ಬಿಜೆಪಿಯಿಂದ ಧನಂಜಯಕುಮಾರ್ ಉಚ್ಚಾಟನೆ

7

ಬಿಜೆಪಿಯಿಂದ ಧನಂಜಯಕುಮಾರ್ ಉಚ್ಚಾಟನೆ

Published:
Updated:
ಬಿಜೆಪಿಯಿಂದ ಧನಂಜಯಕುಮಾರ್ ಉಚ್ಚಾಟನೆ

ಬೆಂಗಳೂರು: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ.`ಮುಖ್ಯಮಂತ್ರಿಯವರು ತಮ್ಮ ಅಧಿಕೃತ ನಿವಾಸದ ಮುಂದಿನ ರಸ್ತೆಗೆ ಬೇಲಿ ಹಾಕಿಕೊಂಡು ಕೈದಿಯ ಹಾಗೆ ಜೀವನ ನಡೆಸುತ್ತಿದ್ದಾರೆ~ ಎಂದು ಕಾವೇರಿ ಚಳವಳಿ ಸಂದರ್ಭದಲ್ಲಿ ಧನಂಜಯಕುಮಾರ್ ಟೀಕಿಸಿದ್ದರು. ಅದರ ಬೆನ್ನಿಗೇ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಾಥ ರಾವ್ ಮಲ್ಕಾಪುರೆ ಅವರು ಕಾರಣ ಕೇಳಿ ಇದೇ 6ರಂದು ಅವರಿಗೆ ನೋಟಿಸ್ ನೀಡಿದ್ದರು.ನೋಟಿಸ್‌ಗೆ ಧನಂಜಯಕುಮಾರ್ ಮಂಗಳವಾರ ನೀಡಿರುವ ಉತ್ತರದಲ್ಲಿ `ಸಾರ್ವಜನಿಕ ಹಿತದೃಷ್ಟಿಯಿಂದ ನಾನು ನೀಡಿದ ಹೇಳಿಕೆಯನ್ನು ಅಶಿಸ್ತು ಎಂದು ಪರಿಗಣಿಸುವುದಾದರೆ ಅದನ್ನು ಎದುರಿಸಲು ಸಿದ್ಧ. ಭವಿಷ್ಯದಲ್ಲಿ ಅಂತಹ ಸಾವಿರ ಶಿಸ್ತು ಉಲ್ಲಂಘನೆಗಳನ್ನು ಮಾಡುವುದಕ್ಕೂ ತಯಾರಿದ್ದೇನೆ~ ಎಂದು ಹೇಳಿದ್ದರು. ಹೇಳಿಕೆಗಳ ಬಗ್ಗೆ ವಿಷಾದವಾಗಲೀ ಅಥವಾ ತಪ್ಪೊಪ್ಪಿಗೆಯಾಗಲೀ ಇಲ್ಲದಿರುವ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮಲ್ಕಾಪುರೆ ತಿಳಿಸಿದ್ದಾರೆ.ಇದಕ್ಕೂ ಮೊದಲು ಧನಂಜಯಕುಮಾರ್ ಅವರು ಯಡಿಯೂರಪ್ಪ ಅವರ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮತ್ತು ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದರು. ನೋಟಿಸ್‌ಗೆ ನೀಡಿರುವ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.`ಯಡಿಯೂರಪ್ಪ ಅವರ ಬೆಂಬಲಿಗ ಎಂಬ ಒಂದೇ ಕಾರಣಕ್ಕೆ ನಿಷ್ಠಾವಂತ ಕಾರ್ಯಕರ್ತನಾದ ನನ್ನ ಮೇಲೆ ಹಗೆ ಸಾಧಿಸಿದ್ದಾರೆ. ಅಧಿಕಾರದ ರುಚಿ ಅನುಭವಿಸಲು ಇವರಿಗೆಲ್ಲ ಯಡಿಯೂರಪ್ಪ ಅವಕಾಶ ಮಾಡಿಕೊಟ್ಟರು. ಈಗ ಅವರಿಗೇ ಮಸಿ ಹಚ್ಚುವ ಕೆಲಸ ನಡೆದಿದೆ. ಅವರಿಗೆ ಹಚ್ಚಿದ ಮಸಿ ಪಕ್ಷಕ್ಕೂ ಮೆತ್ತಿಕೊಳ್ಳುತ್ತದೆ ಎನ್ನುವ ಸಾಮಾನ್ಯ ಜ್ಞಾನ ಇವರಿಗೆ ಇಲ್ಲ~ ಎಂದು ಉತ್ತರದಲ್ಲಿ ಆಕ್ಷೇಪಿಸಿದ್ದಾರೆ.`ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲೇ ಉರುಳಿಸುವ ಪ್ರಯತ್ನವನ್ನು ಅನಂತಕುಮಾರ್ ಮತ್ತು ಈಶ್ವರಪ್ಪ ನಡೆಸಿದರು. ಇಂತಹವರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ರೌಡಿಗಳ ನೇತೃತ್ವದಲ್ಲಿ ಕೆಲವು ಶಾಸಕರು ಹೈದರಾಬಾದ್ ರೆಸಾರ್ಟ್‌ಗೆ ಹೋಗುವ ಮೊದಲು ಯಾರ‌್ಯಾರ ಮನೆಗಳಲ್ಲಿ ಸಭೆಗಳಾದವು? ಎಲ್ಲಿ ಭಿನ್ನಮತದ ವಿಷಬೀಜ ಬಿತ್ತಲಾಯಿತು ಎಂಬುದು ಪಕ್ಷಕ್ಕೆ ತಿಳಿದಿಲ್ಲವೇ~ ಎಂದೂ ಪ್ರಶ್ನಿಸಿದ್ದಾರೆ.`ಆರೋಪ ಬಂದ ತಕ್ಷಣ ಅಧಿಕಾರ ತ್ಯಜಿಸಬೇಕು ಎನ್ನುವುದಾದರೆ ಹುಡ್ಕೊ ಹಗರಣದ ಆರೋಪ ಹೊತ್ತ ಅನಂತಕುಮಾರ್ ಅವರನ್ನು ಏಕೆ ಪಕ್ಷ ಪ್ರಶ್ನಿಸಲಿಲ್ಲ. ನೀರಾ ರಾಡಿಯಾ ಪ್ರಕರಣದಲ್ಲೂ ಅವರ ಹೆಸರು ಕೇಳಿಬಂತು. ಈಶ್ವರಪ್ಪ ವಿರುದ್ಧವೂ ಆರೋಪಗಳಿವೆ. ಅವರು ಅಧಿಕಾರದ ಅಮಲನ್ನು ನೆತ್ತಿಗೇರಿಸಿಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಏಕಿಲ್ಲ~ ಎಂದು ಕೇಳಿದ್ದಾರೆ.`ಸಂತೋಷ್ ಅವರು (ಆರ್‌ಎಸ್‌ಎಸ್) ಪ್ರಚಾರಕ ಎಂಬ ಪದಕ್ಕೆ ಮಸಿ ಬಳಿದಿದ್ದಾರೆ. ವರ್ಗಾವಣೆ, ನಿಗಮ- ಮಂಡಳಿಗಳ ನೇಮಕಾತಿಯನ್ನು ಬಳಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 60 ಮಂದಿ ಉಪ ನೋಂದಣಾಧಿಕಾರಿಗಳನ್ನು ಇವರ ಶಿಫಾರಸಿನ ಆಧಾರದ ಮೇಲೆಯೇ ವರ್ಗಾವಣೆ ಮಾಡಲಾಯಿತು. ಇದರಲ್ಲಿಯೂ ಅಕ್ರಮ ನಡೆದ ಆರೋಪ ಇದೆ~ ಎಂದು ದೂರಿದ್ದಾರೆ.

 

ಯೋಗ್ಯತೆ ಇರದವರು

`ಪಕ್ಷಕ್ಕಾಗಿ ದುಡಿದ ನನಗೆ ನಿಮ್ಮಂತಹ ಗೋಮುಖ ವ್ಯಾಘ್ರರ ಜತೆ, ಬೆನ್ನಿಗೆ ಚೂರಿ ಹಾಕುವವರ ಜತೆ ಕೆಲಸ ಮಾಡುವ ಇಚ್ಛೆ ಇಲ್ಲ. ದೇಶ ಮತ್ತು ಪಕ್ಷಕ್ಕಾಗಿ ದುಡಿದ ಶಾಮಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯ, ಭಾವುರಾವ್ ದೇಶಪಾಂಡೆ ಅವರ ಭಾವಚಿತ್ರಗಳನ್ನು ಪಕ್ಷದ ಕಚೇರಿಯಲ್ಲಿ ಹಾಕುವ ಯೋಗ್ಯತೆ ಕೂಡ ನಿಮಗಿಲ್ಲ. ದಯಮಾಡಿ ಅವನ್ನು ತೆಗೆದು ಉಪಕಾರ ಮಾಡಿ~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry