ಶುಕ್ರವಾರ, ಮೇ 20, 2022
23 °C

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ರಾಜ್ಯಕ್ಕೆ ವಿದ್ಯುತ್ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಘಟಕ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ರಾಜ್ಯ ಘಟಕದ ಕರೆಗೆ ಬೆಂಬಲಿಸಿ ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ಧರಾಜು ಕಲಕೋಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನಗರದ ಶ್ರೀರಾಮ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ನಂತರ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ಧರಾಜು ಕಲಕೋಟಿ ಮಾತನಾಡಿ, ಕೇಂದ್ರ ಸರ್ಕಾರವು ದೇಶದಲ್ಲಿನ ಕಾಂಗ್ರೆಸ್ಸೇತರ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದಲೇ ವಿದ್ಯುತ್ ಉತ್ಪಾದನೆಗೆ ಅವಶ್ಯವಿರುವ ಕಲ್ಲಿದ್ದಲು ಪೂರೈಕೆ ಮಾಡದೇ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಹತ್ತು ಹಲವು ಬಾರಿ ಕೇಂದ್ರಕ್ಕೆ ನಿಯೋಗದ ಮೂಲಕ ತೆರಳಿ ಸಮರ್ಪಕ ಕಲ್ಲಿದ್ದಿಲು ಪೂರೈಸುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ಕಾಂಗ್ರೆಸ್ ಮುಖಂಡರು ವಿದ್ಯುತ್ ಪೂರೈಕೆ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ ಎಂಬ ಸತ್ಯವನ್ನು ಮುಚ್ಚಿಟ್ಟು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂಡ್ರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ರಾಜ್ಯದ ಜನತೆ ಬಗ್ಗೆ ಕಾಳಜಿ ಇದ್ದರೆ, ತಕ್ಷಣವೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಕಲ್ಲಿದ್ದಿಲು ಪೂರೈಕೆ ಮಾಡಿಸಬೇಕೆಂದು ಒತ್ತಾಯಿಸಿದರು.ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಅಧಿಕಾರಕ್ಕೆ ಬಂದಾಗಿನಿಂದಲೂ ಸತತ ಪ್ರಯತ್ನ ನಡೆಸುತ್ತಿದೆ. ಆದರೆ, ಕೇಂದ್ರ ಸರ್ಕಾರ ಅದಕ್ಕೆ ಪೂರಕವಾಗಿ ಸಹಕಾರ ನೀಡದೇ ರಾಜ್ಯದ ಯೋಜನೆಗಳಿಗೆ ಅಡ್ಡಗಾಲು ಹಾಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.ಕೇಂದ್ರ ಸರ್ಕಾರ ರಾಜ್ಯಕ್ಕೆ ಅವಶ್ಯವಿರುವ ಕಲ್ಲಿದ್ದಿಲು ನೀಡದೇ ತನ್ನ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದೆ. ಕೇಂದ್ರ ಈ ಕಪಟ ನಾಟಕ ಜನರಿಗೆ ಗೊತ್ತಾಗಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ಗ್ರಾಮೀಣ ಘಟಕದ ಅಧ್ಯಕ್ಷ ಕೆ.ಸಿ.ಕೋರಿ, ದಾವಲ ಹಿರೇಮುಗದೂರ, ಜಿ.ಪಂ.ಸದಸ್ಯೆ ಬಸಮ್ಮ ಅಬಲೂರು ಮುಂತಾದವರು ಮಾತನಾಡಿ, ರಾಜ್ಯದ ವಿದ್ಯುತ್ ಕೊರತೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆಪಾದಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ ಮಲೆಬೆನ್ನೂರ, ವಿರೂಪಾಕ್ಷ ನರಗುಂದ, ಬಿ.ಎಸ್.ಕುಲಕರ್ಣಿ, ಪಾಲಾಕ್ಷಗೌಡ ಪಾಟೀಲ, ಸಿದ್ಧರಾಜು ಕಲಕೋಟಿ, ವೆಂಕಣ್ಣ ಚಪ್ಪರದ, ಕೆ.ಸಿ.ಕೋರಿ, ಮಂಜುನಾಥ ಡೋಲೆ, ನಾಗೇಂದ್ರ ಕಟಕೋಳ, ಗಿರೀಶ ತುಪ್ಪದ, ಸೋಮಶೇಖರ ತಿಪಶೆಟ್ಟಿ, ಮುತ್ತಣ್ಣ ಯಲಿಗಾರ, ಪ್ರಭು ಹಿಟ್ನಳ್ಳಿ,  ನಿಂಗಪ್ಪ ಚಳಗೇರಿ, ಉಮೇಶ ಬಣಕಾರ, ಶಿವಯೋಗೆಪ್ಪ ಬಸಪ್ಪನವರ, ಆರ್.ಜೆ.ಕುಲಕರ್ಣಿ, ಗದಿಗೇಶ ಕುಲಕರ್ಣಿ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ಜಂಬಗಿ,  ನಗರಸಭೆ ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ, ಸದಸ್ಯ ಮಂಜುಳಾ ಕರಬಸಮ್ಮನವರ, ಭ್ರಮರಾಂಬಾ ಯಾವಲಗಲ್ಲಮಠ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.