ಬಿಜೆಪಿಯಿಂದ ಅನ್ಯಾಯ

7

ಬಿಜೆಪಿಯಿಂದ ಅನ್ಯಾಯ

Published:
Updated:

ಗದಗ:  ರಾಜ್ಯದಲ್ಲಿ ಹಿಂದುಳಿದ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಿಗೆ ಬಿಜೆಪಿ ಸರ್ಕಾರ  ಅನ್ಯಾಯ ಮಾಡುತ್ತಿದೆ ಎಂದು ರಾಜ್ಯ ಹಿಂದುಳಿದ ಅಲೆಮಾರಿ, ಅಲೆ ಅಲೆಮಾರಿ ವಿಮುಕ್ತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶಿವಾನಂದ ಪಾಚಂಗಿ ಆರೋಪಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜರುಗಿದ, ಅಲೆಮಾರಿ ಜನಾಂಗದವರನ್ನು ಗುರುತಿಸಿ ಆರ್ಥಿಕ ಮಟ್ಟ ಜಾರಿಗೊಳಿಸುವ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಈ ವರ್ಷ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ವಿದ್ಯಾರ್ಥಿಗಳಿಗೆ ಒಬ್ಬರಿಗೂ ಪ್ರವೇಶಾವಕಾಶ ನೀಡಿಲ್ಲ. ಈ ಜನಾಂಗಗಳಿಗೆ ದೇವರಾಜ ಅರಸು ನಿಗಮದಿಂದ ಭೂಒಡೆತನ ಯೋಜನೆಯಡಿ ಎರಡು ಎಕರೆ ಜಮೀನು ಹಾಗೂ 20,000ರೂ. ಸಹಾಯ ಧನ ನೀಡುವ ಯೋಜನೆ ರದ್ದುಪಡಿಸಲಾಗಿದೆ. ಇದು ಬಿಜೆಪಿ ಸರ್ಕಾರವು ಪ್ರವರ್ಗ-1ರಲ್ಲಿರುವ ರಾಜ್ಯದ 46 ಸಮುದಾಯಗಳಿಗೆ ಮಾಡಿದ ಅನ್ಯಾಯವಾಗಿದೆ. ಇದನ್ನು ತಕ್ಷಣ ಸರಕಾರ ಸರಿಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.ಇಂದು ಅಪರ ಜಿಲ್ಲಾಧಿಕಾರಿ ಪಿ.ಟಿ. ರುದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಅಲೆಮಾರಿಗಳು,ಅರೆ ಅಲೆಮಾರಿಗಳ ಕಲ್ಯಾಣಕ್ಕಾಗಿ ಕೇಂದ್ರ-ರಾಜ್ಯ ಸರಕಾರಗಳು ಜಾರಿಗೊಳಿಸಿದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಯಿತು. ಈ ಸಮುದಾಯಗಳ ಆರ್ಥಿಕ,ಶೈಕ್ಷಣಿಕ,ಸಾಮಾಜಿಕ ಅಭಿವದ್ಧಿ ಕಾರ್ಯಕ್ರಮಗಳ ಅನುಷ್ಠಾನ ವೇಗವಾಗಿ ನಡೆಯುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಭೆ ಸೂಚಿಸಿದೆ.

ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಮಟ್ಟದ ಸಲಹಾ ಸಮಿತಿ ಸಭೆ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿ ಅಧಿಕಾರಿಗಳಿಗೆ ಅನೇಕ ಸೂಚನೆಗಳನ್ನು ನೀಡಿದರೂ ಕಾರ್ಯಕ್ರಮಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದರು.ಅಲೆಮಾರಿ, ಅಲೆಮಾರಿಗಳ ಮೂಲ ಸಂಪತ್ತು ಎಂದರೆ ಅವರಲ್ಲಿರುವ ಜನಪದ ಕಲೆ. ಅವರು ಜೀವನಕ್ಕೆ ಈವರೆಗೆ ಜನಪದ ಕಲೆಯನ್ನೇ ಮೂಲ ಆಧಾರವಾಗಿ ನಂಬಿಕೊಂಡಿದ್ದರು. ಬದಲಾದ ಇಂದಿನ ದಿನದಲ್ಲಿ ಅಲೆಮಾರಿಗಳ ಕಲೆ ನಶಿಸುತ್ತಿದೆ.

 

ಆ ಕಲೆ ನಶಿಸದಂತೆ ಅದಕ್ಕೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮೂಲಕ ಅಲೆಮಾರಿಗಳ ಜನಪದ ಕಲೆಯ ಉಳಿವಿಗೆ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಗದುಗಿನಲ್ಲಿ ಜಿಲ್ಲಾ ಮಟ್ಟದ ಜನಪದ ಕಲಾ ಮೇಳ ಮಾಡಬೇಕೆಂದು ಇಂದಿನ ಸಭೆಯಲ್ಲಿ ಒತ್ತಾಯಿಸಲಾಯಿತು.

 

ಜಿಲ್ಲೆಯ ವಿವಿಧ ಅಲೆಮಾರಿ ಸಮುದಾಯಗಳ ಪ್ರತಿನಿಧಿಗಳು ಪಾಲ್ಗೊಂಡರು ಎಂದು ಅವರು ತಿಳಿಸಿದರು.  ರಾಜ್ಯದಲ್ಲಿ 46 ಅಲೆಮಾರಿ, ಅರೆಅಲೆಮಾರಿ ಜನಾಂಗಗಳಿದ್ದು, ಅವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 2012-13ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರಕಾರ 50 ಕೋಟಿ ರೂಪಾಯಿ ತೆಗೆದಿರಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಇದೇ 10ರಂದು ನಡೆಯುವ ಸಭೆಯಲ್ಲಿ ಒತ್ತಾಯಿಸುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry