ಬಿಜೆಪಿ ಪಾಲಾದ ಹೊಸದುರ್ಗ ತಾಲ್ಲೂಕು ಪಂಚಾಯ್ತಿ

7

ಬಿಜೆಪಿ ಪಾಲಾದ ಹೊಸದುರ್ಗ ತಾಲ್ಲೂಕು ಪಂಚಾಯ್ತಿ

Published:
Updated:

ಹೊಸದುರ್ಗ: ಇಲ್ಲಿನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೊದಲ ಅವಧಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪವಿತ್ರಮ್ಮ ಹಾಗೂ ಬೋರಮ್ಮ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 20 ಸದಸ್ಯ ಬಲದ ತಾ.ಪಂ.ನಲ್ಲಿ  9 ಸ್ಥಾನಗಳೊಂದಿಗೆ ದೊಡ್ಡಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಜೆಡಿಎಸ್‌ನ ಇಬ್ಬರು ಹಾಗೂ ಒಬ್ಬ ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ್ದರಿಂದ ಒಟ್ಟು12 ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲು ಸಿದ್ದತೆ ನಡೆಸಿಕೊಂಡಿತ್ತು.ಒಟ್ಟು ಆರು ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಪಕ್ಷ ಹಾಗೂ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್ ಬೆಂಬಲಿತ ಇಬ್ಬರು ಪಕ್ಷೇತರ ಸದಸ್ಯರು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಸದೆ ತಟಸ್ಥರಾಗಿ ಉಳಿದರು.ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬೋಕಿಕೆರೆ ಕ್ಷೇತ್ರದ ಸದಸ್ಯೆ ಪವಿತ್ರಮ್ಮ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಜಾನಕಲ್ ಕ್ಷೇತ್ರದ ಸದಸ್ಯೆ ಬೋರಮ್ಮ ನಾಮಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ  ವೆಂಕಟೇಶ್ ಘೋಷಣೆ ಮಾಡಿದರು.ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಡಳಿತ ಹಾಗೂ ವಿರೋಧ ಪಕ್ಷದ  ಸರ್ವ ಸದಸ್ಯರು ಅಭಿನಂಧಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಪವಿತ್ರಮ್ಮ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಸರ್ವ ಸದಸ್ಯರಿಗೂ ಕೃತಜ್ಞತೆ ಅರ್ಪಿಸಿ, ತಾಲ್ಲೂಕು ಪಂಚಾಯ್ತಿಯ ಎಲ್ಲಾ ಕ್ಷೇತ್ರಗಳ ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರ ಸಹಕಾರ ಸಲಹೆ ಪಡೆದು ದುಡಿಯವುದಾಗಿ ಹೇಳಿದರು.ತಹಶೀಲ್ದಾರ್ ಎಂ.ಪಿ. ಮಾರುತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೇದಮೂರ್ತಿ ಮತ್ತಿತರರು ಇದ್ದರು.ವಿಜಯೋತ್ಸವ

ತಾಲ್ಲೂಕು ಪಂಚಾಯ್ತಿ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಸಂಭ್ರಮದಲ್ಲಿದ್ದ ನೂರಾರು ಕಾರ್ಯಕರ್ತರು ತಾ.ಪಂ. ಕಚೇರಿ ಮುಂಭಾಗ ಪಟಾಕಿಸಿಡಿಸಿ ವಿಜಯೋತ್ಸವ ಆಚರಿಸಿದರು.ಚುನಾವಣೆ ಪ್ರಕ್ರಿಯೆ ಪೂರೈಸಿಕೊಂಡು ತಾ.ಪಂ. ಸಭಾಂಗಣದಿಂದ ಹೊರಬಂದ ನೂತನ ಅಧ್ಯಕ್ಷೆ ಪವಿತ್ರಮ್ಮ ಹಾಗೂ ಉಪಾಧ್ಯಕ್ಷ ಬೋರಮ್ಮ ಅವರನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪುಷ್ಪಮಾಲೆ ಅರ್ಪಿಸಿ ಅಭಿನಂದಿಸಿದರು.ತಾ.ಪಂ. ಕಚೇರಿಯಿಂದ ಪಟ್ಟಣದ ಖಾಸಗಿ ಬಸ್‌ನಿಲ್ದಾಣದ ಸಮೀಪವಿರುವ ಬಿಜೆಪಿ ಕಚೇರಿವರೆಗೆ ಮೆರವಣಿಗೆ ಮೂಲಕ ಅಧ್ಯಕ್ಷೆ  ಹಾಗೂ ಉಪಾಧ್ಯಕ್ಷರನ್ನು ಕರೆತರಲಾಯಿತು. ಜಿ.ಪಂ. ಸದಸ್ಯರಾದ ಆರ್. ಹನುಮಂತಪ್ಪ, ಡಿ. ಪರಶುರಾಮಪ್ಪ, ಎಂ. ಲಕ್ಷ್ಮಣ್, ಪುರಸಭೆ ಸದಸ್ಯ ವೃಷಭೇಂದ್ರಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್. ಲಿಂಗಮೂರ್ತಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಆರ್.ಡಿ. ಸೀತಾರಾಂ, ಮುಖಂಡರಾದ ಡಿ. ಗುರುಸ್ವಾಮಿ, ಮರಿದಿಮ್ಮಪ್ಪ, ಬೆಲಗೂರು ನಟರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry