸಮಾಧಾನಗೊಳಿಸಬಹುದು ಎಂಬ ಲೆಕ್ಕಾಚಾರವನ್ನೂ ಶೆಟ್ಟರು ಹಾಕಿದ್ದಾರೆ ಎನ್ನಲಾಗಿದೆ.ಸುಗ್ಗಂಡಹಳ್ಳಿ ತಾ.ಪಂ. ಕ್ಷೇತ್ರದ ಸದಸ್ಯ ಕೆ. ಗೋಪಾಲ್‌ಗೌಡ ಎಂ.ಎ ಪದವೀಧರರು. ಕೃಷಿ ಕುಟುಂಬದ ಹಿನ್ನಲೆಯುಳ್ಳವರು.1991ರಲ್ಲಿ ಬಿಜೆಪಿ ಸೇರುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ಪಕ್ಷದಲ್ಲಿ ಹಲವಾರು ಜವಾಬ್ದಾರಿಯುತ ಸ್ಥಾನಗಳನ್ನು ಪಡೆದು ಪಕ್ಷವನ್ನು ಸಂಘಟಿಸಿದವರದಲ್ಲಿ ಪ್ರಮುಖರು. ಅವರೂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಪ್ರಬಲ ಪೈಪೋಟಿ ಒಡ್ಡುತ್ತಿದಾರೆ. ಜೆಡಿಎಸ್‌ನ ಆಕಾಂಕ್ಷಿ ಮೂರ್ತಿ ಸ್ಪರ್ಧಿಸಿದರೂ, ಬಿಜೆಪಿಯ ಬಹುಮತದ ಮುಂದೆ ಸಾಧ್ಯತೆ ಕಡಿಮೆ. ತಾ.ಪಂ ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲು. ಬಿಜೆಪಿಗೆ ಸೇರಿದ, ದೊಡ್ಡಶಿವಾರ ಕ್ಷೇತ್ರದ ಸಿ.ಪಾರ್ವತಮ್ಮ ಮತ್ತು ಅರಳೇರಿ ಕ್ಷೇತ್ರದ ಅಮರಾವತಿಯವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ.  ಟೇಕಲ್ ಕ್ಷೇತ್ರದ ಎನ್.ನಿರ್ಮಲಾ, ಮತ್ತೊಬ್ಬ ಅರ್ಹ ಅಭ್ಯರ್ಥಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry