ಬಿಜೆಪಿಯಿಂದ ರಾಜ್ಯದ ಸಂಪತ್ತು ಲೂಟಿ

ಗುರುವಾರ , ಜೂಲೈ 18, 2019
22 °C

ಬಿಜೆಪಿಯಿಂದ ರಾಜ್ಯದ ಸಂಪತ್ತು ಲೂಟಿ

Published:
Updated:

ಮುಧೋಳ: ಬಿಜೆಪಿಯವರು ರಾಜ್ಯದ ಭೂಮಿ, ಅರಣ್ಯ, ಖನಿಜ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮಾಡಿದ ಸಣ್ಣ ತಪ್ಪು ಸರಿಪಡಿಸಿಕೊಳ್ಳಲು ಇಷ್ಟು ಬೆಲೆ ತೆರಬೇಕಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಷಾದ ವ್ಯಕ್ತಪಡಿಸಿದರು.ನಗರದಲ್ಲಿ ಪರಿಸರ ಮಾಲಿನ್ಯ ಹಾಗೂ ಕೆಐಡಿಬಿಯಿಂದ ಭೂಸ್ವಾಧೀನ ಕ್ರಮವನ್ನು ವಿರೋಧಿಸಿ ಕಳೆದ 45 ದಿನಗಳಿಂದ ನಡೆಸುತ್ತಿರುವ ಸತ್ಯಾಗ್ರಹವನ್ನು ಬೆಂಬಲಿಸಿ ಗುರುವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, `ನಾನು ರಾಜಕೀಯ ಪ್ರವೇಶ ಮಾಡಿ 51 ವರ್ಷವಾಯಿತು, 15 ಚುನಾವಣೆಗಳನ್ನು ಎದುರಿಸಿದ್ದೇನೆ, 2 ಚುನಾವಣೆಗಳಲ್ಲಿ ಸೋತಿದ್ದೇನೆ. ನಾನು ಕಂಡ 16 ಮುಖ್ಯಮಂತ್ರಿಗಳಲ್ಲಿ ಎಲ್ಲಿಯೂ ಇಂಥ ಚತುರ ಮುಖ್ಯಮಂತ್ರಿಯನ್ನು ನೋಡಲಿಲ್ಲ~ ಎಂದು ಲೇವಡಿ ಮಾಡಿದರು.`ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಇಷ್ಟೊಂದು ಜಮೀನು ಲೂಟಿಯಾದದ್ದನ್ನು ಖಂಡಿಸಿ ಒಂದು ತಿಂಗಳು ಸತ್ಯಾಗ್ರಹ ಮಾಡಿದರೂ ಸರ್ಕಾರ ಕಣ್ಣು ತೆರೆದಿರಲಿಲ್ಲ, ಆದರೆ ದೇವೇಗೌಡ ಮುಧೋಳಕ್ಕೆ ಬರುತ್ತಿದ್ದಾನೆ ಎಂಬ ಸುದ್ದಿ ಕೇಳಿ 170.25 ಎಕರೆ ಜಮೀನನ್ನು ತರಾತುರಿಯಲ್ಲಿ ಡಿ ನೋಟಿಫೈ ಮಾಡಿದ್ದು ಸರಕಾರ ಜನಸಾಮಾನ್ಯರ ಬಗ್ಗೆ ಇರುವ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇನ್ನುಳಿದ 43 ಎಕರೆ ಜಮೀನನ್ನು ತಕ್ಷಣವೇ ಡಿ ನೋಟಿಫೈಗೊಳಿಸಬೇಕು~ ಎಂದು ದೇವೇಗೌಡ ಆಗ್ರಹಿಸಿದರು.ನಿರಾಣಿ ಕಾರ್ಖಾನೆಯಿಂದಾಗಿ ಸೋರಗಾಂವಿಯಲ್ಲಿನ ಕೊಳವೆ ಬಾವಿಗಳ ಹಾಗೂ ಬಾವಿಗಳ ನೀರು ಕೆಡುತ್ತಿದೆ, ಪರಿಸರ ನಾಶವಾಗುತ್ತಿದೆ ಎಂದು ಆರೋಪಿಸಿದ ದೇವೇಗೌಡ, ರಾಜ್ಯದಲ್ಲಿ ಒಟ್ಟು 3 ಲಕ್ಷ ಎಕರೆ ಜಮೀನು ಕಬಳಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 18ರಿಂದ ಮುಧೋಳ ತಾಲ್ಲೂಕು ಸೋರಗಾಂವಿಯಿಂದ ಹೋರಾಟ ಪ್ರಾರಂಭವಾಗಲಿದೆ ಎಂದರು.ಜೆ.ಡಿ.ಎಸ್ ವಕ್ತಾರ ವೈ.ಎಸ್.ವಿ ದತ್ತಾ ಮಾತನಾಡಿ, ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗಳನ್ನು ದೂರ ಮಾಡಬೇಕು. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ  ಕೊಡಬೇಕು ಎಂದರು.ಜಾಗ್ರತೆ ಇರಲಿ: ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಹಳೇ ವಿಜಾಪುರ ಜಿಲ್ಲೆಯ ಜನ ಮುಗ್ಧರು, ಸರಾಗವಾಗಿ ಎಲ್ಲರನ್ನು ನಂಬಿಬಿಡುತ್ತಾರೆ, ಇದೀಗ ಗೆಜೆಟ್‌ನಲ್ಲಿ 170 ಎಕರೆ ಡಿ ನೋಟಿಫೈ ಆದ ಬಗ್ಗೆ ಹೇಳಿದ್ದಾರೆ ಆದರೆ ಹೋರಾಟ ನಿಂತ ಮೇಲೆ ಮತ್ತೆ ಭೂಮಿ ಕಬಳಿಸಬಹುದು;  ಅದಕ್ಕಾಗಿ ಜನರು ಜಾಗ್ರತೆಯಿಂದ ಇರಬೇಕು ಎಂದರು.ಹೆಚ್ಚಿನ ಹಣಕ್ಕೆ ಮಾರಾಟ: ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಯತ್ನಾಳ, ಕೂಡಗಿ ವಿದ್ಯುತ್ ಸ್ಥಾವರಕ್ಕೆ ಅಗತ್ಯವಿರುವ ಭೂಮಿಯನ್ನು ರೈತರಿಂದ ಮೊದಲು ಸಚಿವರ ಹೆಸರಲ್ಲಿ ಖರೀದಿಸಿ ನಂತರ ಅದನ್ನು ಸರ್ಕಾರಕ್ಕೆ ಹೆಚ್ಚು ಹಣಕ್ಕೆ ಮಾರಾಟ ಮಾಡಿ, ಲಾಭ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು.ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಆರ್.ಎಸ್. ತಳೇವಾಡ, ರೈತ ಸಂಘದ ರಮೇಶ ಗಡದಣ್ಣವರ      ಮಾತನಾಡಿದರು. ಸತ್ಯಾಗ್ರಹ ನಿರತ ಉದಯಸಿಂಹ ಫಡತರೆ, ಉದಯ ಸಾರವಾಡ, ಸಂಗಪ್ಪ ಕಾತರಕಿ, ಶಂಕರ ನಾಯಿಕ, ಅರವಿಂದ ದಳವಾಯಿ, ಬಸವಪ್ರಭು ಸರನಾಡಗೌಡ, ದಯಾನಂದ ಪಾಟೀಲ, ಮಾಜಿ ಶಾಸಕ ಬಿ.ಜಿ.ಜಮಖಂಡಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry