ಬಿಜೆಪಿ–ಕೆಜೆಪಿ ಪಾಳೆಯದಲ್ಲಿ ಉತ್ಸಾಹ

7

ಬಿಜೆಪಿ–ಕೆಜೆಪಿ ಪಾಳೆಯದಲ್ಲಿ ಉತ್ಸಾಹ

Published:
Updated:

ಹುಬ್ಬಳ್ಳಿ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ­ಯಾಗಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಘೋಷಣೆಯಾಗು­ತ್ತಿದ್ದಂತೆಯೇ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನೆ ಆರಂಭವಾಗಿದೆ.ಜಿಲ್ಲೆಯಲ್ಲಿ ಬಿಜೆಪಿ– ಕೆಜೆಪಿ ವಿಲೀನ ಪ್ರಕ್ರಿಯೆಗೆ ಈ ಬೆಳವಣಿಗೆ ವೇಗ ದೊರಕಿಸಿ­ಕೊಟ್ಟಿದೆ ಎಂಬ ಮಾತು ಕೇಳಿಬರುತ್ತಿದ್ದು, ಕೆಜೆಪಿ ರಾಜ್ಯ ಘಟಕದ ನಾಯಕರು ಇದೇ 19 ಮತ್ತು 20ರಂದು ವಿಲೀನ ಕುರಿತು ತೀರ್ಮಾ­ನಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾ ಮಟ್ಟದಲ್ಲಿ ಕೆಜೆಪಿ ಮುಖಂಡರ ಸೇರ್ಪಡೆಗೆ ವೇದಿಕೆ ಒದಗಿಸಲು ಇದೇ 22ರಂದು ಬಿಜೆಪಿ ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏರ್ಪಡಿಸಿದೆ. ಅದೇ ದಿನ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಲಿಂಗರಾಜ ಪಾಟೀಲ ಅಧಿಕಾರ ಸ್ವೀಕರಿಸಲಿದ್ದಾರೆ.ಬಿಎಸ್‌ವೈ ನಡೆಯತ್ತ ನಾಯಕರ ಚಿತ್ತ: ‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೂ ಪ್ರೀತಿ’ ಎಂಬಂತಾಗಿದೆ ಜಿಲ್ಲೆಯಲ್ಲಿ ಕೆಜೆಪಿ ನಾಯಕರ ಸ್ಥಿತಿ. ಬಿಎಸ್‌ವೈ ಬಿಟ್ಟು ತಾವೇ ಸ್ವತಂತ್ರವಾಗಿ ನಿರ್ಧಾರ ಕೈಗೊಂಡು ಬಿಜೆಪಿಗೆ ಹೋದರೆ ಅಲ್ಲಿ ಒಲ್ಲದ ಅತಿಥಿಯಾಗಬಹುದು ಎಂಬ ಆತಂಕ ಇದ್ದು, ಯಡಿಯೂರಪ್ಪ ಅವರೊ­ಟ್ಟಿಗೆ ಹೋದರೆ ಸೂಕ್ತ ಸ್ಥಾನಮಾನವಾದರೂ ಸಿಗಬಹುದು ಎಂಬುವ ಆಸೆಯೂ ಇದೆ. ಅದಕ್ಕಾಗಿ ಮುಂಚೂಣಿ  ನಾಯಕರು ಪಕ್ಷದ ಸ್ಥಾಪಕ ಬಿ.ಎಸ್‌.ಯಡಿಯೂರಪ್ಪ ಅವರ ತೀರ್ಮಾನದ ಮೇಲೆ ನಿರ್ಧಾರಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಎರಡನೇ ಸಾಲಿನ ಮುಖಂಡರಲ್ಲಿ ಈಗ ಅಂತಹ ಸ್ಥಾನಮಾನದ ಕನಸು ಯಾವುದೂ ಇಲ್ಲ. ನಾಯಕರ ನಿಲುವು ಅವರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ಬಿಜೆಪಿ ಸೇರ್ಪಡೆಗೆ ತುದಿಗಾಲಲ್ಲಿ ಇದ್ದು, ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದು ಉತ್ಸಾಹ ಹೆಚ್ಚಿಸಿದೆ.‘ಈಗಾಗಲೇ ಬಿಜೆಪಿ–ಕೆಜೆಪಿ ವಿಲೀನ ಪ್ರಕ್ರಿಯೆ ಆರಂಭವಾಗಿದೆ. ಇದೇ 20ರಂದು ಕೆಜೆಪಿ ಕಾರ್ಯಕಾರಣಿಯಲ್ಲಿ ವಿಲೀನ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ಹೇಳಿದರು.ಮಹಾನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ ಬೀಳಗಿ ಅವರನ್ನು ಇತ್ತೀಚೆಗೆ ಸ್ವತಃ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮುಂದಾಗಿ ಪಕ್ಷಕ್ಕೆ ಸ್ವಾಗತಿಸಿದ್ದರು. ಇದು ಬಿಜೆಪಿ ಸೇರ್ಪಡೆ ಆಕಾಂಕ್ಷಿಗಳ ಉತ್ಸಾಹ ಹೆಚ್ಚಿಸಿದೆ. ಇದಕ್ಕೆ ಪೂರಕವಾಗಿ ಪಕ್ಷದ ಮಹಾನಗರ ಜಿಲ್ಲಾ ಘಟಕದ ನಿಯೋಜಿತ ಅಧ್ಯಕ್ಷರಾಗಿ ಘೋಷಣೆಯಾಗುತ್ತಿದ್ದಂತೆಯೇ ಲಿಂಗರಾಜ ಪಾಟೀಲ, ಸ್ಥಳೀಯ ಕೆಜೆಪಿ ಮುಖಂಡರ ಮನೆಗೆ ತೆರಳಿ ಅವರನ್ನು ಪಕ್ಷಕ್ಕೆ ಕರೆ ತರುವ ಯತ್ನ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry