ಬಿಜೆಪಿ ಅನಾಚಾರ ಶೀಘ್ರ ಅನಾವರಣ: ಕುಮಾರಸ್ವಾಮಿ

7

ಬಿಜೆಪಿ ಅನಾಚಾರ ಶೀಘ್ರ ಅನಾವರಣ: ಕುಮಾರಸ್ವಾಮಿ

Published:
Updated:

ಶಿವಮೊಗ್ಗ: `ಸದ್ಯದಲ್ಲೇ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಬಿಜೆಪಿಯ ಭ್ರಷ್ಟಾಚಾರ, ಅನಾಚಾರಗಳನ್ನು ನಮ್ಮ ಪಕ್ಷ ಜನತಾ ನ್ಯಾಯಾಲಯದ ಮುಂದಿಡಲಿದೆ. ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ' ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬುಧವಾರ ಇಲ್ಲಿ ಭವಿಷ್ಯ ನುಡಿದರು.ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಗ್ಗೆ ಯಾವುದೇ ಕಾರಣಕ್ಕೂ ಮೃದುಧೋರಣೆ ಇಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಭ್ರಷ್ಟಾಚಾರದಲ್ಲಿ ಕೆ.ಎಸ್. ಈಶ್ವರಪ್ಪ ಕೂಡ ಯಡಿಯೂರಪ್ಪ ಅವರ ಹಾದಿ ತುಳಿದಿದ್ದಾರೆ. ಅವರ ವಿರುದ್ಧವೂ ಪಕ್ಷ ಹೋರಾಟ ನಡೆಸಲಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈಶ್ವರಪ್ಪ ಸೇರಿದಂತೆ ಕೆಲ ಸಚಿವರು ರಾಜ್ಯದ ಅಭಿವೃದ್ಧಿಗಿಂತ ಸ್ವಂತ ಅಭಿವೃದ್ಧಿ ಮಾಡಿಕೊಂಡಿದ್ದೇ ಹೆಚ್ಚು ಎಂದು ಟೀಕಿಸಿದರು.ರಾಜ್ಯದಲ್ಲಿ ಈಗ ಹುಟ್ಟು ಪಡೆದ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಂದ ರಕ್ಷಣೆ ಪಡೆಯಲು ಆರಂಭಿಸಿವೆ. ಈ ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಗುರಿ, ಉದ್ದೇಶಗಳಿಲ್ಲ. ಸ್ವಹಿತಾಸಕ್ತಿ ಕಾಪಾಡಿಕೊಳ್ಳುವುದೇ ಮುಖ್ಯ ಉದ್ದೇಶ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.ಮುಂದಿನ ವಿಧಾನಸಭೆ ಚುನಾವಣೆಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಈಗಾಗಲೇ ಪಕ್ಷದ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಜೆಡಿಎಸ್ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಶೀಘ್ರದಲ್ಲೇ ಸಾಗರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry