ಗುರುವಾರ , ಆಗಸ್ಟ್ 5, 2021
27 °C

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆ: ಲಾಬಿ ಶುರು

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಅವಧಿ ಜುಲೈನಲ್ಲಿ ಕೊನೆಗೊಳ್ಳಲಿದ್ದು ಹೊಸ ಅಧ್ಯಕ್ಷರ ಆಯ್ಕೆಗೆ ತೆರೆಮರೆಯಲ್ಲಿ ಕಸರತ್ತು ಪ್ರಾರಂಭವಾಗಿದೆ. ಅಧ್ಯಕ್ಷ ಪದವಿಗೆ ಆಕಾಂಕ್ಷಿಗಳು ತಮ್ಮ ನಾಯಕರ ಬಳಿ ಗಿರಕಿ ಹೊಡೆಯಲು ಪ್ರಾರಂಭಿಸಿದ್ದಾರೆ.ಆಕಾಂಕಿಗಳ ಸಾಲಿನಲ್ಲಿ ಪಕ್ಷದ ಹಿರಿಯರಾದ ಶಂಭುಲಿಂಗ ಹೆಗಡೆ, ಹಳಿಯಾಳದ ರಾಜು ಧೂಳಿ, ಸಿದ್ದಾಪುರದ ಕೆ.ಜಿ.ನಾಯ್ಕ ಹಣಜಿಬೈಲ್ ಮತ್ತು ಹೊನ್ನಾವರ ಕೇಶವ ನಾಯ್ಕ ಬಳ್ಕೂರ ಅವರ ಹೆಸರು ಕೇಳಿ ಬರುತ್ತಿದೆ.ಅಧ್ಯಕ್ಷ ಪದವಿಗೆ ಈ ನಾಲ್ವರು ಪ್ರಬಲ ಆಕಾಂಕ್ಷಿಗಳಾಗಿದ್ದು ಕೆ.ಜಿ.ನಾಯ್ಕ ಅವರನ್ನು ಹೊರತುಪಡಿಸಿದರೆ ಉಳಿದ ಮೂವರು ಸಂಸದರಿಗೆ ಆಪ್ತರಾಗಿದ್ದಾರೆ. ಹಾಲಿ ಅಧ್ಯಕ್ಷ ಪ್ರಸಾದ ಕಾರವಾರಕರ್ ಅವರೂ ಸಂಸದರಿಗೆ ಆಪ್ತರು ಎನ್ನುವುದು ಗಮನಾರ್ಹ. ಹೀಗಾಗಿ ಕೆ.ಜಿ.ನಾಯ್ಕ ಅವರು ವಿಶ್ವೇಶ್ವರ ಹೆಗಡೆ ಕಾಗೇರಿಗೆ ಆಪ್ತರಾಗಿದ್ದು ಅವರ ಪರವಾಗಿ ಕಾಗೇರಿ ಬ್ಯಾಟಿಂಗ್ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೂ ಮುನ್ನ ನಗರ, ಗ್ರಾಮೀಣ ಘಟಕದ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಹೊಂದಿರುವ ಕ್ಷೇತ್ರಾಧ್ಯಕ್ಷರ  ಹುದ್ದೆಯ ಬದಲು ಹಿಂದಿನ ಪದ್ಧತಿಯಂತೆ ನಗರ ಮತ್ತು ಗ್ರಾಮೀಣ ಘಟಕಗಳನ್ನು ಪುನಃ ರಚನೆ ಮಾಡಲು ಪಕ್ಷ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಜುಲೈ 5ರೊಳಗೆ ನಗರ ಮತ್ತು ಗ್ರಾಮೀಣ ಘಟಕಗಳ ರಚನೆ ಮಾಡಬೇಕು ಎಂದು ರಾಜ್ಯ ಘಟಕ ಸೂಚನೆ ನೀಡಿದೆ. ಈ ಪ್ರಕ್ರಿಯೆ ಮುಗಿದ ಬಳಿಕವೇ ಜಿಲ್ಲಾ ಘಟಕದ ಅಧ್ಯಕ್ಷ ಆಯ್ಕೆ ನಡೆಯಲಿದೆ. ಹೊಸ ಘಟಕಗಳ ರಚನೆಗೆ ಸಂಬಂಧಿಸಿದಂತೆ ಶಿರಸಿಯಲ್ಲಿ ಈಗಾಗಲೇ ಎಲ್ಲ ಘಟಕದ ಪದಾಧಿಕಾರಿಗಳ ಸಭೆ ಈಚೆಗೆ ನಡೆದಿದೆ ಎನ್ನುವುದು ಉಲ್ಲೇಖನೀಯ.ಸಂಸದರ ಸಭೆ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನಗರ, ಗ್ರಾಮೀಣ ಹಾಗೂ ಜಿಲ್ಲಾ ಘಟಕಗಳ ರಚನೆಯಲ್ಲಿ ಸಂಸದರ ಅನಂತಕುಮಾರ ಹೆಗಡೆ ಹೆಚ್ಚು ಮತುವರ್ಜಿ ವಹಿಸಿದ್ದಾರೆ.ಸೋಮವಾರ ನಗರಕ್ಕೆ ಆಗಮಿಸಿದ ಸಂಸದರು ಕಾರವಾರ, ಅಂಕೋಲಾ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಘಟಕದ ರಚನೆಯ ಕುರಿತು ಪಕ್ಷದ ಹಿರಿಯರು, ನಗರಸಭೆ ಸದಸ್ಯರು ಮತ್ತು ವಿವಿಧ ಘಟಕದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅನಾರೋಗ್ಯದ ಕಾರಣ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸಾದ ಕಾರವಾರಕರ್ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.