ಬಿಜೆಪಿ ಮಡಿಲಿಗೆ ಜಿಲ್ಲಾ ಪಂಚಾಯಿತಿ ಅಧಿಕಾರ

7

ಬಿಜೆಪಿ ಮಡಿಲಿಗೆ ಜಿಲ್ಲಾ ಪಂಚಾಯಿತಿ ಅಧಿಕಾರ

Published:
Updated:

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಅಧಿಕಾರದ ಚುಕ್ಕಾಣಿ ನಿರೀಕ್ಷೆಯಂತೆ ಬಿಜೆಪಿ ಮಡಿಲಿಗೆ ಬಿದ್ದಿದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಸದಸ್ಯರೇ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಹುನಗುಂದ ತಾಲ್ಲೂಕಿನ ಕಮತಗಿ ಮತಕ್ಷೇತ್ರ ಪ್ರತಿನಿಧಿಸುವ ಕವಿತಾ ಪ್ರಭಾಕರ ದಡ್ಡೇನವರ ಹಾಗೂ ಉಪಾಧ್ಯಕ್ಷರಾಗಿ ಬಾಗಲಕೋಟೆ ತಾಲ್ಲೂಕಿನ ಮುರನಾಳ ಮತಕ್ಷೇತ್ರದ ಪಕ್ಷೇತರ ಸದಸ್ಯ ಹೂವಪ್ಪ ಸೀತಪ್ಪ ರಾಠೋಡ ತಲಾ 18 ಮತಗಳನ್ನು ಪಡೆದು ಆಯ್ಕೆಯಾದರು.ಚುನಾವಣಾ ಅಧಿಕಾರಿಗಳಾಗಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಿ.ಎಂ. ಸಿರೋಳ, ಆಯ್ಕೆಯನ್ನು ಘೋಷಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಸಿಇಓ ಡಾ.ಜೆ.ಸಿ. ಪ್ರಕಾಶ, ಅಪರ ಜಿಲ್ಲಾಧಿಕಾರಿ ಕಾಶೀನಾಥ ಹೊನಕೇರಿ, ಉಪವಿಭಾಗಾಧಿಕಾರಿ ಗೋವಿಂದ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. 14 ಸದಸ್ಯ ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸಂಗಮ ಮತಕ್ಷೇತ್ರದ ಯಲ್ಲಕ್ಕ ಗಂಗಾಧರ ದೊಡ್ಡಮನಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೆಟಗುಡ್ಡ ಮತಕ್ಷೇತ್ರದ ದುಂಡಪ್ಪ ಸಿದ್ದಪ್ಪ ಮೆಟಗುಡ್ಡ ಸ್ಪರ್ಧಿಸಿದ್ದರು. ಇವರು ತಲಾ 14 ಮತಗಳನ್ನು ಪಡೆದರು.ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕೆ  ಕವಿತಾ ದಡ್ಡೇನವರ, ಕಾಂಗ್ರೆಸ್‌ನಿಂದ ಕೂಡಲಸಂಗಮ ಕ್ಷೇತ್ರದ ಯಲ್ಲಕ್ಕಾ ದೊಡ್ಡಮನಿ, ಗುಡೂರ ಎಸ್.ಸಿ. ಕ್ಷೇತ್ರದ ರೇಣುಕಾ ಮುದಕಪ್ಪ ಶಾಂತಗಿರಿ ಹಾಗೂ ಬಿಜೆಪಿಯ ಲಕ್ಷ್ಮೀಬಾಯಿ ಸತಗೌಡ ನ್ಯಾಮಗೌಡ ನಾಮಪತ್ರ ಸಲ್ಲಿಸಿದರು.  ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮಹಾಂತೇಶ ಮಲ್ಲಯ್ಯ ಹಿಟ್ಟಿನಮಠ, ಪಕ್ಷೇತರ ಅಭ್ಯರ್ಥಿ ಹೂವಪ್ಪ ಸೀತಪ್ಪ ರಾಠೋಡ ಹಾಗೂ ಕಾಂಗ್ರೆಸ್‌ನಿಂದ ದುಂಡಪ್ಪ ಸಿದ್ದಪ್ಪ ಲಿಂಗರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಒಂದು ಹಂತದಲ್ಲಿ ಬಿಜೆಪಿಯ ಸಾವಳಗಿ ಮತಕ್ಷೇತ್ರದ ಲಕ್ಷ್ಮೀಬಾಯಿ ನ್ಯಾಮಗೌಡ ಹಾಗೂ ಪಕ್ಷೇತರ ಅಭ್ಯರ್ಥಿ ಹೂವಪ್ಪ ರಾಠೋಡ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಳ್ಳುವ ಮೂಲಕ ಬಿಜೆಪಿ ನಾಯಕರಲ್ಲಿ ತಳಮಳ ಉಂಟು ಮಾಡಿದರು.ಕೊನೆಯ ಹಂತದಲ್ಲಿ ಪಕ್ಷೇತರ ಅಭ್ಯರ್ಥಿ ಹೂವಪ್ಪ ರಾಠೋಡ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಭರವಸೆ ನೀಡಿ ಬಿಜೆಪಿ ತನ್ನತ್ತ ಸೆಳೆದುಕೊಂಡರು. ಆ ಮೂಲಕ ವಾತಾವರಣ ತಿಳಿಯಾಯಿತು. ಬಿಜೆಪಿಗೆ ಗೆಲುವು ಖಚಿತವಾದ ನಂತರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾಂತೇಶ ಹಿಟ್ಟಿನಮಠ ನಾಮಪತ್ರ ಹಿಂದಕ್ಕೆ ಪಡೆದರು.ಅಭಿನಂದನೆ: ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೂತನ ಅಧ್ಯಕ್ಷ -ಉಪಾಧ್ಯಕ್ಷರನ್ನು ಅಭಿನಂದಿಸಿದರು. ನಂತರ ಮಾತನಾಡಿದ ಅವರು, ಪ್ರಥಮ ಬಾರಿಗೆ ಜಿಲ್ಲಾ ಪಂಚಾಯಿತಿ ಅಧಿಕಾರ ಪಡೆದಿರುವ ಬಿಜೆಪಿ  ಉತ್ತಮ ಆಡಳಿತ ನೀಡುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದೆ  ಎಂದು ಹೇಳಿದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಸಿದ್ದು ಸವದಿ, ಜಿ.ಎಸ್. ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ, ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಕಾರ್ಯದರ್ಶಿ ಸುಭಾಸ ಕೊಠಾರಿ ಉಪಸ್ಥಿತರಿದ್ದರು.‘ಅಭಿವೃದ್ಧಿಗೆ ಒತ್ತು ನೀಡಿ ಕೆಲಸ’

ಆಯ್ಕೆ ಪ್ರಕ್ರಿಯೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕವಿತಾ ದಡ್ಡೇನವರ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿ ಶ್ರಮಿಸುವುದಾಗಿ ಹೇಳಿದರು. ಉಪಾಧ್ಯಕ್ಷ ಹೂವಪ್ಪ ರಾಠೋಡ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ, ಒಳಚರಂಡಿ, ಶೌಚಾಲಯ ಸೌಲಭ್ಯಕ್ಕೆ ಒತ್ತು ನೀಡುವುದಾಗಿ ಹೇಳಿದರು. ‘ಅನಿವಾರ್ಯ ಕಾರಣಗಳಿಂದ ನನಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಈಗ ನನ್ನ ಆಯ್ಕೆಗೆ ಪಕ್ಷದ ಎಲ್ಲರು ಶ್ರಮಿಸಿದ್ದಾರೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry