ಬುಧವಾರ, ಜೂಲೈ 8, 2020
28 °C

ಬಿಜೆಪಿಯಿಂದ ನಿರ್ಲಕ್ಷ್ಯ: ಅಭಿವೃದ್ಧಿ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯ ಬಿಜೆಪಿ ಸರ್ಕಾರವು ಗುಲ್ಬರ್ಗವನ್ನು ನಿರ್ಲಕ್ಷ್ಯಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ, ಶಾಸಕ ಶರಣಪ್ರಕಾಶ ಪಾಟೀಲ ಸೇಡಂ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಉಸ್ತುವಾರಿ ಸಚಿವರು ಅಭಿವೃದ್ಧಿ ಪರಿಶೀಲನೆ ಸಭೆ ನಡೆಸಿಲ್ಲ.  ಲಕ್ಷ್ಮಣ ಸವದಿ ಅವರು ಉಸ್ತುವಾರಿ ಸಚಿವರಾಗಿದ್ದಾಗ ಕಾಟಾಚಾರಕ್ಕೆ ಸಭೆ  ನಾಲ್ಕು ಇಲಾಖೆಗಳ ಬಗ್ಗೆ ಮಾಹಿತಿ ಪಡೆದಿದ್ದರು. ಆ ಬಳಿಕ ಬಂದ ಬಸವರಾಜ ಬೊಮ್ಮಾಯಿ ಅವರು ಸಭೆಯೇ ನಡೆಸುತ್ತಿಲ್ಲ ಎಂದು ಹೇಳಿದರು.ಸ್ವತಃ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಿಲ್ಲೆಯಲ್ಲೇ ಠಿಕ್ಕಾಣಿ ಹೂಡಲು ಸಮಯ ಇತ್ತು. ಆದರೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿಲ್ಲ ಎಂದು ಜರೆದ ಶರಣಪ್ರಕಾಶ್, ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ ಗುಲ್ಬರ್ಗದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಆ ಬಳಿಕ ಕುಮಾರಸ್ವಾಮಿ ಕಾಟಾಚಾರಕ್ಕೆ ಸಭೆ ನಡೆಸಿ ಹೋದರು. ಬಳಿಕ ಯಾರೂ ಇತ್ತ ತಲೆ ಹಾಕಿಲ್ಲ ಎಂದರು.ಪ್ರಗತಿ ಪರಿಶೀಲನಾ ಸಭೆ ನಡೆಯದ ಪರಿಣಾಮ ನೂರು ಕೋಟಿ ಅನುದಾನದ ಕಾಮಗಾರಿ, ಕೆಳ ಮುಲ್ಲಾಮಾರಿ, ರಸ್ತೆ ಕಾಮಗಾರಿ ಯಾವುದೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದ ಅವರು, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ಕಾರ ಹಣವೇ ಬಿಡುಗಡೆ ಮಾಡುತ್ತಿಲ್ಲ ಎಂಬ ಉತ್ತರ ಬರುತ್ತದೆ ಎಂದರು.  ಸರ್ಕಾರವು ಆಶ್ವಾಸನೆಗಳಿಗೆ ಸೀಮಿತವಾಗಿದೆ. ಅಭಿವೃದ್ಧಿ ಯೋಜನೆ, ಕಾಮಗಾರಿ, ಸ್ಥಳೀಯಾಡಳಿತಗಳಿಗೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದ ಅವರು, ಹಣ ಬಿಡುಗಡೆ ಆಗುತ್ತಿರುವುದು ಶಿವಮೊಗ್ಗಕ್ಕೆ ಮಾತ್ರ, ಉತ್ತರ ಕರ್ನಾಟಕ ಭಾಗಕ್ಕಲ್ಲ ಎಂದು ಲೇವಡಿ ಮಾಡಿದರು.ತೊಗರಿ: ಜಿಲ್ಲೆಯ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆಗಿಂತಲೂ (3000 ಮತ್ತು 500 ರೂ.) ಮಾರುಕಟ್ಟೆ ದರ ಇಳಿದಿದೆ. ಹಾಗಿದ್ದರೂ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದ ಅವರು, ಕೇಂದ್ರದ ಬೆಂಬಲ ಬೆಲೆಗೆ 1500 ರೂಪಾಯಿ ಹೆಚ್ಚುವರಿ ಸೇರ್ಪಡೆ ಮಾಡುವ ಮೂಲಕ ರಾಜ್ಯ ಸರ್ಕಾರ ತಕ್ಷಣ ಮಾರುಕಟ್ಟೆ ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಬೀದಿಗಳಿದು ಹೋರಾಟ ನಡೆಸಲಿದೆ ಎಂದರು.ಜಿಪಂ: ಬಿಜೆಪಿಯ ಹೆಂಡ ಮತ್ತು ದುಡ್ಡು ಹಂಚಿಕೆಯ ನಡುವೆಯೂ ನಾವು ಜಿಲ್ಲಾ ಪಂಚಾಯಿತಿಯಲ್ಲಿ ನಾವು 19 ಸ್ಥಾನ ಪಡೆದಿದ್ದೇವೆ. ಒಟ್ಟು ಮತಗಳಿಕೆಯಲ್ಲಿಯೂ ಬಿಜೆಪಿಗಿಂತ ಮುಂದಿದ್ದೇವೆ. ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ರಾಜ್ಯಮಟ್ಟದಲ್ಲಿ ಮಾತುಕತೆ ನಡೆದಿತ್ತು. ಇದು ಪಕ್ಷ ಹಾಗೂ ರಾಜ್ಯ ಮುಖಂಡರ ನಿರ್ಧಾರ ಎಂದರು.ರೆಡ್ಡಿ ವಿರುದ್ದ ಕ್ರಮಕ್ಕೆ ಆಗ್ರಹ: ಬಳ್ಳಾರಿಯಲ್ಲಿ ಪಕ್ಷಾಂತರ ನಿಷೇಧ ಕಾಯಿದೆಗೆ ವಿರುದ್ಧವಾಗಿ ಜಿಪಂ ಸದಸ್ಯರನ್ನು ಸ್ವತಃ ಸಚಿವ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಸೇರ್ಪಡೆ ಮಾಡಿದ್ದರು. ನೆಲದ ಕಾನೂನಿಗೆ ಬೆಲೆ ನೀಡಿದ ಸಚಿವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದ ಅವರು, ಈ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಜರೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.