ಬುಧವಾರ, ಅಕ್ಟೋಬರ್ 16, 2019
28 °C

ಬಿಜೆಪಿ ಈಗ ಒಡೆದ ಮನೆ: ಮಹದೇವು ಟೀಕೆ

Published:
Updated:

ಚಾಮರಾಜನಗರ: `ಬಿಜೆಪಿಯಲ್ಲಿ ಹಲವು ಬಣ ಹುಟ್ಟಿಕೊಂಡಿವೆ. ಅದು ಈಗ ಅಕ್ಷರಶಃ ಒಡೆದುಹೋಗಿದ್ದು, ವಿರೋಧ ಪಕ್ಷವಾದ ಕಾಂಗ್ರೆಸ್‌ಗೂ ಕೆಲಸ ಇಲ್ಲದಂತಾಗಿದೆ~ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂ. ಮಹದೇವು ಲೇವಡಿ ಮಾಡಿದರು.ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಬುಧವಾರ ನಡೆದ ಜೆಡಿಎಸ್ ಸಭೆ ಮತ್ತು ವೀರಶೈವ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಿ.ಎಸ್. ಯಡಿಯೂರಪ್ಪ ಅವರಂತಹ ವಚನಭ್ರಷ್ಟ ಮುಖಂಡ ರಿಂದ ಬಿಜೆಪಿ ಒಡೆದ ಮನೆಯಾಗಿದೆ. ಅವರ ಆಡಳಿತದಲ್ಲಿ ಜನಪ್ರತಿನಿಧಿಗಳು ಮತ್ತು ಮತದಾರರು ಭ್ರಷ್ಟರಾಗಿದ್ದಾರೆ. ಮತದಾರರು ಮೌಲ್ಯ ಕಳೆದುಕೊಂಡಿದ್ದಾರೆ. ಸರ್ಕಾರದ ಬೊಕ್ಕಸ ಲೂಟಿ ಮಾಡಿದ ನಂತರವೂ ಪುನಃ ಅಧಿಕಾರದ ಗದ್ದುಗೆ ಏರಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.`ನಾನು ಕಾಂಗ್ರೆಸ್‌ನಲ್ಲಿ 35 ವರ್ಷ ಸೇವೆ ಸಲ್ಲಿಸಿದೆ. ಯಡಿಯೂರಪ್ಪನವರ ಮಾತು ಕೇಳಿ ಬಿಜೆಪಿಗೆ ಸೇರಿದೆ. ನನ್ನ ವಿರೋಧಿಯ ಎದುರು ಚುನಾವಣೆ ನ್ಲ್ಲಿಲಬೇಕೆಂದು ವರುಣ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದಿಂದ ಟಿಕೆಟ್ ನೀಡುವಂತೆ ಕೇಳಿದೆ. ಆದರೆ, ಟಿಕೆಟ್ ನೀಡಲಿಲ್ಲ. ಚಾಮರಾಜನಗರದಲ್ಲಿ ಸ್ಪರ್ಧಿಸುವಂತೆ ಸೂಚಿಸಿದರು. ಹೀಗಾಗಿ, ಸೋಲು ಅನುಭವಿಸಬೇಕಾಯಿತು. ಈ ಸೋಲಿಗೆ ನಾನೇ ಕಾರಣ. ನಂತರ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುತ್ತೇನೆಂದು ಯಡಿಯೂರಪ್ಪ ಹೇಳಿದ್ದರು. ಆದರೆ, ನನ್ನ ವಿರೋಧಿಗೆ ಮಣೆ ಹಾಕಿದರು. ಇದರಿಂದ ನನ್ನ ಆತ್ಮಗೌರವಕ್ಕೆ ಧಕ್ಕೆಯಾಯಿತು. ಹಾಗಾಗಿ, ಬಿಜೆಪಿ ತೊರೆದೆ~ ಎಂದು ಆತ್ಮಾವಲೋಕನ ಮಾಡಿಕೊಂಡರು.ಸಮರ್ಥ ಆಡಳಿತ ನೀಡಲು ಬಿಜೆಪಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೂಡಲೇ, ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಕೋಟೆ ಶಿವಣ್ಣ ಮಾತನಾಡಿ, `ಮಹದೇವು ಅವರು ಜೆಡಿಎಸ್‌ಗೆ ಸೇರ್ಪಡೆಯಾದ ದಿನದಿಂದಲೂ ಜಿಲ್ಲೆಯಲ್ಲಿ ಪಕ್ಷ ಸದೃಢವಾಗುತ್ತಿದೆ. ಇದಕ್ಕೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ~ ಎಂದು ಹೇಳಿದರು.ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪೊನ್ನಾಚಿ ಮಹದೇವಸ್ವಾಮಿ ಮಾತನಾಡಿ, `ಜಿಲ್ಲೆಯ ಉಸ್ತುವಾರಿ ಹೊತ್ತ ಸಚಿವರು ಅಭಿವೃದ್ಧಿಗೆ ಒತ್ತು ನೀಡಬೇಕು. ಆದರೆ, ಸಚಿವ ಎಂ.ಪಿ. ರೇಣುಕಾಚಾರ್ಯ ಜಿಲ್ಲೆಗೆ ಬಂದಾಗ ಮೆರವಣಿಗೆಯಲ್ಲಿ ಕುಣಿಯುವುದಲ್ಲಿಯೂ ಮಗ್ನರಾಗಿ ರುತ್ತಾರೆ. ಸಚಿವರು ಕುಣಿದರೆ ಜಿಲ್ಲೆಯ ಕೆರೆಗಳಲ್ಲಿ ನೀರು ತುಂಬುತ್ತದೆಯೇ?~ ಎಂದು ವ್ಯಂಗ್ಯವಾಡಿದರು.ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಪಂಚಾಕ್ಷರಿ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಮಾಜಿ ಶಾಸಕ ಎಸ್. ಬಾಲರಾಜ್, ಮೂಡ್ನಾಕೂಡು ಕುಮಾರ್, ಮಹಮ್ಮದ್ ಅಸ್ಗರ್, ಇರ್ಷಾದ್ ಉಲ್ಲಾ, ನಂದೀಶ್, ಶಿವಸ್ವಾಮಿ, ಶಿವಮೂರ್ತಿ, ಸುದರ್ಶನಗೌಡ ಇತರರು ಹಾಜರಿದ್ದರು.

Post Comments (+)