ಮಂಗಳವಾರ, ನವೆಂಬರ್ 12, 2019
28 °C

`ಬಿಜೆಪಿ ನಾಶಕ್ಕೆ ಬಿಜೆಪಿ ನಾಯಕರೇ ಸಾಕು'

Published:
Updated:

ಗುಲ್ಬರ್ಗ: ಬಿಜೆಪಿ ಸರ್ವನಾಶಕ್ಕೆ ಬಿಜೆಪಿ ನಾಯಕರೇ ಸಾಕು. ಬೇರೆ ಯಾವ ಪಕ್ಷವೂ ಬೇಡ ಎಂದು ಕೆಜೆಪಿ ನಾಯಕಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬಿಜೆಪಿಯಲ್ಲಿ ಯಾದವ ಕಲಹವಿದೆ. ಅನಂತಕುಮಾರ್ ಪಕ್ಷ ನಿಯಂತ್ರಣಕ್ಕೆ ಯತ್ನಿಸಿದರೆ, ಈಶ್ವರಪ್ಪ, ಶೆಟ್ಟರ್ ಅವರ ಆಟಗಳೇ ಬೇರೆ ಎಂದ ಕರಂದ್ಲಾಜೆ, ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ಗೋವಾ, ಬೆಂಗಳೂರು, ಹೈದರಾಬಾದ್‌ನಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯಿತು. ಆಗ ಓಡಾಡಿದವರು ಈ ಮುಖಂಡರ ಬೆಂಬಲಿಗರು. ಬಿಎಸ್‌ವೈ ಅವರನ್ನು ನಾಲ್ಕು ಬಾರಿ ಅಧಿಕಾರದಿಂದ ಇಳಿಸಲು ಯತ್ನಿಸಿದರು. ನಾನು ಮತ್ತು ಬಳಿಗಾರ್ ಹುದ್ದೆ ಬಿಡುವಂತೆ ಮಾಡಿದರು. ಒಂದೇ ಅವಧಿಯಲ್ಲಿ ಎಲ್ಲರೂ ಮುಖ್ಯಮಂತ್ರಿ ಆಗಬೇಕು ಎಂದು ಪ್ರಯತ್ನಿಸಿದರು. ಈ ಕಚ್ಚಾಟವನ್ನು ಅವರು ಈಗಲೂ ಮುಂದುವರಿಸಿದ್ದಾರೆ ಎಂದರು.ಕೆಜೆಪಿ 10 ಸೀಟು ಗೆಲ್ಲುವುದಿಲ್ಲ ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ, ಎಸ್.ಎಂ.ಕೃಷ್ಣ/ ಎಚ್‌ಡಿಕೆ/ ಧರ್ಮಸಿಂಗ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ ನಡೆದ ಗಣಿಗಾರಿಕೆಯ ವರದಿಯನ್ನು ಈ ತನಕ ಕಳುಹಿಸಿಲ್ಲ. ಆದರೆ ಬಿಎಸ್‌ವೈ ಅವಧಿಯ ವರದಿಯನ್ನು ತರಾತುರಿಯಲ್ಲಿ ಕೇವಲ ಮೂರು ದಿನಗಳಲ್ಲಿ ಡಿವಿಎಸ್ ಕಳುಹಿಸಿದರು. ಕೆಜೆಪಿ ಪಕ್ಷ ಸ್ಥಾಪಿಸಿದ ಬಳಿಕವೂ ಈ ಮುಖಂಡರು ಪಿತೂರಿ ನಡೆಸಿದರು. ನಮ್ಮ ಅಭ್ಯರ್ಥಿಗಳನ್ನು ತಡೆಹಿಡಿದರು. ದೇವರು ಅವರನ್ನು ಕ್ಷಮಿಸುವುದಿಲ್ಲ. ಆದರೆ ನಾವು 10ಕ್ಕಿಂತ ಹೆಚ್ಚು ಸೀಟು ಗೆದ್ದರೆ ಶೆಟ್ಟರ್ ರಾಜಕೀಯ ಸನ್ಯಾಸ ಸ್ವೀಕರಿಸುತ್ತಾರೆಯೇ ಎಂದು ಪ್ರಶ್ನಿಸಿದರು.  ಬಿಎಸ್‌ವೈ ಅವರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಿ ಎಂದು ಮನವಿ ಮಾಡಲು 13 ಬಾರಿ ದೆಹಲಿಗೆ ಭೇಟಿ ನೀಡಿದೆ. ಆದರೆ ಹೈಕಮಾಂಡ್ ಸ್ಪಂದಿಸಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲು ಸಿದ್ದರಾಮಯ್ಯ ಮೂರು ದಿನ ಕಾದರು. ದಕ್ಷಿಣದವರ ಬಗ್ಗೆ ಉತ್ತರದಲ್ಲಿ ಗೌರವವಿಲ್ಲ. ನಮ್ಮ ಜನರ ಸಮಸ್ಯೆ ಬಗ್ಗೆ ಕೇಂದ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಧ್ವನಿ ಎತ್ತುತ್ತಿಲ್ಲ. ಇದರಿಂದ ಬೇಸತ್ತು ಬಲವಾದ ಪ್ರಾದೇಶಿಕ ಪಕ್ಷ ಬೇಕು ಎಂಬ ನಿಲುವಿಗೆ ಬಂದಿದ್ದೇವೆ ಎಂದರು.ಪಕ್ಷದಲ್ಲಿ ಜಾತ್ಯತೀತ ಮುಖಂಡರು, ರೈತರು, ಸಾಹಿತಿಗಳು, ಜನಪರ ಹೋರಾಟಗಾರರು, ಶೋಷಿತರು, ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿದ್ದೇವೆ. ಸರ್ಕಾರದ ಹಲವು ಯೋಜನೆಗಳನ್ನು ಮಧ್ಯಮ ವರ್ಗದವರಿಗೂ ವಿಸ್ತರಿಸುತ್ತೇವೆ ಎಂದ ಅವರು, ಬರ-ನೆರೆ ಸಂದರ್ಭ, ಕಾವೇರಿ-ಕೃಷ್ಣಾ ನದಿಗಳ ವಿಷಯದಲ್ಲಿ ಅನ್ಯಾಯವಾದಾಗ ಪ್ರಶ್ನಿಸಲು ಪ್ರಾದೇಶಿಕ ಪಕ್ಷ ಅಗತ್ಯ. ಈ ನಿಟ್ಟಿನಲ್ಲಿ ಕೆಜೆಪಿ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಬಾರಿ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಮೂಡಲಿದೆ ಎಂದರು.ಕಾಂತಾ: ಸಮಾಜಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟ ವ್ಯಕ್ತಿ ಎಸ್.ಕೆ.ಕಾಂತಾ. ಪ್ರಾಮಾಣಿಕ, ಸರಳ, ಜನಪರ ಹೋರಾಟಗಾರಾದ ಅವರ ಗೆಲುವು ಜನತೆಗೆ ಸಲ್ಲುವ ನಿಜವಾದ ಗೌರವ. ಗುಲ್ಬರ್ಗದ ಜನತೆ ಅಂತಹ ಹಿರಿಯ ವ್ಯಕ್ತಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು. ಪಕ್ಷದ ಮುಖಂಡರಾದ ಎಸ್.ಕೆ.ಕಾಂತಾ, ಬಾಬುರಾವ ಚವ್ಹಾಣ, ಡಿ.ಎಂ.ಲಕ್ಷ್ಮೀನಾರಾಯಣ, ಬಸವರಾಜ ಇಂಗಿನ್, ಸುಭಾಷ್ ಬಿರಾದಾರ, ವೈಜನಾಥ ಝಳಕಿ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)