ಭಾನುವಾರ, ಜೂನ್ 20, 2021
25 °C

ಬಿಜೆಪಿ, ಕಾಂಗ್ರೆಸ್‌ ಆಟ ನಡೆಯದು: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ‘ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಮುಗಿಸಬೇಕು ಎಂಬ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ನನಗೆ ಸ್ಪಷ್ಟ ಅಭಿಪ್ರಾಯವಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಹಣದ ಹೊಳೆಯನ್ನೇ ಹರಿಸಿದರೂ ಅವರ ಆಟ ಏನೂ ನಡೆಯುವುದಿಲ್ಲ. ಜಿಲ್ಲೆಯ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ’ ಎಂದು ಎಚ್‌.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಶುಕ್ರವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಕಾಂಗ್ರೆಸ್‌ ನಿರಂತರವಾಗಿ 10 ವರ್ಷಗಳ ಕಾಲ ಆಡಳಿತ ನಡೆಸಿದರೂ ಎಲ್ಲಾ ರಾಜ್ಯಗಳಲ್ಲೂ ಪಕ್ಷ ಕುಸಿಯುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ, ಕೇಂದ್ರ ಸಚಿವರು ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದು ಎಂದರು.ಪಕ್ಷದ ಸಕ್ರಿಯ ಕಾರ್ಯಕರ್ತರಿಂದ ಕಳೆದ ಎರಡು ತಿಂಗಳಲ್ಲಿ ಹೊಸ ಸಂದೇಶ ರಾಷ್ಟ್ರಮಟ್ಟಕ್ಕೆ ರವಾನೆಯಾಗಿದೆ. ನನ್ನ ಅನುಭವ ನನಗೆ ದಾರಿ ತೋರಿಸಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಮೂರನೇ ಶಕ್ತಿಯ ಅವಶ್ಯವಿದೆ ಎಂಬುದನ್ನು ರಾಜ್ಯಗಳು ತೋರಿಸಬೇಕಾದ ಅನಿವಾರ್ಯತೆ ಇದೆ. ಪ್ರಧಾನಿಯಾಗುವವರು ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡಬೇಕು. ಯಾವುದೇ ವ್ಯಕ್ತಿ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವುದನ್ನು ತಿಳಿಯಬೇಕು ಎಂದು ಹೇಳಿದರು.ಬಡತನ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ ಕಾಂಗ್ರೆಸ್‌, ಬಿಜೆಪಿಗಳಿಂದ ಸಾಧ್ಯವಿಲ್ಲ. ಬರೀ ಆ ಭಾಗ್ಯ, ಈ ಭಾಗ್ಯ ನೀಡುವುದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ರೈತರು ಭಿಕ್ಷುಕರಲ್ಲ. ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿ ಆಳ್ವಿಕೆ ಮಾಡಿದ್ದರು. ಈಗ ಯುಪಿಎ ಸರ್ಕಾರ ಸೋನಿಯಾ ಗಾಂಧಿ ಹಿಡಿತದಲ್ಲಿ ಇದೆ. ಆದರೂ, ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಕಾಂಗ್ರೆಸ್‌ ಪಕ್ಷಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.ಮಾರ್ಚ್ 25ರಂದು ಹಾಸನದಲ್ಲಿ ನಾಮಪತ್ರ ಸಲ್ಲಿಸುವುದಾಗಿ ದೇವೇಗೌಡರು ತಿಳಿಸಿದರು.ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ ದೇವೇಗೌಡರ ಪ್ರಯತ್ನದಿಂದಾಗಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ, ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದಾಗಿ ಕಳೆದ 10 ತಿಂಗಳಿನಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಗಳು ಆಗಿಲ್ಲ ಎಂದು ಆರೋಪಿಸಿದರು.ಶಾಸಕ ಶಿವಲಿಂಗೇಗೌಡ, ಜಿ.ಪಂ. ಉಪಾಧ್ಯಕ್ಷ ಬಿಳಿಚೌಡಯ್ಯ, ತಾಲ್ಲೂಕು ಜೆಡಿಎಸ್‌ ಘಟಕ ಅಧ್ಯಕ್ಷ ಎನ್‌.ಎಸ್‌. ಸಿದ್ದರಾಮಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಪುರಸಭಾ ಅಧ್ಯಕ್ಷ ಮೋಹನ್‌ಕುಮಾರ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಮೀವುಲ್ಲಾ, ತಾ.ಪಂ. ಸದಸ್ಯ ಲಕ್ಷ್ಮಣ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಹನುಮಪ್ಪ, ಬೇಲೂರು ತಾಲ್ಲೂಕು ಜೆಡಿಎಸ್‌ ಘಟಕ ಅಧ್ಯಕ್ಷ ತೋ.ಚ. ಅನಂತಸುಬ್ಬರಾಯ, ಮಾಜಿ ಶಾಸಕ ಪರಮೇಶ್ವರಪ್ಪ, ಗಂಗಾಮತ ಸಮಾಜದ ಅಧ್ಯಕ್ಷ ಕೇಶವಮೂರ್ತಿ, ಜಿ.ಪಂ ಸದಸ್ಯರಾದ ಪಾರ್ವತಮ್ಮ, ಹುಚ್ಚೇಗೌಡ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.