ಶುಕ್ರವಾರ, ಜೂನ್ 18, 2021
27 °C

ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಿಲ್ಲ: ಶಿವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಹಾಸನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಹೇಳಿದರು.ತಾಲ್ಲೂಕಿನ ಕುಂಬ್ರಳ್ಳಿ ಗ್ರಾಮದ ಅವರ ನಿವಾಸಕ್ಕೆ ಗುರುವಾರ ಲೋಕಸಭಾ ಚುನಾವಣೆ ಹಾಸನ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ವಿಜಯಶಂಕರ್ ಭೇಟಿ ನೀಡಿ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ವಿಜಯ್‌ಶಂಕರ್‌ ಅವರು ಬೆಂಬಲ ನೀಡುವುದ ಲ್ಲದೆ ಚುನಾವಣಾ ಪ್ರಚಾರಕ್ಕೆ ಬರುವಂತೆ ಕೇಳಿಕೊಂಡರು. ನನ್ನ ಒಂದು ಮತವನ್ನು ನಿಮಗೆ ನೀಡುತ್ತೇನೆ. ಆದರೆ. ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರಕ್ಕೆ ಮಾತ್ರ ಬರುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಕಳಿಸಿದ್ದೇನೆ ಎಂದರು.ವಿಜಯ್‌ಶಂಕರ್‌ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ, ಪಕ್ಷದ ರಾಜ್ಯ ಮುಖಂಡರ ವರ್ತನೆಯಿಂದ ಬೇಸರ ಮಾತ್ರವಲ್ಲ ಸಿಟ್ಟು ಉಕ್ಕಿ ಬರುತ್ತಿದೆ. ವಿರೋಧ ಪಕ್ಷದ ನಾಯಕನಾಗಬೇಕಾಗಿದ್ದ ಸಂದರ್ಭದಲ್ಲಿ ಕುತಂತ್ರದ ರಾಜ­ಕಾರಣ ಮಾಡಿ, ಜಗದೀಶ್‌ ಶೆಟ್ಟರ್‌ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಿ­ದರು. ಅಷ್ಟಲ್ಲದೆ ಆ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಕೆಲವು ಮುಖಂಡರು ಗಲಾಟೆ ಮಾಡಿಸಿ ತಮ್ಮ ಮೇಲೆ ಆ ಆರೋಪ ಹೊರಿಸಿ ಪಕ್ಷದಿಂದ ಉಚ್ಚಾಟನೆ ಮಾಡಿದರು. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಸಹ, ಎರಡು ಬಾರಿ ಪಕ್ಷದ ರಾಜ್ಯಾಧ್ಯಕ್ಷನಾಗಿ, ಎರಡು ಬಾರಿ ಶಾಸಕನಾಗಿ ವಿಧಾನ ಪರಿಷತ್ ಸದಸ್ಯನಾಗಿರುವ ತಮ್ಮನ್ನು ಗುರುತಿಸುವ ಕೆಲಸ ಮಾಡಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಜನರಿಂದ ಬಿಜೆಪಿಗೆ ಹೆಚ್ಚು ಒಲವು ಇರುವಂತಹ ಈ ಚುನಾವಣೆ ಯಲ್ಲಿಯೂ ಸಹ ತಮ್ಮನ್ನು ಕಡೆಗಣಿಸಿ ಹೊರ ಜಿಲ್ಲೆಯಿಂದ ಅಭ್ಯರ್ಥಿಯನ್ನು ಹಾಕುವ ಅಗತ್ಯ ಏನಿದೆ? ಎಂದು ಪ್ರಶ್ನೆ ಮಾಡಿದರು. ಎಷ್ಟು ಬಾರಿ ಅವಮಾನವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಟಿಕೆಟ್‌ ನೀಡದೆ ಇರುವುದಕ್ಕೆ ಯಾವು ಕಾರಣ ವೂ ಸಹ ಪಕ್ಷದ ಹೈಕಮಾಂಡ್‌ಗೆ ಇಲ್ಲ, ವಯಸ್ಸಾಗಿದೆ, ಆರೋಗ್ಯ ಸರಿಯಿಲ್ಲ ಎಂಬ ಕಾರಣ ಹೇಳುತ್ತಾರೆ. ನಾನ್ಯಾಕೆ ಪ್ರಚಾರಕ್ಕೆ ಯಾವ ಮುಖ ಇಟ್ಟುಕೊಂಡು ಹೋಗಬೇಕು, ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದರು.ಜೆಡಿ(ಎಸ್‌) ಕಾಂಗ್ರೆಸ್‌ ನಡುವೆ ಸ್ಪರ್ಧೆ: ಬಿಜೆಪಿಗೆ ಲಿಂಗಾಯಿತ ಮತಗಳು ಬರುತ್ತವೆ ಎಂಬ ಪಕ್ಷದ ಲೆಕ್ಕಾಚಾರ  ಈ ಚುನಾವಣೆಯಲ್ಲಿ ಫಲಿಸುವುದಿಲ್ಲ. ತಮಗೆ ಟಿಕೆಟ್‌ ನೀಡದೆ ಇರುವುದರಿಂದ ಲಿಂಗಾಯಿತರು ಮಾತ್ರವಲ್ಲ ಜಿಲ್ಲೆಯ ನಿಷ್ಟಾವಂತ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರಿಗೆ ನೋವಾಗಿದೆ. ಲಿಂಗಾಯಿತ ಮತಗಳು ಮೂರು ಪಕ್ಷಗಳಿಗೆ ಹಂಚಿಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಅವರು, ಚುನಾವಣೆಯಲ್ಲಿ ಜೆಡಿ(ಎಸ್‌) ಹಾಗೂ ಕಾಂಗ್ರೆಸ್‌ ನಡುವೆಯೇ ಸ್ಪರ್ದೆ ನಡೆಯಲಿದೆ ಎಂದು ಭವಿಷ್ಯ ನುಡಿದರು.ಯಡಿಯೂರಪ್ಪ ಜಾತಿ ಕೆಡಿಸಿದರು: ಯಡಿಯೂರಪ್ಪನವರು ಬಿಜೆಪಿಯಿಂದ ಅನ್ಯಾಯ ವಾಗಿದೆ ಎಂದು ಕೆಜೆಪಿ ಕಟ್ಟಿದಾಗ, ಲಿಂಗಾಯಿತ ಸಮುದಾಯದ ಬಹುತೇಕರು ಕೆಜೆಪಿ ಬೆಂಬಲಿಸಿದರು. ಯಡಿಯೂರಪ್ಪ ಸಮುದಾಯ ದವರನ್ನು ಕಡೆಗಣಿಸಿ ಮತ್ತೆ ಬಿಜೆಪಿಗೆ ನೆಗೆದಿದ್ದಾರೆ. ಅವರಿಗೆ ಬೆಂಬಲ ಕೊಡಲು ಹೋಗಿ ಇತ್ತ ಕೆಜೆಪಿಯೂ ಇಲ್ಲ, ಬಿಜೆಪಿಯೂ ಇಲ್ಲದೆ ಬಹುತೇಕ ಲಿಂಗಾಯಿತರು ಅತಂತ್ರ ಸ್ಥಿತಿಯಲ್ಲಿ ಇರಬೇಕಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.