ಶನಿವಾರ, ನವೆಂಬರ್ 23, 2019
18 °C

ಬಿಜೆಪಿ ಅಭ್ಯರ್ಥಿ ಪಟ್ಟಿ: 79 ಹಾಲಿ ಶಾಸಕರಿಗೆ ಟಿಕೆಟ್

Published:
Updated:

ನವದೆಹಲಿ: ಬಿಜೆಪಿ ಬಿಡುಗಡೆ ಮಾಡಿರುವ 140 ಅಭ್ಯರ್ಥಿಗಳ ಪಟ್ಟಿಯಲ್ಲಿ 79 ಜನ ಹಾಲಿ ಶಾಸಕರಿದ್ದಾರೆ. ಮೂವರು ಶಾಸಕರಿಗೆ ಮಾತ್ರ ಟಿಕೆಟ್ ದೊರೆತಿಲ್ಲ.ಅನಾರೋಗ್ಯ ಕಾರಣದಿಂದ ಬೈಂದೂರಿನ ಲಕ್ಷ್ಮೀನಾರಾಯಣ ಚುನಾವಣೆಗೆ ನಿಲ್ಲುವ ಆಸಕ್ತಿ ತೋರಿಲ್ಲ. `ಅಶ್ಲೀಲ ಸಿಡಿ ಹಗರಣ'ದ ಆರೋಪಕ್ಕೆ ಸಿಕ್ಕಿರುವ ರಘುಪತಿ ಭಟ್ ಬದಲಿಗೆ ಉಡುಪಿಯಿಂದ ಉದ್ಯಮಿ ಸುಧಾಕರ ಶೆಟ್ಟಿ ಅವರನ್ನು ಕಣಕ್ಕಿಳಿಸಲಾಗಿದೆ. ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಚಂದ್ರಕಾಂತ ಬೆಲ್ಲದ ಬದಲಿಗೆ ಅವರ ಪುತ್ರ ಅರವಿಂದ ಬೆಲ್ಲದ ಅವರಿಗೆ ಟಿಕೆಟ್ ನೀಡಲಾಗುತ್ತಿದೆ.ಬಿಜೆಪಿ ಮೊದಲ ಪಟ್ಟಿಯಲ್ಲಿ 28 ಪರಿಶಿಷ್ಟ ಜಾತಿ, 9 ಪರಿಶಿಷ್ಟ ಪಂಗಡ, 18 ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿದ್ದಾರೆ. ಉಳಿದವರು ಪ್ರಬಲ ಸಮುದಾಯ ಮತ್ತು ಮೇಲ್ವರ್ಗಕ್ಕೆ ಸೇರಿದವರು. ಒಟ್ಟು ಅಭ್ಯರ್ಥಿಗಳಲ್ಲಿ ಶೇ. 90ರಷ್ಟು ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಡಾಕ್ಟರೇಟ್ ಪದವೀಧರರು. 40 ವರ್ಷದ ಒಳಗಿನ 122 ಅಭ್ಯರ್ಥಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕಟ್ಟಾ ಸುಬ್ರಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಅವರಿಗೆ ಬಿಜೆಪಿ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಇಂತಹದೇ ಆರೋಪ ಎದುರಿಸುತ್ತಿರುವ ಸಚಿವ ಆರ್.ಅಶೋಕ್, ಸಿ.ಟಿ.ರವಿ ಸೇರಿದಂತೆ ಅನೇಕರಿಗೆ ಟಿಕೆಟ್ ಕೊಡಲಾಗಿದೆ. ಪ್ರಮೋದ್ ಮುತಾಲಿಕ ಅವರಿಗೆ ಟಿಕೆಟ್ ನೀಡುವ ಕುರಿತು  ಬಿಜೆಪಿ ಇನ್ನೂ ತೀರ್ಮಾನ ಕೈಗೊಂಡಿಲ್ಲ.ಉಳಿದ 84 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ಚುನಾವಣಾ ಸಮಿತಿ ಈ ತಿಂಗಳ 9ರಂದು ಸಭೆ ಸೇರಲಿದೆ. ಸಮಿತಿ ತೀರ್ಮಾನಗಳನ್ನು ಪ್ರದಾನ ಕಾರ್ಯದರ್ಶಿ ಅನಂತ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ಮಾನದಂಡ ಉಲ್ಲಂಘನೆ: ಮತ್ತೊಂದೆಡೆ ವಿಧಾನಸಭೆ ಚುನಾವಣೆಗೆ 177 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ತಾನೇ ನಿಗದಿಪಡಿಸಿದ್ದ ಮಾನದಂಡ ಪಾಲನೆ ಮಡಿಲ್ಲ. ಆಪರೇಷನ್ ಕಮಲ ಕಾರ್ಯಾಚರಣೆಗೆ ಬಲಿಯಾದವರಿಗೆ ಮಾತ್ರ ಟಿಕೆಟ್ ನಿರಾಕರಿಸಿ ನುಡಿದಂತೆ ನಡೆದಿದೆ. ಉಳಿದಂತೆ ಅಡ್ಡ ಮತದಾನ ಪ್ರಕರಣದಲ್ಲಿ ಭಾಗಿಯಾದವರಿಗೆ ಟಿಕೆಟ್ ನೀಡಿದೆ.ಅಡ್ಡ ಮತದಾನ ಮಾಡಿದವರು ಯಾರೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲದ್ದರಿಂದ ಸಾಂದರ್ಭಿಕವಾದ ಸಾಕ್ಷ್ಯ ಆಧರಿಸಿ ಸಂಶಯದ ಮೇಲೆ ಟಿಕೆಟ್ ನಿರಾಕರಣೆ ಮಾಡಲಾಗದು ಎಂದು ಕಾಂಗ್ರೆಸ್ ತನ್ನ ಕ್ರಮ ಸಮರ್ಥಿಸಿಕೊಂಡಿದೆ. ಮೊದಲು 20 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಸೋತವರಿಗೆ ಟಿಕೆಟ್ ಕೊಡಬಾರದೆಂದು ಕಾಂಗ್ರೆಸ್ ಚುನಾವಣಾ ಸಮಿತಿ ತೀರ್ಮಾನಿಸಿತ್ತು.  ಆದರೆ, ಯಲಬುರ್ಗಾದಿಂದ 29 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿರುವ ಬಸವರಾಜ ರಾಯರೆಡ್ಡಿ ಸೇರಿದಂತೆ ಕೆಲವರಿಗೆ ಟಿಕೆಟ್ ನೀಡಲಾಗಿದೆ. 36 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿರುವ ಮಾಜಿ ಸಚಿವ ವಿ.ಎಸ್. ಕೌಜಲಗಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕಾಂಗ್ರೆಸ್ ಪಕ್ಷದ ಎರಡನೆ ಪಟ್ಟಿ ವಿದೇಶ ಪ್ರವಾಸದಲ್ಲಿರುವ ಸೋನಿಯಾ ಹಿಂತಿರುಗಿದ ಬಳಿಕ ಅಂತಿಮಗೊಳ್ಳಲಿದೆ.

ಪ್ರತಿಕ್ರಿಯಿಸಿ (+)