ಸೋಮವಾರ, ನವೆಂಬರ್ 18, 2019
27 °C

ಬಿಜೆಪಿಯಿಂದ ನಿಷ್ಠಾವಂತರ ಕಡೆಗಣನೆ ಆರೋಪ

Published:
Updated:

ಬೀದರ್: ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿಕೆಯಲ್ಲಿ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಮಾಜಿ ಜಿಲ್ಲಾ ಅಧ್ಯಕ್ಷ ಅನಿಲ್ ಗುಂಡಪ್ಪ ದೂರಿದರು.ತಾವು ಕಳೆದ ಎರಡು ದಶಕಗಳಿಂದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಕರಿಸಿ, ಪಕ್ಷದ್ರೋಹ ಎಸಗಿರುವ ಮಾಜಿ ಶಾಸಕ ರಮೇಶ್‌ಕುಮಾರ್ ಪಾಂಡೆ ಅವರಿಗೆ ಟಿಕೆಟ್ ಘೋಷಿಸಿ ತಮಗೆ ಅನ್ಯಾಯ ಮಾಡಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.ಪಾಂಡೆ ಕಳೆದ ಒಂದು ದಶಕದಿಂದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅಲ್ಲದೆ, ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದರು. ಅದಾಗಿಯೂ ಒಳಗಿನ ಕೆಲವರ ಒತ್ತಡಕ್ಕೆ ಮಣಿದು ಅವರಿಗೆ ಟಿಕೆಟ್ ನೀಡಲಾಗಿದೆ.

ಟಿಕೆಟ್ ಅಂತಿಮಗೊಳಿಸುವ ಮುನ್ನ ತಾಲ್ಲೂಕು ಮತ್ತು ಜಿಲ್ಲಾ ಸಮಿತಿ ಅಭಿಪ್ರಾಯ ಪಡೆಯಬೇಕು ಎಂಬ ನಿಯಮ ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಹಾಗೂ ಅವರ ಕೆಲ ಸಹಪಾಠಿಗಳಿಂದ ಜಿಲ್ಲೆಯಲ್ಲಿ ಪಕ್ಷ ಅವನತಿಯತ್ತ ಸಾಗುತ್ತಿದೆ. ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷವನ್ನು ಬಲಿ ಕೊಡಲಾಗುತ್ತಿದೆ. ಈಗಲೂ ಸಮಯ ಮೀರಿಲ್ಲ. ನಾಳೆಯೊಳಗೆ ಬೀದರ್ ಕ್ಷೇತ್ರದ ಟಿಕೆಟ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಪಕ್ಷ ಒಂದು ವೇಳೆ ತಮಗೆ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಾಗುವುದು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)