ಸೋಮವಾರ, ಮೇ 25, 2020
27 °C

ಬಿಜೆಪಿ ಬಂದ್ ವಿಫಲಗೊಳಿಸಲು ಎಚ್‌ಡಿಕೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಪಾಲರ ವಿರುದ್ಧ ಕರ್ನಾಟಕ ಬಂದ್ ಆಚರಿಸಲು ಬಿಜೆಪಿ ಮುಂದಾದರೆ ಅದನ್ನು ಸಂಪೂರ್ಣವಾಗಿ ವಿಫಲಗೊಳಿಸಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅರಮನೆ ಮೈದಾನದಲ್ಲಿ ಗುರುವಾರ ನಡೆದ ಜೆಡಿಎಸ್ ಅಧಿವೇಶನದಲ್ಲಿ ಮಾತನಾಡಿದ ಅವರು, ‘ರಾಜ್ಯಪಾಲರ ವಿರುದ್ಧವೇ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವ ಬಿಜೆಪಿ ಸರ್ಕಾರ ಬೆದರಿಕೆ ತಂತ್ರ ಅನುಸರಿಸುತ್ತಿದೆ’ ಎಂದರು.‘ಭ್ರಷ್ಟಾಚಾರ ಮತ್ತು ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ಕೋರಿರುವ ವಕೀಲರ ಮನವಿಯನ್ನು ರಾಜ್ಯಪಾಲರು ಪುರಸ್ಕರಿಸುತ್ತಾರೆ ಎಂಬ ಹೆದರಿಕೆ ಬಿಜೆಪಿ ಮುಖಂಡರಲ್ಲಿದೆ  ಎಂದು ಟೀಕಿಸಿದರು.ರಾಜ್ಯಪಾಲರು ತಾವು ಹೊಂದಿರುವ ಸಂವಿಧಾನದತ್ತ ಅಧಿಕಾರವನ್ನು ಚಲಾವಣೆ ಮಾಡದಂತೆ ತಡೆಯುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ. ದೇಶದ ಇತಿಹಾಸದಲ್ಲಿ ಯಾವುದೇ ರಾಜ್ಯ ಸರ್ಕಾರವೂ ಇಂತಹ ಕ್ರಮ ಅನುಸರಿಸಿದ ಉದಾಹರಣೆಗಳಿಲ್ಲ ಎಂದು ವಾಗ್ದಾಳಿ ನಡೆಸಿದರು.ತಪ್ಪು ಮಾಡಿಲ್ಲ ಎಂಬ ಧೈರ್ಯ ಇದ್ದರೆ ಯಡಿಯೂರಪ್ಪ ಅವರು ವಕೀಲರ ಮನವಿ ಪುರಸ್ಕರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಬೇಕಿತ್ತು. ಜ.27ರಂದು ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದರೆ ರಾಜ್ಯ ಬಂದ್ ನಡೆಸಲು ಬಿಜೆಪಿ ಮುಂದಾಗಿದೆ. ಆಡಳಿತ ಪಕ್ಷ ಅಂತಹ ಪ್ರಯತ್ನಕ್ಕೆ ಕೈಹಾಕಿದರೆ ಅದನ್ನು ವಿಫಲಗೊಳಿಸಬೇಕು. ಬಿಜೆಪಿ ಸರ್ಕಾರದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಜನಾಂದೋಲನ ನಡೆಸಲು ಸಿದ್ಧರಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.