ಸೋಮವಾರ, ನವೆಂಬರ್ 18, 2019
26 °C

ಬಿಜೆಪಿಯಿಂದ ರಾಜ್ಯ ಖಜಾನೆ ಖಾಲಿ'

Published:
Updated:

ಬಸವಕಲ್ಯಾಣ: `ಐದು ವರ್ಷದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ರಾಜ್ಯದ ಮರ್ಯಾದೆ ಹಾಳಾಗಿದ್ದು,  ಖಜಾನೆಯೂ ಖಾಲಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದನ್ನು ಸರಿಪಡಿಸಬೇಕಾದ ಹೊಣೆಗಾರಿಕೆ ಇದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದರು.ಇಲ್ಲಿನ ಬಸವೇಶ್ವರ ರಥ ಮೈದಾನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, `ಕಾಂಗ್ರೆಸ್ ಮಾಡದ್ದನ್ನುನಾವು ಮಾಡುತ್ತೇವೆ ಎಂದಿದ್ದರು. ಏನು ಮಾಡಿದರು ಎಂದು ನಿಮಗೆ ಗೊತ್ತಿದೆ. ಬಿಜೆಪಿ ಸರ್ಕಾರದ 20 ಸಚಿವರ ಮೇಲೆ ಮೊಕದ್ದಮೆ ದಾಖಲಾಗಿದೆ' ಎಂದು ವ್ಯಂಗ್ಯವಾಡಿದರು.`ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇನ್ನೊಮ್ಮೆ ಇವರನ್ನು ಆಯ್ಕೆ ಮಾಡಿದರೆ ರಾಜ್ಯದ ಸ್ಥಿತಿ ಅಧೋಗತಿ ಆಗುತ್ತದೆ. ಬಿಜೆಪಿ, ಕೆಜೆಪಿ,  ಬಿಎಸ್‌ಆರ್‌ಕೆ ಎಂದು ಆ ಪಕ್ಷ ಹೋಳಾಗಿರುವ ಕಾರಣ ಅದಕ್ಕೆ ಭವಿಷ್ಯವೂ ಇಲ್ಲ ಎಂದು ಟೀಕಿಸಿದರು.

ಸಮಾನತೆ ಸಾರಿದ ಬಸವಣ್ಣನವರ ನಾಡಿನಲ್ಲಿ ಹಿಂದುಳಿದ ವರ್ಗಗಳಿಂದ ಬಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಸಾಮಾಜಿಕ ನ್ಯಾಯ ಕೊಡಬೇಕು ಎಂದು ಕೇಳಿಕೊಂಡರು.ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಮಾತನಾಡಿ ಜನರು ಕಾಂಗ್ರೆಸ್ ಬಗ್ಗೆ ಒಲವು ಹೊಂದಿದ್ದಾರೆ. ಆದರೆ ಪಕ್ಷದಲ್ಲಿ ಒಡಕು ಇದ್ದರೆ ಹಾನಿ ಆಗುತ್ತದೆ. ಆದ್ದರಿಂದ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು. ಪಕ್ಷದ ಅಭ್ಯರ್ಥಿ ನಾರಾಯಣರಾವ್ ಮಾತನಾಡಿ, ಇದುವರೆಗೂ ಪಕ್ಷದ ವೇದಿಕೆಯಲ್ಲಿ ಮಾತನಾಡುವ ಅವಕಾಶ ದೊರೆಯುತ್ತಿತ್ತು. ಈಗ ವಿಧಾನಸಭೆಯಲ್ಲಿ ಮಾತನಾಡಲು ಮತದಾರರಾದ ನೀವು ಅವಕಾಶ ಕೊಡಬೇಕು. ಪಕ್ಷದ ಮುಖಂಡರು ವಿಶ್ವಾಸವಿರಿಸಿ ಟಿಕೆಟ್ ನೀಡಿದ್ದಾರೆ. ಇಲ್ಲವಾದರೆ ನನ್ನಕಥೆ ಮುಗಿಯುತ್ತಿತ್ತು ಎಂದರು.ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ಹಿರಿಯ ದಲಿತ ಮುಖಂಡ ತಾತೇರಾವ ಕಾಂಬಳೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಕಾಜಿ ಅರ್ಷದ್ ಅಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)