ಬುಧವಾರ, ನವೆಂಬರ್ 20, 2019
27 °C

ಬಿಜೆಪಿಯಿಂದ `ವಿಕಾಸ'ದ ಸಂಕಲ್ಪ

Published:
Updated:

ಬೆಂಗಳೂರು: ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ, ಬಿಪಿಎಲ್ ಕುಟುಂಬಗಳಿಗೆ ಜೀವವಿಮೆ, ಪಿಯುಸಿ ಮತ್ತು ಅದರ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಇಲ್ಲವೇ ಟ್ಯಾಬ್ಲೆಟ್, ಶಾಲಾ- ಕಾಲೇಜುಗಳಿಗೆ ಉಚಿತ ಇಂಟರ್‌ನೆಟ್...ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ, `ವಿಕಾಸ' ಹೆಸರಿನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಭರವಸೆ ನೀಡಿದೆ.ಸಂಸದ ಡಿ.ಬಿ.ಚಂದ್ರೇಗೌಡ ಅಧ್ಯಕ್ಷತೆಯ ಸಮಿತಿ ರೂಪಿಸಿದ ಪ್ರಣಾಳಿಕೆಯನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಶುಕ್ರವಾರ ಬಿಡುಗಡೆ ಮಾಡಿದರು. ಮುಖಂಡರಾದ ಪ್ರಹ್ಲಾದ ಜೋಶಿ, ಧರ್ಮೇಂದ್ರ ಪ್ರಧಾನ್, ಅನಂತಕುಮಾರ್, ಆರ್.ಅಶೋಕ, ವಿ.ಸೋಮಣ್ಣ, ಚಂದ್ರೇಗೌಡ, ಆಯನೂರು ಮಂಜುನಾಥ ಸಮಾರಂಭದಲ್ಲಿ ಹಾಜರಿದ್ದರು.39 ಪುಟಗಳ ಈ ಪ್ರಣಾಳಿಕೆಯಲ್ಲಿ, 2008ರ ಪ್ರಣಾಳಿಕೆ `ಸಂಕಲ್ಪ'ದಲ್ಲಿ ಕೊಟ್ಟ ಭರವಸೆಗಳು ಮತ್ತು ಅವುಗಳನ್ನು ಈಡೇರಿಸಲು ಐದು ವರ್ಷಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಪ್ರಣಾಳಿಕೆಯಲ್ಲಿನ ಪ್ರಮುಖ 19 ಭರವಸೆಗಳ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಎರಡು ರೂಪಾಯಿಗೆ ಕೆ.ಜಿ ಅಕ್ಕಿ ನೀಡಲು ಈ ಮೊದಲೇ ತೀರ್ಮಾನಿಸಲಾಗಿದೆ. ನೀತಿ ಸಂಹಿತೆ ಜಾರಿಯಾದ ಕಾರಣ ಅದರ ಜಾರಿ ಸಾಧ್ಯವಾಗಿಲ್ಲ ಎಂದರು. `2008ರ ಪ್ರಣಾಳಿಕೆಯಲ್ಲಿನ ಶೇ 80ರಷ್ಟು ಭರವಸೆಗಳನ್ನು ಈಡೇರಿಸಿದ ತೃಪ್ತಿ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಈಗ ನೀಡಿರುವ ಎಲ್ಲ ಭರವಸೆಗಳನ್ನೂ ಈಡೇರಿಸುತ್ತೇವೆ' ಎಂದು ಶೆಟ್ಟರ್ ಹೇಳಿದರು.

ತತ್ವ ಸಿದ್ಧಾಂತಕ್ಕೆ ಬಿಜೆಪಿ ಬದ್ಧ: ಜೇಟ್ಲಿ

ಬೆಂಗಳೂರು: `ಐದು ವರ್ಷಗಳಲ್ಲಿ ಎಷ್ಟೇ ಏಳುಬೀಳುಗಳನ್ನು ಕಂಡರೂ ನಾವು ನಮ್ಮ ತತ್ವ- ಸಿದ್ಧಾಂತಗಳನ್ನು ಬಿಟ್ಟುಕೊಟ್ಟಿಲ್ಲ. ವ್ಯಕ್ತಿಕೇಂದ್ರಿತ ವಿಚಾರಗಳಿಗೆ ಮನ್ನಣೆ ನೀಡಿಲ್ಲ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.

ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ `ವಿಕಾಸ' ಬಿಡುಗಡೆ ಮಾಡಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.`ಸವಾಲುಗಳ ನಡುವೆಯೂ 5 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ. ಹಿಂದಿನ ಸರ್ಕಾರಗಳು ಮಾಡದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಹೆಮ್ಮೆ ಇದೆ. ಮತ್ತೊಂದು ಅವಧಿಗೆ ಬಿಜೆಪಿಯನ್ನು ಜನ ಬೆಂಬಲಿಸುವ ವಿಶ್ವಾಸವಿದೆ' ಎಂದರು.`ಒಂದು ರೂಪಾಯಿಗೆ ಕೆ.ಜಿ. ಅಕ್ಕಿ ಮತ್ತು ಉಚಿತ ಲ್ಯಾಪ್‌ಟಾಪ್ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವುದು ಜನಪ್ರಿಯ ಕಾರ್ಯಕ್ರಮಗಳಲ್ಲ. ಬಡವರಿಗೂ ಬದುಕುವ ಹಕ್ಕು ಇದೆ. ಅಂತಹವರಿಗೆ ಕಡಿಮೆ ದರದಲ್ಲಿ ಅಕ್ಕಿ ನೀಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಅದು ಜನಪ್ರಿಯತೆಗಾಗಿ ರೂಪಿಸಿದ ಕಾರ್ಯಕ್ರಮ ಅಲ್ಲ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ) ಪ್ರಧಾನಿ ಡಾ.ಮನಮೋಹನ ಸಿಂಗ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ದೋಷ ಮುಕ್ತಗೊಳಿಸಿರುವುದನ್ನು ಜೇಟ್ಲಿ ಟೀಕಿಸಿದರು. ಹಿಂದೆ ಬೊಫೋರ್ಸ್ ಹಗರಣಕ್ಕೆ ಸಂಬಂಧಿಸಿದ ಜೆ.ಪಿ.ಸಿ ವರದಿಯಲ್ಲೂ ಕಾಂಗ್ರೆಸ್ಸಿಗರನ್ನು ಇದೇ ರೀತಿ ಆರೋಪ ಮುಕ್ತಗೊಳಿಸಲಾಗಿತ್ತು ಎಂದು ದೂರಿದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, `ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ 11 ತಿಂಗಳು ಹಾಗೂ ನನ್ನ ಅವಧಿಯ 9 ತಿಂಗಳು ಭ್ರಷ್ಟಾಚಾರ ಮುಕ್ತ ಸ್ವಚ್ಛ ಆಡಳಿತ ನೀಡಲಾಗಿದೆ. ಇದೇ ವಿಷಯವನ್ನು ಜನರ ಮುಂದೆ ವಿವರಿಸಿ ಮತ್ತೊಂದು ಅವಧಿಗೆ ಮತ ನೀಡುವಂತೆ  ಕೋರಲಾಗುವುದು' ' ಎಂದು ಹೇಳಿದರು.

ಪ್ರಮುಖ ಭರವಸೆಗಳು

* ಎಲ್ಲ ಬಡ ಕುಟುಂಬಗಳಿಗೆ ಒಂದು ರೂಪಾಯಿಗೆ ಕೆ.ಜಿ ಅಕ್ಕಿ (25 ಕೆ.ಜಿವರೆಗೆ)

* 5 ಲಕ್ಷ ವೃತ್ತಿಪರ ಕುಟುಂಬಗಳಿಗೆ ನೆರವು ನೀಡುವ ಅಂತ್ಯೋದಯ ಜಾರಿ

* 10 ಲಕ್ಷ ಯುವಜನರಿಗೆ ಕೌಶಲ ತರಬೇತಿ ಮತ್ತು ಉದ್ಯೋಗ ಸೃಷ್ಟಿ

* ಎಲ್ಲರಿಗೂ ಶುದ್ಧ ಕುಡಿಯುವ ನೀರು

* ದಿನದ 24 ಗಂಟೆಯೂ ವಿದ್ಯುತ್. ಇಂಧನ ಕಾರ್ಯಪಡೆ ರಚನೆ

* ಕೃಷಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿ ಬಳಕೆ, ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ

* ಅನುಷ್ಠಾನದಲ್ಲಿರುವ ನೀರಾವರಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಪೂರ್ಣ

* ಬಿ.ಪಿ.ಎಲ್ ಕುಟುಂಬದವರಿಗೆ ಜೀವವಿಮೆ. ಕೃಷಿ ಬೆಳೆಗಳಿಗೆ ಗ್ರಾಮ ಮಟ್ಟದಲ್ಲಿ ಬೆಳೆವಿಮೆ

* ಜನ ಮತ್ತು ಜಾನುವಾರುಗಳಿಗೆ ಸಂಚಾರಿ ವೈದ್ಯಕೀಯ ಸೌಲಭ್ಯ

* ಪಿ.ಯು.ಸಿ ಹಾಗೂ ನಂತರದ ಶಿಕ್ಷಣದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಇಲ್ಲವೇ ಟ್ಯಾಬ್ಲೆಟ್, ಶಾಲಾ- ಕಾಲೇಜುಗಳಿಗೆ ಉಚಿತ ಇಂಟರ್‌ನೆಟ್

* ಗ್ರಾಮ, ತಾಲ್ಲೂಕು, ಜಿಲ್ಲಾ ಕೇಂದ್ರಗಳ ಸಂರ್ಪಕಕ್ಕೆ ದ್ವಿಪಥದ ರಸ್ತೆ ಅಭಿವೃದ್ಧಿ. ನಗರ, ಪಟ್ಟಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ. ವಸತಿಗೆ ಆದ್ಯತೆ

* ನಗರ ಪ್ರದೇಶಗಳಲ್ಲಿ ಪರಿಸರ ರಕ್ಷಣೆ. ತ್ಯಾಜ್ಯ ಸಂಸ್ಕರಣೆಗೆ ಪ್ರತ್ಯೇಕ ಪ್ರಾಧಿಕಾರ

* ಕೆರೆ ಮತ್ತು ಪರಿಸರ ಸಂರಕ್ಷಣೆಗೆ `ಬೆಂಗಳೂರು ಪರಿಸರ ಮಂಡಳಿ ರಚನೆ'

* ಕೇಂದ್ರ ಸರ್ಕಾರದ ಸಹಯೋಗದಲ್ಲಿ ರೈಲು ಕಾರಿಡಾರ್‌ಗಳ ನಿರ್ಮಾಣ

* ಎಲ್ಲ ಸೇವೆಗಳು `ಸಕಾಲ' ವ್ಯಾಪ್ತಿಗೆ. ಎಲ್ಲ ಇಲಾಖೆಗಳಲ್ಲೂ ಇ- ಆಡಳಿತ ಜಾರಿ.

* ಪರಿಶಿಷ್ಟರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗಾಗಿ ಶಿಕ್ಷಣ, ಕೌಶಲ ತರಬೇತಿ, ಉದ್ಯೋಗ ಸೃಷ್ಟಿ, ವಸತಿ ಯೋಜನೆ, ಸಮುದಾಯ ಭವನಗಳ ನಿರ್ಮಾಣ

* ಮಹಿಳಾ ಹಕ್ಕುಗಳ ಆಯೋಗ ಸ್ಥಾಪನೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ, ಸುರಕ್ಷತೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ವಿಶೇಷ ತರಬೇತಿ

* ಗುಡಿಸಲು ಮುಕ್ತ ರಾಜ್ಯ ಮಾಡುವುದು

* ಗುಡಿಸಲುಗಳನ್ನು ಹೆಂಚು/ಕಾಂಕ್ರೀಟ್ ಮನೆಗಳಾಗಿ ಪರಿವರ್ತನೆ

ಪ್ರತಿಕ್ರಿಯಿಸಿ (+)