ಬುಧವಾರ, ನವೆಂಬರ್ 20, 2019
20 °C

ಬಿಜೆಪಿ- ಜೆಡಿಯು ಭಿನ್ನಮತ ಉಲ್ಬಣ

Published:
Updated:

ನವದೆಹಲಿ: ಜನತಾ ದಳ (ಯು) ಮತ್ತು ಬಿಜೆಪಿಯ ಮಧ್ಯೆ ಭಿನ್ನಾಭಿಪ್ರಾಯ ಸೋಮವಾರ ಉಲ್ಬಣಗೊಂಡಿದ್ದು, ಗುಜರಾತ್ ಮುಖ್ಯಮಂತ್ರಿ ಮೋದಿಯನ್ನು ಟೀಕಿಸಿರುವ ಬಿಹಾರ್ ಮುಖ್ಯಮಮತ್ರಿಯನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಮೋದಿ ಅವರ ಜಾತ್ಯತೀತ ಧೋರಣೆಯ ಬಗ್ಗೆ  ನಿತೀಶ್ ಕುಮಾರ್ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.2002ರ ಗೋದ್ರಾ ಘಟನೆಯ ನಂತರವೂ ಜೆಡಿಯು ಎನ್‌ಡಿಎದಲ್ಲಿ ಮುಂದುವರಿದುಕೊಂಡು ಬಂದಿದೆ ಎನ್ನುವುದನ್ನು ನಿತೀಶ್ ಮರೆಯಬಾರದು ಎಂದು ಬಿಜೆಪಿಯ ವಕ್ತಾರೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ನಿತೀಶ್ ಅವರು ಭಾನುವಾರ, ಮೋದಿ ವಿರುದ್ಧ ಮಾಡಿರುವ ವಾಗ್ದಾಳಿಯಿಂದ ಅವರು ಎನ್‌ಡಿಎಯಿಂದ ಶಾಶ್ವತವಾಗಿ ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬುದು ಬಹುತೇಕ ಮುಖಂಡರ ಅಭಿಪ್ರಾಯವಾಗಿದೆ.ಮೋದಿ ಅವರನ್ನು ಸಮರ್ಥಿಸಿಕೊಂಡಿರುವ ಲೇಖಿ ಅವರು, ಪ್ರಧಾನಿ ಹುದ್ದೆಯ ಅಭ್ಯರ್ಥಿ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಜೆಡಿಯು ಎನ್‌ಡಿಎಯಿಂದ ದೂರವಾಗುವ ಮಾತು ಈಗ ಅಪ್ರಸ್ತುತ ಎಂದಿದ್ದಾರೆ. ಎನ್‌ಡಿಎ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಎಲ್ಲಾ ಮಿತ್ರ ಪಕ್ಷಗಳ ಅಭಿಪ್ರಾಯ ಪಡೆಯಲಾಗುತ್ತದೆ.

ಇದರರ್ಥ ಬಿಜೆಪಿ ಸೈದ್ಧಾಂತಿಕ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತದೆ ಎಂದಲ್ಲ ಎಂದು ತಿಳಿಸಿದ್ದಾರೆ. ಬಿಹಾರ ನಿಯೋಗದ ಆಗ್ರಹ: ನಿತೀಶ್ ಕುಮಾರ್ ಅವರು ಪದೇ ಪದೇ ನರೇಂದ್ರ ಮೋದಿಯನ್ನು ಟೀಕಿಸುತ್ತಿರುವುದರಿಂದ ಜೆಡಿಯು ಜತೆಗಿನ ಸಂಬಂಧವನ್ನು ಕಳಚಿಕೊಳ್ಳುವಂತೆ ಬಿಹಾರದ ಬಿಜೆಪಿ ನಿಯೋಗವು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದೆ.

ಪ್ರತಿಕ್ರಿಯಿಸಿ (+)