ಗುರುವಾರ , ನವೆಂಬರ್ 14, 2019
22 °C

ಬಿಜೆಪಿ: ಜಿಲ್ಲಾ ಘಟಕಗಳಿಗೆ ಹೊಸ ಅಧ್ಯಕ್ಷರ ನೇಮಕಕ್ಕೆ ತೀರ್ಮಾನ

Published:
Updated:

ಬೆಂಗಳೂರು: ಬಿಜೆಪಿಯ ಜಿಲ್ಲಾ ಘಟಕಗಳಿಗೆ ಇನ್ನೊಂದು ವಾರದಲ್ಲಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಪಕ್ಷದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಈ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಮುಖಂಡರಾದ ಅನಂತಕುಮಾರ್, ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ ಮತ್ತಿತರ ಹಿರಿಯ ಮುಖಂಡರು ಭಾಗವಹಿಸಿದ್ದರು.ಲೋಕಸಭಾ ಚುನಾವಣೆಗೆ ತಯಾರಿ ನಡೆಸುವ ಉದ್ದೇಶದಿಂದ ಕರೆದಿದ್ದ ಈ ಸಭೆಯಲ್ಲಿ ಅವಧಿ ಮುಗಿದ ಜಿಲ್ಲಾಧ್ಯಕ್ಷರನ್ನು ಬದಲಿಸಲು ತೀರ್ಮಾನಿಸಲಾಯಿತು. ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಜೋಶಿ `ಪ್ರಜಾವಾಣಿ'ಗೆ ತಿಳಿಸಿದರು.ಸ್ಥಳೀಯ ಮುಖಂಡರ ಸಲಹೆ ಪ್ರಕಾರ ಹೊಸಬರನ್ನು ನೇಮಕ ಮಾಡಲಾ ಗುವುದು. ಬಿಜೆಪಿಯ 36 ಸಂಘಟನಾ ಜಿಲ್ಲೆಗಳ ಪೈಕಿ 27ರಲ್ಲಿ ಹೊಸಬರನ್ನು ಆಯ್ಕೆ ಮಾಡಿದ್ದು, ಅಧಿಕೃತವಾಗಿ ಪ್ರಕಟಿಸುವುದು ಮಾತ್ರ ಬಾಕಿ ಇದೆ. ಈ ವಾರದಲ್ಲಿ ಎಲ್ಲವೂ ಪೂರ್ಣವಾಗಲಿದೆ ಎಂದರು.ಚಳವಳಿಗೆ ಸಿದ್ಧತೆ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳು ವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ 43 ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದರು.

ಆ ವಿಷಯವನ್ನು ಕೈಬಿಟ್ಟಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು ಎಂದು ಗೊತ್ತಾಗಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ನಿಗದಿತ ಅವಧಿಯೊಳಗೆ ಗ್ರಾಮಸಭೆಗಳನ್ನು ನಡೆಸದ ಗ್ರಾಮ ಪಂಚಾಯಿತಿ ಸದಸ್ಯರನ್ನು ಅನರ್ಹಗೊಳಿಸುವ ಮಸೂದೆ ವಿರುದ್ಧ ರಾಜ್ಯದಾದ್ಯಂತ ಚಳವಳಿ ನಡೆಸುವ ತೀರ್ಮಾನ ಕೂಡ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)