ಭಾನುವಾರ, ಮೇ 16, 2021
29 °C

ಬಿಜೆಪಿ ತೊರೆಯಲ್ಲ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಸೇರ್ಪಡೆ ಸುದ್ದಿ ಕೇವಲ ಊಹಾಪೋಹ~ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.ಗದುಗಿಗೆ ತೆರಳಲು ಶುಕ್ರವಾರ ಬೆಳಿಗ್ಗೆ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ವರದಿಗಾರರ ಜೊತೆ ಮಾತನಾಡಿದರು. `ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯಲ್ಲ~ ಎಂದು ಹೇಳಿದರು.`ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರು ಪ್ರಸ್ತಾಪವಾದರೆ ಸಚಿವ ಸಂಪುಟದಿಂದ ಹೊರಗುಳಿಯುವೆ ಎಂದು ಮೊದಲೇ ತಿಳಿಸಿದ್ದೆ. ಹೀಗಾಗಿ ಈಗ ಸಚಿವನಾಗಿ ಅಧಿಕಾರದಲ್ಲಿ ಇಲ್ಲ. ಮುಂದೆ ಆರೋಪ ಮುಕ್ತನಾದರೆ ಮತ್ತೆ ಸಚಿವನಾಗಬಹುದು~ ಎಂದು ತಿಳಿಸಿದರು. ಪಕ್ಷದ ಮುಖಂಡರ ವಿವಿಧ ಪ್ರಕರಣಗಳ ಕುರಿತು ಕೇಳಿದ ಪ್ರಶ್ನೆಗೆ, `ಕೋರ್ಟ್ ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದ್ದು, ಈ ಕುರಿತು ಹೆಚ್ಚೇನು ಹೇಳುವುದಿಲ್ಲ~ ಎಂದು ಶ್ರೀರಾಮುಲು ಉತ್ತರಿಸಿದರು.ಇದೇ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿಳಿದ ಸಚಿವ ಬಸವರಾಜ ಬೊಮ್ಮಾಯಿ, `ಬಿಜೆಪಿ ಎಲ್ಲ ಶಾಸಕರು ಒಟ್ಟಿಗೆ ಇದ್ದು, ಯಾವುದೇ ಭಿನ್ನಾಭಿಪ್ರಾಯ ಇಲ್ಲವೆ ಒಡಕು ಪಕ್ಷದಲ್ಲಿಲ್ಲ. ಸದಾನಂದಗೌಡರ ನಾಯಕತ್ವಕ್ಕೆ ಎಲ್ಲರ ಸಹಮತವಿದ್ದು, ಸರ್ಕಾರ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ~ ಎಂದರು.`ಶ್ರೀರಾಮುಲು ಸೇರಿದಂತೆ ಯಾರೂ ಪಕ್ಷವನ್ನು ತೊರೆಯಲ್ಲ~ ಎಂದೂ ಅವರು ಹೇಳಿದರು. ಈ ಮಧ್ಯೆ ಶ್ರೀರಾಮುಲು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರ ಮನೆಗೆ ಹೋಗಿ ಚರ್ಚೆ ನಡೆಸಿದರು ಎಂಬ ವದಂತಿ ಹರಡಿತ್ತು. ಜೆಡಿಎಸ್ ಮೂಲಗಳು ಈ ವದಂತಿಯನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ಸಭೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.