ಗುರುವಾರ , ಏಪ್ರಿಲ್ 22, 2021
30 °C

ಬಿಜೆಪಿಯಿಂದ ಅಭಿವೃದ್ಧಿ ಆಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಎರಡೂವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಎಲ್ಲಿಯೂ ಕಾರ್ಖಾನೆ, ಅಣೆಕಟ್ಟು, ಬೃಹತ್ ರಸ್ತೆ ನಿರ್ಮಿಸಿಲ್ಲ ಎಂಬುದು ಜನತೆಗೆ ಗೊತ್ತಿದೆ. ಸೀರೆ, ಸೈಕಲ್ ವಿತರಿಸಿಯೇ ಇಷ್ಟೊಂದು ಮಾತನಾಡುವ, ಬರೀ ಸುಳ್ಳೇ ಹೇಳುವ ಯಡಿಯೂರಪ್ಪ ಇಷ್ಟೆಲ್ಲಾ ಮಾಡಿದ್ದರೆ ಪ್ರಧಾನಮಂತ್ರಿ ಕುರ್ಚಿಯನ್ನೇ ಕೇಳುತ್ತಿದ್ದರು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಜಯ್ ನಿರುಪಮ್ ಟೀಕಿಸಿದರು.

ಪಟ್ಟಣಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಡನೆ ಮಾತನಾಡಿ, ಪ್ರತಿಯೊಂದಕ್ಕೂ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗಿದೆ ಎನ್ನುವ ಯಡಿಯೂರಪ್ಪ ಮೀಸಲಿಟ್ಟ ಅನುದಾನದಲ್ಲಿ ಎಷ್ಟು ಖರ್ಚು ಮಾಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಲಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ಸಾವಿರಾರು ಕೋಟಿ ರೂಪಾಯಿಯನ್ನು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೀಸಲಿಡುತ್ತಾರೆ. ಅದಕ್ಕೆ ಅದ್ಧೂರಿ ಪ್ರಚಾರ ನೀಡುತ್ತಾರೆ. ಆದರೆ ಹಣ ಮಾತ್ರ ಬಿಡುಗಡೆಯಾಗುವುದಿಲ್ಲ. ಕೆಲಸವಂತೂ ದೂರದ ಮಾತು. ಜನತೆಯು ಪ್ರಚಾರ ಕೇಳಿ ಜೊಲ್ಲು ಸುರಿಸಬೇಕಷ್ಟೆ. ಇಂಥ ಸರ್ಕಾರ, 64 ವರ್ಷ ಕಾಲ ಕಾಂಗ್ರೆಸ್ ಮಾಡದಷ್ಟು ಪ್ರಗತಿಯನ್ನು ಕಳೆದ ಎರಡೂವರೆ ವರ್ಷದಲ್ಲಿ ಮಾಡಲಾಗಿದೆ ಎಂದು ಬೊಗಳೆ ಬಿಡುತ್ತಿದೆ ಎಂದು ಟೀಕಿಸಿದರು.ಮಾಜಿ ಸಚಿವೆ ಮೋಟಮ್ಮ, ವಿ.ಮುನಿಯಪ್ಪ, ಅನಿಲ್‌ಕುಮಾರ್, ನಿಸಾರ್ ಅಹ್ಮದ್, ನಜೀರ್ ಅಹ್ಮದ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಪಾರ್ಥಸಾರಥಿ, ರಾಜಶೇಖರನ್, ಮಾರುತಿ, ವೆಂಕಟಪತಿ, ಭಾಗ್ಯಮ್ಮ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.