ಬಿಜೆಪಿ ಕಾರ್ಯಕರ್ತರ ರಾಜೀನಾಮೆ

7

ಬಿಜೆಪಿ ಕಾರ್ಯಕರ್ತರ ರಾಜೀನಾಮೆ

Published:
Updated:

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾಹುಲಿಯಪ್ಪಗೌಡ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುದ್ದೆ ನೀಡದಿರುವುದರಿಂದ ಮನನೊಂದು ಲಕ್ಯಾ ಹೋಬಳಿ ಬಿಜೆಪಿ. ಮುಖಂಡರು ಮತ್ತು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದ ಆಧ್ಯಕ್ಷ ಬೆಳವಾಡಿ ರವೀಂದ್ರ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪಕ್ಷದಲ್ಲಿ ಹಿಂದುಳಿದ ವರ್ಗದವರಿಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ. ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು, ಉತ್ತಮ ವಿದ್ಯಾರ್ಹತೆ ಹೊಂದಿರುವ ಹಾಗೂ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡಿಕೊಂಡು ಬಂದಿರುವ ರೇಖಾ ಅವರಿಗೆ ಕೊನೆಯ ಗಳಿಗೆಯಲ್ಲಿ ಅಧ್ಯಕ್ಷಗಾದಿ ತಪ್ಪುವಂತೆ ಮಾಡಲಾಗಿದೆ ಎಂದು ದೂರಿದರು.ವರಿಷ್ಠರು ತಮ್ಮ ತೀರ್ಮಾನಕ್ಕೆ ಸಮರ್ಪಕ ಉತ್ತರ ನೀಡಬೇಕು. ಉತ್ತರ ಬಯಸಿಯೇ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ಸಾಮೂಹಿಕ ರಾಜಿನಾಮೆ ಸಲ್ಲಿಸಲಾಗಿದೆ ಎಂದು ಅವರು ನುಡಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುದ್ದೆ ಕೈತಪ್ಪಿರುವುದರಿಂದ ಬಿಜೆಪಿಗೆ ರಾಜೀನಾಮೆ ನೀಡುವಂತೆ ರೇಖಾಹುಲಿಯಪ್ಪ ಗೌಡ ಅವರಲ್ಲಿ ಮನವಿ ಮಾಡಲಾಗುವುದು. ಶನಿವಾರ ಲಕ್ಯಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಕಾರ್ಯಕರ್ತರ ತೀರ್ಮಾನಕ್ಕೆ ಜಿಲ್ಲಾಪಂಚಾಯಿತಿ ಸದಸ್ಯರು ಬದ್ಧವಾಗಿರಬೇಕಾಗುತ್ತದೆ ಎಂದು ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ ತಿಳಿಸಿದರು.ಹಿಂದುಳಿದ ವರ್ಗದ ಮುಖಂಡರನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನಗಳು ಪಕ್ಷದ ಒಳಗೆ ನಡೆಯುತ್ತಾ ಬಂದಿವೆ ಎಂದು ಅವರು ಇದೇ ಸಂದರ್ಭದಲ್ಲಿ ದೂರಿದರು. ಜಿಲ್ಲಾ ಪಂಚಾಯಿತಿ ಪ್ರಚಾರದ ವೇಳೆ ಸಂಸದರು ರೇಖಾಹುಲಿಯಪ್ಪ ಗೌಡ ಮುಂದಿನ ಅಧ್ಯಕ್ಷರು ಎಂದು ಭರವಸೆ ನೀಡಿದ್ದರು. ಈಗ ಕೊನೆ ಗಳಿಗೆಯಲ್ಲಿ ಅಧ್ಯಕ್ಷಗಾದಿ ಕೈತಪ್ಪಿ ಹೋಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾಗದ ಬಿಜೆಪಿ ಮೂಲ ಸಿದ್ಧಾಂತವನ್ನು ಕಡೆಗಣಿಸಿ ಈಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಆಯ್ಕೆಮಾಡುವಾಗ ಜಾತಿ ಹೆಸರಿನಲ್ಲಿ ರೇಖಾಹುಲಿಯಪ್ಪಗೌಡ ಅವರನ್ನು ಅವಕಾಶ ವಂಚಿತರನ್ನಾಗಿ ಮಡಲಾಗಿದೆ ಎಂದು ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಬಿ.ಬಸವರಾಜ್ ಅಸಮಾಧಾನ ಹೊರಹಾಕಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಿಜಗುಣಮೂರ್ತಿ, ಗೀತಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry