ಶನಿವಾರ, ಜೂನ್ 12, 2021
24 °C

ಬಿಜೆಪಿ ಪ್ರಮಾದಗಳಿಗೆ ಕ್ಷಮೆಯಾಚಿಸಿದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಆದ ಪ್ರಮಾದ ಮತ್ತು ಗೊಂದಲಗಳಿಗೆ ಸಂಬಂಧಿಸಿದಂತೆ ತಾವು ರಾಜ್ಯದ ಕ್ಷಮೆ ಯಾಚಿಸುವುದಾಗಿ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಮಂಗಳವಾರ ಇಲ್ಲಿ ಹೇಳಿದರು.ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್‌ಕ್ಲಬ್‌ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.‘ಕೆಲವರ ಮೇಲಿನ ಆರೋಪ ಇರಬಹುದು ಅಥವಾ ಬೇರೆ ಯಾವುದೇ ರೀತಿಯ ಪ್ರಮಾದಗಳು ಇರ­ಬ­ಹುದು. ಅಂತಹದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಇದನ್ನು ಮುಕ್ತಮನಸ್ಸಿನಿಂದ ಹೇಳುತ್ತಿದ್ದೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ವಿಭ­ಜನೆಯ ಲಾಭ ಪಡೆದು ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಒಂದು ರೀತಿ ಅದಕ್ಕೆ ಲಾಟರಿ ಹೊಡೆದ ಹಾಗೆ ಆಗಿದೆ. ಆದರೆ, ನಮ್ಮ ಹಾಗೆ ಜನಪರವಾದ ಆಡಳಿತ ನೀಡುವಲ್ಲಿ ಈಗಿನ ಸರ್ಕಾರ ವಿಫಲವಾಗಿದೆ. ಅದರ ಲಾಭ ಲೋಕ­ಸಭಾ ಚುನಾ­ವಣೆ­ಯಲ್ಲಿ ಬಿಜೆಪಿಗೆ ಆಗ­ಲಿದೆ’ ಎಂದು ಹೇಳಿದರು.ಸದ್ಯಕ್ಕೆ ಶ್ರೀರಾಮುಲು ಮಾತ್ರ ಬಿಜೆಪಿ ಸೇರಿದ್ದು, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸ­ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಅನ್ನಭಾಗ್ಯ’ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು ಈ ಸಂಬಂಧ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದರು.ಕೆಜೆಪಿಯಲ್ಲಿನ ಶೇ 99ರಷ್ಟು ಮಂದಿ ಬಿಜೆಪಿ ಸೇರಿದ್ದಾರೆ. ಧನಂಜಯಕುಮಾರ್‌ ಸೇರುವುದಕ್ಕೂ ವಿರೋಧ ಇರಲಿಲ್ಲ. ಆದರೆ, ಯಡಿಯೂರಪ್ಪ ಬಿಜೆಪಿ ಸೇರಿದ ನಂತರವೂ ಅಡ್ವಾಣಿ ಸೇರಿದಂತೆ ಇತರ ನಾಯಕರ ಬಗ್ಗೆ ಅವರು ಲಘುವಾಗಿ ಮಾತನಾಡಿದರು. ಸಾಲದೆಂಬಂತೆ ಅದನ್ನು ಸಮರ್ಥಿಸಿಕೊಂಡಿದ್ದರು. ಈ ಕಾರಣದಿಂದ ಅವರ ಸೇರ್ಪಡೆಗೆ ವರಿಷ್ಠರು ಒಪ್ಪಿಗೆ ಸೂಚಿಸಲಿಲ್ಲ ಎಂದು ಹೇಳಿದರು.ಸರ್ಕಾರ ನಡೆಸಲು ಸಾಧ್ಯವಾಗದೆ ಕೇವಲ ಟೀಕೆಗಷ್ಟೆ ಸೀಮಿತವಾಗಿರುವ ಕೇಜ್ರಿವಾಲ್‌ ಅವರಿಗೆ ಬಿಜೆಪಿ ಬಗ್ಗೆ ಮಾತ­ನಾಡುವ ನೈತಿಕತೆ ಇಲ್ಲ. ಅವರ ಸಂಪುಟದಲ್ಲಿ ಯಾರ್‌್್ಯಾರು ಇದ್ದರು ಎಂಬುದು  ಎಲ್ಲ­ರಿಗೂ ಗೊತ್ತಿ­ರುವ ಸಂಗತಿ ಎಂದು ಹೇಳಿ­ದರು.ಮೈಸೂರು ಕ್ಷೇತ್ರ­ದಿಂದ ಪತ್ರಕರ್ತ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೊಟ್ಟಿದ್ದು, ಅದನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.