ಭಾನುವಾರ, ಜೂನ್ 13, 2021
26 °C

ಬಿಜೆಪಿ ಕುರ್ಚಿ ಕಚ್ಚಾಟದಿಂದ ಚುನಾವಣೆ- ಮೋಟಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: `ರಾಜ್ಯದಲ್ಲಿ ಅಧಿಕಾರವನ್ನು ಅನುಭವಿಸಬೇಕು ಎನ್ನುವ ಕಾರಣದಿಂದ ರಾಜಕೀಯದ ಕುರ್ಚಿ ಆಟವನ್ನು ಹಚ್ಚಿಕೊಂಡ ಬಿಜೆಪಿ ನಾಯಕರ ಕುರ್ಚಿ ಕಚ್ಚಾಟದಿಂದ ರಾಜ್ಯದ ಜನತೆ ನಿರಂತರವಾಗಿ ಉಪ ಚುನಾವಣೆಗಳನ್ನು ಎದುರಿಸುವಂತ ಸ್ಥಿತಿ ನಿರ್ಮಾಣವಾಗಿದೆ. ಯಾವ ಪುರುಷಾರ್ಥಕ್ಕಾಗಿ ಬಿಜೆಪಿ ಚುನಾವಣೆಯ ಹೆಸರಿನಲ್ಲಿ ಸರ್ಕಾರದ ಕೋಟ್ಯಾಂತರ ಹಣವನ್ನು ವೆಚ್ಚ ಮಾಡುತ್ತಿದೆ ಎನ್ನುವುದನ್ನು ಬಿಜೆಪಿ ಜನರಿಗೆ ವಿವರಿಸಲಿ~ ಎಂದು ವಿಧಾನಪರಿಷತ್‌ನ ವಿಪಕ್ಷ ನಾಯಕಿ ಮೋಟಮ್ಮ ಆಗ್ರಹಿಸಿದರು.ಕುಂದಾಪುರದ ನಾರಾಯಣಗುರು ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.`ರಾಜ್ಯದ ಜನತೆಗೆ ಅಗತ್ಯವಾಗಿರುವ ನೀರು, ಸೂರು ಹಾಗೂ ಬೆಳಕನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಜನತೆಯನ್ನು ಭೃಷ್ಟಾಚಾರದ ಕರಿನೆರಳಿನಲ್ಲಿ ಮರೆ ಮಾಡಿದ ಬಿಜೆಪಿ ಶಾಸಕರು ಕೋಟಿಗಳಲ್ಲಿ ತೂಗುತ್ತಿದ್ದಾರೆ~ ಎಂದು ಆರೋಪಿಸಿದರು.`ರಾಜ್ಯದ ವಿದ್ಯುತ್ ಅಗತ್ಯವನ್ನು ಅಂದಾಜಿಸದೆ ಯೋಜನೆಗಳನ್ನು ಘೋಷಿಸಿದ ಸರ್ಕಾರ ಇದೀಗ ಕಲ್ಲಿದ್ದಲು ಕೊರತೆಯನ್ನು ನೆಪವಾಗಿಸಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕುಡಿಯುವ ನೀರಿಗೆ ಮೀಸಲಿಟ್ಟ 950 ಕೋಟಿ ರೂ.ಗಳಲ್ಲಿ ಕೇವಲ ರೂ 250 ಕೋಟಿಯೂ ಖರ್ಚಾಗಿಲ್ಲ ಎಂದು ಸ್ವತಃ: ಮುಖ್ಯಮಂತ್ರಿಯೇ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲ ಅನನುಭವಿ ಸಚಿವರನ್ನು ಹೊಂದಿರುವುದೆ ಕಾರಣ. ಈ ಸರ್ಕಾರವನ್ನು ತೊಲಗಿಸಲು ಇದು ಸಕಾಲ~ ಎಂದರು.`ಸಂಸ್ಕೃತಿ ಮತ್ತು ಧರ್ಮವನ್ನು ದತ್ತು ಪಡೆದವರಂತೆ ಮಾತನಾಡುವ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಡೆದಿರುವ ಅಸಹ್ಯ ಪ್ರಕರಣಗಳಿಂದಾಗಿ ದೇಶದಲ್ಲಿ ತಲೆ ಎತ್ತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿಯಲ್ಲಿ ವಿದೇಶಿ ಮಹಿಳೆಯರ ಅರೆನಗ್ನ ನತ್ಯ ರೇವು ಪಾರ್ಟಿಗೆ ಅವಕಾಶ ಕಲ್ಪಿಸಿರು ವುದು, ಶಿವಮೊಗ್ಗದಲ್ಲಿ ಶಾಸಕರೊಬ್ಬರಿಂದ ಮಹಿಳೆಯೊಬ್ಬರ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಇನ್ನೂ ನ್ಯಾಯ ದೊರಕದೆ ಇರುವುದು, ನರ್ಸ ಗಲ್ಲಕ್ಕೆ ಕಿಸ್ ಕೊಟ್ಟಿದ್ದಕ್ಕೆ ಸಚಿವಗಿರಿಯ ಉಡುಗೊರೆ ನೀಡಿರುವುದು, ಶಾಸಕರ ಪತ್ನಿ ನಿಗೂಢ ಸಾವಿನ ಪ್ರಕರಣದ ಹಿನ್ನೆಲೆ ಬಹಿರಂಗವಾಗದೆ ಇರುವುದೆಲ್ಲವೂ ಸಂಸ್ಕೃತಿ ಪಾ  ಹೇಳುವ ಬಿಜೆಪಿಯ ಸಭ್ಯತೆ ಲಕ್ಷಣಗಳು~ ಎಂದು ಲೇವಡಿ ಮಾಡಿದರು.ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ ದೇಶಪಾಂಡೆ ಮಾತನಾಡಿ, `ರಾಜ್ಯದ ಬೀದಿಗಳಲ್ಲಿ ಭ್ರಷ್ಟಾಚಾರದ ಪೆಡಂಭೂತವನ್ನು ತಂದಿಟ್ಟ ಬಿಜೆಪಿ ಸರ್ಕಾರಯಿಂದಾಗಿ ದೇಶದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಅಲ್ಪಸಂಖ್ಯಾಕರ ಧಾರ್ಮಿಕ ಶದ್ದಾ ಕೇಂದ್ರಗಳ ಮೇಲೆ ವ್ಯವಸ್ಥಿತ ದಾಳಿ ಸಂಘಟಿಸಲಾಗಿದೆ. ಒಂದು ವರ್ಷದಿಂದ ಬಡವರ, ವಿಧವೆಯರ, ವೃದ್ಧರ ಹಾಗೂ ಅಂಗವಿಕಲರ ವೇತನ ಹಾಗೂ ಇತರ ಅರ್ಜಿಗಳನ್ನೆ ವಿತರಿಸುತ್ತಿಲ್ಲ~ ಎಂದು ದೂರಿದರು.`ಚುನಾವಣೆ ಬಂದಾಗ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾಕರ ಬಗ್ಗೆ ಮಾತನಾಡುವ ಬಿಜೆಪಿ ಅಧಿಕಾರಾವಧಿಯಲ್ಲಿ ಈ ವರ್ಗದ ಎಷ್ಟು ಮಂದಿಯನ್ನು ಸಚಿವರನ್ನಾಗಿ ಮಾಡಿದೆ~ ಎಂದು ಪ್ರಶ್ನಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿ ಮಾತನಾಡಿ, `ಇಂದಿರಾ ಗಾಂಧಿಗೆ ರಾಜಕೀಯ ಪುರ್ನಜನ್ಮ ನೀಡಿರುವ ಚಿಕ್ಕಮಗ ಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಬಂದಿರುವ ಈ ಉಪಚುನಾವಣೆ ಕಾಂಗ್ರೆಸ್ ಪಾಲಿಗೆ  ದಿಕ್ಸೂಚಿಯಾಗಲಿದೆ~ ಎಂದರು.ಭಟ್ಕಳ ಶಾಸಕ ಜೆ.ಡಿ ನಾಯ್ಕ, ವೀಣಾ ಜಯಪ್ರಕಾಶ ಹೆಗ್ಡೆ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ರಾಜ್ಯ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಕೆಪಿಸಿಸಿ ಸದಸ್ಯ ಬಿಜೂರು ರಘುರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಜೇಕಬ್ ಡಿಸೋಜಾ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಬಿ.ಹಿರಿಯಣ್ಣ, ವಾಸುದೇವ ಯಡಿಯಾಳ, ಎಸ್.ರಾಜೂ ಪೂಜಾರಿ, ದೇವಕಿ ಪಿ ಸಣ್ಣಯ್ಯ, ರೇವತಿ ಶೆಟ್ಟಿ, ಜ್ಯೋತಿ ವಿ ಪುತ್ರನ್, ಪ್ರಸನ್ನಕುಮಾರ ಶೆಟ್ಟಿ, ಸ್ಥಳೀಯ ಮುಖಂಡರುಗಳಾದ ಕಷ್ಣದೇವ ಕಾರಂತ,ಮಲ್ಯಾಡಿ ಶಿವರಾಮ ಶೆಟ್ಟಿ, ವಿಕಾಶ ಹೆಗ್ಡೆ, ದೇವಾನಂದ ಶೆಟ್ಟಿ, ಕಾಳಪ್ಪ ಪೂಜಾರಿ, ಕೋಡಿ ಅಬ್ದುಲ್ ಸಾಹೇಬ್, ನಾರಾಯಣ ಆಚಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.