ಮಂಗಳವಾರ, ಮೇ 18, 2021
31 °C

ಬಿಜೆಪಿ ಬಿಕ್ಕಟ್ಟಿಗೆ ವಾರದಲ್ಲಿ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ, ನಾಯಕತ್ವ ಕುರಿತ ಗೊಂದಲಕ್ಕೆ ಪಕ್ಷದ ಹೈಕಮಾಂಡ್ ಮುಂದಿನ ವಾರ ತೆರೆ ಎಳೆಯುವ ಸಾಧ್ಯತೆಗಳಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಪಕ್ಷದ ಕೆಲ ಮುಖಂಡರ ಅಭಿಪ್ರಾಯ ಸಂಗ್ರಹಿಸಿದರು.ಪಕ್ಷದಲ್ಲಿನ ಭಿನ್ನಮತೀಯ ಚಟುವಟಿಕೆಗಳಿಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ಹೈಕಮಾಂಡ್ ಪ್ರತಿನಿಧಿಯಾಗಿ ಭಾನುವಾರ ನಗರಕ್ಕೆ ಆಗಮಿಸಿರುವ ಪ್ರಧಾನ್, ಹಿರಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ.ಪಕ್ಷದ ಹೈಕಮಾಂಡ್ ಮುಂದಿನ ವಾರ ಎಲ್ಲರಿಗೂ ಒಪ್ಪಿಗೆಯಾಗುವಂತಹ ಸಂಧಾನ ಸೂತ್ರವನ್ನು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಗೊತ್ತಾಗಿದೆ.

ಬೆಳಗಾವಿ, ಚಿತ್ರದುರ್ಗ ಜಿಲ್ಲೆಯ ಪ್ರವಾಸ ಮುಗಿಸಿಕೊಂಡು ಭಾನುವಾರ ರಾತ್ರಿ ನಗರಕ್ಕೆ ಹಿಂತಿರುಗಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು `ಅನುಗ್ರಹ~ ನಿವಾಸದಲ್ಲಿ ಭೇಟಿ ಮಾಡಿದ ಪ್ರಧಾನ್, ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷದ ಸರ್ಕಾರದ ವಿರುದ್ಧವೇ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈಶ್ವರಪ್ಪ ಹಾಗೂ ತಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ~ ಎಂದು ಸದಾನಂದಗೌಡ ಅವರು ಪ್ರಧಾನ್‌ಗೆ ದೂರು ನೀಡಿದ್ದಾರೆ~ ಎಂದು ಆಪ್ತ ಮೂಲಗಳು ತಿಳಿಸಿವೆ.`ಬಹಿರಂಗವಾಗಿ ಯಡಿಯೂರಪ್ಪ ನೀಡುವ ಹೇಳಿಕೆಗಳಿಂದ ಪಕ್ಷ ಮತ್ತು ಸರ್ಕಾರ ಮುಜುಗರಕ್ಕೆ ಒಳಗಾಗು ವಂತಾಗಿದೆ. ಪ್ರತಿಪಕ್ಷಗಳ ಮುಖಂಡರು ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಟೀಕೆ ಮಾಡಲು ಶುರು ಮಾಡಿದ್ದಾರೆ. ಈ ಎಲ್ಲ ವಿಷಯಗಳನ್ನು ಹೈಕಮಾಂಡ್ ಗಮನಕ್ಕೆ ತಂದು ಯಡಿಯೂರಪ್ಪ ಅವರಿಗೆ ಸುಮ್ಮನಿರುವಂತೆ ಸೂಚಿಸಿ~ ಎಂದು ಮನವಿ ಮಾಡಿಕೊಂಡರು ಎನ್ನಲಾಗಿದೆ.ಶಿವಮೊಗ್ಗದಲ್ಲಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ದೂರವಾಣಿ ಮೂಲಕ ಪ್ರಧಾನ್ ಅವರೊಂದಿಗೆ ಚರ್ಚೆ ನಡೆಸಿದ್ದು, ಬಿಜೆಪಿಯಲ್ಲಿನ ಬೆಳವಣಿಗೆಗಳು, ಕೆಲ ನಾಯಕರ ವರ್ತನೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.ಯಡಿಯೂರಪ್ಪ ಅವರ ರೇಸ್    ಕೋರ್ಸ್ ನಿವಾಸಕ್ಕೆ ತೆರಳಿದ್ದ ಪ್ರಧಾನ್, ಸುಮಾರು ಒಂದು ಗಂಟೆ ಕಾಲ ಅವರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, `ತಮ್ಮನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಿ~ ಎಂದು ಒತ್ತಾಯಿಸಿದರು ಎನ್ನಲಾಗಿದೆ.ಸಚಿವರಾದ ಜಗದೀಶ ಶೆಟ್ಟರ್, ಆರ್.ಅಶೋಕ, ಎಸ್.ಸುರೇಶ್‌ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರವಿಂದ ಲಿಂಬಾವಳಿ, ಪಕ್ಷದ ಮುಖಂಡರಾದ ಸತೀಶ್, ಸಂತೋಷ್ ಮೊದಲಾದವರೊಂದಿಗೆ ಪ್ರಧಾನ್ ಭಾನುವಾರ ಚರ್ಚೆ ನಡೆಸಿದ್ದು, ಸೋಮವಾರವೂ ಕೆಲ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.`ವಿಧಾನ ಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇದೆ. ಬಣ ರಾಜಕೀಯ ಮುಂದುವರಿದರೆ ಪಕ್ಷ ಮತ್ತು ಸರ್ಕಾರದ ಮೇಲೆ              ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಆದಷ್ಟು ಬೇಗ ಗೊಂದಲಗಳನ್ನು ಬಗೆಹರಿಸಿ~ ಎಂದು       ಶೆಟ್ಟರ್, ಅಶೋಕ, ಸುರೇಶ್‌ಕುಮಾರ್ ಮೊದಲಾದವರು ಮನವಿ ಮಾಡಿದರು ಎಂದು ತಿಳಿದು ಬಂದಿದೆ.`ನಾವು ಯಾವುದೇ ಗುಂಪಿನ ನಾಯಕರಲ್ಲ, ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೊ, ಅದಕ್ಕೆ ಬದ್ಧರಾಗಿರುತ್ತೇವೆ. ಗೊಂದಲಗಳು ಹೆಚ್ಚು ದಿನ ಮುಂದುವರಿದಷ್ಟು ಪಕ್ಷಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಮೊದಲು ಬಣ ರಾಜಕೀಯಕ್ಕೆ ತೆರೆ ಎಳೆಯಿರಿ~ ಎಂದು ಅಶೋಕ ವಿನಂತಿಸಿದರು ಎಂದು ತಿಳಿದು ಬಂದಿದೆ.ಉತ್ತಮ ಆಡಳಿತ: ಇದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಪ್ರಧಾನ್ ಅವರು `ಸದಾನಂದಗೌಡ ಅವರು ಉತ್ತಮ ಆಡಳಿತ ನೀಡುತ್ತಿದ್ದು, ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. `ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಭೇಟಿ ನೀಡಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾಯಕತ್ವದ ಬಗ್ಗೆಯಾಗಲಿ, ರಾಜಕೀಯ ಬೆಳವಣಿಗೆಗಳ ಕುರಿತಾಗಲಿ ಚರ್ಚೆ ಮಾಡಲು ಬಂದಿಲ್ಲ~ ಎಂದು ಸಮಜಾಯಿಷಿ ನೀಡಿದರು.`ಯಡಿಯೂರಪ್ಪ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಈ ಬಗ್ಗೆ ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ~ ಎಂದು ಪ್ರಧಾನ್ ಹೇಳಿದರು.`ಪಕ್ಷದಲ್ಲಿ ಬಿಕ್ಕಟ್ಟು ಇದೆ ಎಂಬ ಆರೋಪಗಳು ನಿರಾಧಾರ. ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಯಡಿಯೂರಪ್ಪ ಬರಗಾಲಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುವುದರಲ್ಲಿ ತಪ್ಪಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ~ ಎಂದರು.ಬಿಎಸ್‌ವೈ ನಿವಾಸದಲ್ಲಿ ಚರ್ಚೆ: ಪ್ರಧಾನ್ ಅವರು ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಹೊರ ಹೋದ ನಂತರ, ಸಚಿವರಾದ ಉಮೇಶ್ ಕತ್ತಿ, ಸಿ.ಎಂ.ಉದಾಸಿ, ಮುರುಗೇಶ್ ನಿರಾಣಿ, ಸಂಸದರಾದ ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ, ಶಾಸಕರಾದ ಸಿ.ಸಿ.ಪಾಟೀಲ, ಎಸ್.ಆರ್.ವಿಶ್ವನಾಥ್ ಮೊದಲಾದವರು ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದರು.ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆದಿಲ್ಲ, ಪಕ್ಷದಲ್ಲಿನ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಲಿದೆ. ಬರ ಪರಿಸ್ಥಿತಿಯ ಬಗ್ಗೆ ಮಾತ್ರ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿದ್ದಾಗಿ ಸಚಿವ ಉಮೇಶ್ ಕತ್ತಿ ನಂತರ ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.