ಶನಿವಾರ, ಅಕ್ಟೋಬರ್ 19, 2019
28 °C

ಬಿಜೆಪಿ ಪಕ್ಷದ ಸಂಘಟನೆಗೆ ಶ್ರಮಿಸಲು ಕರೆ

Published:
Updated:

ಗುಂಡ್ಲುಪೇಟೆ: ಪಕ್ಷದ ಸಂಘಟನೆಗಾಗಿ ಕಾರ್ಯಕರ್ತರು ಶ್ರಮಿಸಬೇಕೆಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಮಂಗಳವಾರ ಕರೆ ನೀಡಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಎಸ್‌ಟಿ ಮೋರ್ಚಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಂಘಟನೆಗಾಗಿ ತೊಡಗಿಸಿ ಕೊಳ್ಳ ಬೇಕೆಂದು ಮನವಿ ಮಾಡಿದರು.ಚುನಾವಣೆಯಲ್ಲಿ ತಾಲ್ಲೂಕಿನ ಜನತೆ ಉತ್ತಮ ಪ್ರತಿಕ್ರಿಯೆ ನೀಡಿ ಅತಿ ಹೆಚ್ಚು ಮತ ನೀಡಿದ್ದರು. ಯುವ ಕಾರ್ಯಕರ್ತರುಗಳ ಅವಿರತ ಶ್ರಮದಿಂದಾಗಿ ಪಕ್ಷ ತಾಲ್ಲೂಕಿನಲ್ಲಿ ಸಂಘಟಿತವಾಗಿದೆ ಎಂದರು.ಈಗ ಎಸ್‌ಸಿ. ಮತ್ತು ಎಸ್‌ಟಿ ಮೋರ್ಚಾಗಳಲ್ಲಿ ಉತ್ತಮ ನಾಯಕರುಗಳಿರುವುದರಿಂದ ಸಂಘಟನೆಗೆ ಅನುಕೂಲವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ನಿಗಮದ ವತಿಯಿಂದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿಯವರ ವಿವೇಚನಾ ಕೋಟಾದಡಿ ತಾಲ್ಲೂಕಿನಲ್ಲಿ 153 ಕೊಳವೆ ಬಾವಿಗಳನ್ನು ಕೊರೆಯಿಸಿ ಕೊಡಲಾಗಿದೆ. ತಾಲ್ಲೂಕಿನ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಸರ್ಕಾರದಿಂದ ದೊರೆಯುವ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ತಾಲ್ಲೂಕಿನಾದ್ಯಂತ ಆಗಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಸರ್ಕಾರದ ಅನುದಾನದಿಂದಾಗಿದೆ, ಕೆರೆಗಳ ಸಂರಕ್ಷಣೆ, ರಸ್ತೆ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರಿನ ಸೌಲಭ್ಯ ಮುಂತಾದ ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದು ಹೇಳಿದರು.ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಕಾರ್ಯಕರ್ತರು ಹಿಂದಿನ ಉತ್ಸಾಹದಿಂದ ಕೆಲಸ ಮಾಡಬೇಕು ಎಂದರು.ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ರಾಜಗೋಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ನಂಜುಂಡಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಹನುಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೈಲೇಶ್, ದೇವಯ್ಯ ಮುಂತಾದವರು ಭಾಗವಹಿಸಿದ್ದರು.

Post Comments (+)