ಸೋಮವಾರ, ಏಪ್ರಿಲ್ 19, 2021
31 °C

ಬಿಜೆಪಿಯಿಂದ ರಾಜ್ಯಕ್ಕೆ ಸಾಲದ ಹೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರಾಜ್ಯದ ಮೇಲೆ ರೂ 56 ಸಾವಿರ ಕೋಟಿ ಇದ್ದ ಸಾಲದ ಪ್ರಮಾಣವು ಇದೀಗ ರೂ 1.4 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಸರ್ಕಾರವನ್ನು ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಎಬ್ಬಿಸಿದೆ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ರಾಜ್ಯ ಘಟಕದ ಕಾರ್ಯದರ್ಶಿ ಶ್ರೀರಾಮರೆಡ್ಡಿ ಶನಿವಾರ ಇಲ್ಲಿ ವಿವರಿಸಿದರು.ಯಾವುದಕ್ಕೆ ಇಷ್ಟೊಂದು ಸಾಲ ಮಾಡಲಾಗಿದೆ ಎನ್ನುವ ಸರಿಯಾದ ಲೆಕ್ಕಪತ್ರವನ್ನೂ ಸರ್ಕಾರ ಇಟ್ಟುಕೊಂಡಿಲ್ಲ. ವಿದ್ಯುತ್, ನೀರಾವರಿ ಕ್ಷೇತ್ರಗಳು ಇನ್ನೂ ಬಿಕ್ಕಟ್ಟು ಎದುರಿಸುತ್ತಿವೆ. ಇಲ್ಲಿಯಾದರೂ ಆ ಹಣವನ್ನು ತೊಡಗಿಸಬಹುದಿತ್ತು. ಎಲ್ಲ ಜಾತಿಗಳನ್ನು ಎತ್ತಿಕಟ್ಟುವ ಕೆಲಸವನ್ನು ಮಾತ್ರ ಬಿಜೆಪಿ ಸರ್ಕಾರವು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಮಂಡಿಸಿದ್ದ ರೂ 1.04 ಲಕ್ಷ ಕೋಟಿ ಬಜೆಟ್‌ನಲ್ಲಿ ಇಲ್ಲಿಯವರೆಗೂ ಕೇವಲ ರೂ 26 ಸಾವಿರ ಕೋಟಿ ಮಾತ್ರ ವೆಚ್ಚವಾಗಿದೆ. ಸರ್ಕಾರದ ಆದಾಯ ಪ್ರಮಾಣ ಶೇ 1.2ರಷ್ಟು ಕುಸಿದಿದೆ ಎಂದು ಹೇಳಲಾಗುತ್ತಿದೆ. ಶೇ 7ರಷ್ಟು ತೆರಿಗೆ ಕೊರತೆ ಇದೆ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ನಂಬರ್ ಒನ್ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ. ಆಡಳಿತಯಂತ್ರ ಸಂಪೂರ್ಣ ಕುಸಿದಿದ್ದು, ಯಾರ ಮಾತು ಯಾರೂ ಕೇಳುತ್ತಿಲ್ಲ ಎಂದು ಹೇಳಿದರು.ಜಾತ್ಯಾತೀತ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದ ಕರ್ನಾಟಕದಲ್ಲಿ ಇದೀಗ ಜಾತಿ ವ್ಯವಸ್ಥೆ ವ್ಯಾಪಕವಾಗಿ ಹಬ್ಬುವಂತೆ ಮಾಡಲಾಗಿದೆ. ಸಂಘ ಪರಿವಾರದ ಪುಂಡಾಟಿಕೆ ಹೆಚ್ಚಳವಾಗಿದ್ದು, ಕರಾವಳಿಯುದ್ದಕ್ಕೂ ಆಡಳಿತಯಂತ್ರ ಕೆಲಸವೆ ನಡೆಯುತ್ತಿಲ್ಲ ಎಂದರು.ರಾಜಕೀಯ ಸಮಾವೇಶ


ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಜಾಗೃತಿಯನ್ನುಂಟು ಮಾಡಲು ರಾಜ್ಯದಾದ್ಯಂತ ಸಿಪಿಐಎಂ ಪಕ್ಷವು ಜನಾಂದೋಲನ ರೂಪಿಸಿದೆ. ಇದೇ 18ರಂದು ಬೆಳಗಾವಿಯ ರಾಮದುರ್ಗದಿಂದ, 19ರಂದು ಬೀದರ್‌ನ ಬಾಲ್ಕಿಯಿಂದ ಜಾಥಾ ಹೊರಡಿಸಲಾಗುತ್ತಿದೆ. ಡಿಸೆಂಬರ್ 11ರಂದು ಈ ಜಾಥಾಗಳು ಬೆಂಗಳೂರು ತಲುಪಲಿವೆ. ಬೆಂಗಳೂರಿನಲ್ಲಿ ಬೃಹತ್ ರಾಜಕೀಯ ಸಮಾವೇಶ ಮಾಡಲಾಗುವುದು ಎಂದು ತಿಳಿಸಿದರು.ಉಡುಪಿಯಲ್ಲಿ ಸಮಾವೇಶ


ಉಡುಪಿಯ ಪಂಕ್ತಿಭೇದ ಹಾಗೂ ಕುಕ್ಕೆಸುಬ್ರಹ್ಮಣ್ಯದ ಮಡೆಸ್ನಾನವನ್ನು ವಿರೋಧಿಸಿ ಡಿಸೆಂಬರ್ 27ರಂದು ಉಡುಪಿಯಲ್ಲಿ ಸಮಾವೇಶವೊಂದನ್ನು ಮಾಡಲು ಯೋಜಿಸಲಾಗಿದೆ. ಬೈಂದೂರು ಹಾಗೂ ಕುಕ್ಕೆಸುಬ್ರಹ್ಮಣ್ಯದಿಂದ ಜಾಥಾಗಳು ಹೊರಡಲಿವೆ ಎಂದರು.ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಯು. ಬಸವರಾಜ, ಗುಲ್ಬರ್ಗ ಜಿಲ್ಲಾ ಮಂಡಳಿಯ ಗಂಗಮ್ಮ ಬಿರಾದಾರ ಮತ್ತಿತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.